ಪೇಶಾವರ: ಪಾಕಿಸ್ತಾನದಲ್ಲಿರುವ ಫೇಸ್ಬುಕ್ ಪ್ರಿಯಕರನ್ನು ಭೇಟಿಯಾಗಲೆಂದು ಪಾಕಿಸ್ತಾನಕ್ಕೆ ಹೋಗಿದ್ದ ಭಾರತೀಯ ಮಹಿಳೆ ಅಂಜು ಅಲ್ಲಿ ಆತನನ್ನು ಮದುವೆಯಾಗಿದ್ದಾಳೆ. ಎರಡು ಮಕ್ಕಳ ತಾಯಿ ಅಂಜು ಪ್ರವಾಸಿ ವೀಸಾ ಪಡೆದು ಅಲ್ಲಿಗೆ ಹೋಗಿದ್ದಳು. ಪಾಕಿಸ್ತಾನದ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಪ್ರಕಟಿಸಿದ್ದು ಬುರ್ಖಾ ಧರಿಸಿಕೊಂಡು ಗಂಡನ ಜತೆ ಹೋಗುತ್ತಿರುವ ಚಿತ್ರ ಪತ್ತೆಯಾಗಿದೆ.
34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಅವರ ಮನೆಯಲ್ಲಿ ವಾಸಿಸುತ್ತಿದ್ದಳು. ಅವರು 2019ರಲ್ಲಿ ಫೇಸ್ಬುಕ್ ಮೂಲಕ ಪರಿಚಿತರಾಗಿ ಪ್ರೀತಿಸಲು ಆರಂಭಿಸಿದ್ದಳು. ನಸ್ರುಲ್ಲಾ ಮತ್ತು ಅಂಜು ವಿವಾಹವನ್ನು ಇಂದು ನಡೆಸಲಾಯಿತು. ಇಸ್ಲಾಂಗೆ ಮತಾಂತರಗೊಂಡ ನಂತರ ಸರಿಯಾದ ನಿಕಾಹ್ ನಡೆಸಲಾಯಿತು ಎಂದು ಅಪ್ಪರ್ ದಿರ್ ಜಿಲ್ಲೆಯ ಮೊಹರಾರ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮುಹಮ್ಮದ್ ವಹಾಬ್ ಪಿಟಿಐಗೆ ತಿಳಿಸಿದ್ದಾರೆ. ನಸ್ರುಲ್ಲಾ ಅವರ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ದಿರ್ ಬಾಲಾ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಕಂಡ್ ವಿಭಾಗದ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಮಾತನಾಡಿ, ಅಂಜು ಮತ್ತು ನಸ್ರುಲ್ಲಾ ಅವರ ನಿಕಾಹ್ ದೃಢಪಡಿಸಿಕೊಂಡರು. ಇಸ್ಲಾಂಗೆ ಮತಾಂತರಗೊಂಡ ನಂತರ ಅಂಜುಗೆ ಫಾತಿಮಾ ಎಂದು ಹೆಸರಿಸಲಾಗಿದೆ ಎಂದು ಹೇಳಿದ್ದಾರೆ.
ಜೋಡಿಗೆ ಬಿಗಿ ಭದ್ರತೆ
ಭಾರತೀಯ ಮಹಿಳೆಯನ್ನು ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯದಿಂದ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಇದಕ್ಕೂ ಮುನ್ನ ಸೋಮವಾರ, ನಸ್ರುಲ್ಲಾ ಮತ್ತು ಅಂಜು ಇಬ್ಬರೂ ಬಿಗಿ ಭದ್ರತೆಯ ನಡುವೆ ಊರು ಸುತ್ತಾಡಲು ಹೋಗಿದ್ದರು. ದಿರ್ ಅಪ್ಪರ್ ಜಿಲ್ಲೆಯನ್ನು ಚಿತ್ರಾಲ್ ಜಿಲ್ಲೆಯೊಂದಿಗೆ ಸಂಪರ್ಕಿಸುವ ಸುರಂಗ ಮಾರ್ಗಕ್ಕೆ ಅವರು ಭೇಟಿ ನೀಡಿದ್ದರು. ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಚಿತ್ರಗಳಲ್ಲಿ, ಅಂಜು ಮತ್ತು ನಸ್ರುಲ್ಲಾ ಹಸಿರು ತೋಟದಲ್ಲಿ ಕುಳಿತು ಕೈಗಳನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು.
ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿದ ಮತ್ತು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಅಂಜು, ಸಣ್ಣ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು “ಇಲ್ಲಿ ಸುರಕ್ಷಿತವಾಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : Seema Haider: ಪೌರತ್ವಕ್ಕಾಗಿ ನಟ ಅಕ್ಷಯ್ ಕುಮಾರ್ ಉದಾಹರಣೆ ಕೊಟ್ಟ ಸೀಮಾ; ಲೈಲಾ-ಮಜ್ನು ಲವ್ ಎಂದ ಮಹಿಳೆ
ನಾನು ಕಾನೂನುಬದ್ಧವಾಗಿ ಮತ್ತು ಯೋಜನೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ ಎಂಬ ಸಂದೇಶವನ್ನು ಎಲ್ಲರಿಗೂ ನೀಡಲು ನಾನು ಬಯಸುತ್ತೇನೆ. ನಾನು ಇಲ್ಲಿಗೆ ಬಂದು ಎರಡು ಹಲವು ದಿನಗಳಾಗಿವೆ. ನಾನು ಸುರಕ್ಷಿತವಾಗಿದ್ದೇನೆ ಎಂದು ಅವರು ವೀಡಿಯೊದಲ್ಲಿ ತಿಳಿಸಿದ್ದಾರೆ. ನನ್ನ ಸಂಬಂಧಿಕರು ಮತ್ತು ಮಕ್ಕಳಿಗೆ ಕಿರುಕುಳ ನೀಡದಂತೆ ನಾನು ಎಲ್ಲಾ ಮಾಧ್ಯಮ ವ್ಯಕ್ತಿಗಳನ್ನು ವಿನಂತಿಸುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ. ಅಂಜು ರಾಜಸ್ಥಾನ ಮೂಲದ ಅರವಿಂದ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ.
ವೀಸಾ ಮೂಲಕ ಪ್ರಯಾಣ ಮಾಡಿದ್ದ ಅಂಜು
ಅಂಜು ಭಾರತದಿಂದ ವಾಘಾ-ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ಕಾನೂನುಬದ್ಧವಾಗಿ ಪ್ರಯಾಣಿಸಿದ್ದರು. ನವದೆಹಲಿಯ ಪಾಕಿಸ್ತಾನದ ಹೈಕಮಿಷನ್ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ, ಅಂಜುಗೆ 30 ದಿನಗಳ ವೀಸಾ ನೀಡಲಾಗಿದೆ. ಅವರನ್ನು ಮದುವೆಯಾದ ನಸ್ರುಲ್ಲಾ ಶೆರಿಂಗಲ್ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವೀಧರರಾಗಿದ್ದು, ಐದು ಸಹೋದರರಲ್ಲಿ ಕಿರಿಯರು.
ಈ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭಾರತೀಯ ಮಹಿಳೆಯ ಪ್ರಯಾಣದ ದಾಖಲೆಗಳು ಕ್ರಮಬದ್ಧವಾಗಿರುವುದು ಕಂಡುಬಂದಿದೆ. ಅದಕ್ಕಾಗಿ ನಸ್ರುಲ್ಲಾ ಅವರೊಂದಿಗೆ ಉಳಿಯಲು ಅವಕಾಶ ನೀಡಲಾಗಿದೆ.
ಅಂಜು ಪ್ರೀತಿಗಾಗಿ ನವದೆಹಲಿಯಿಂದ ಪಾಕಿಸ್ತಾನಕ್ಕೆ ಬಂದಿದ್ದಾಳೆ. ಇಲ್ಲಿ ಸಂತೋಷದಿಂದ ವಾಸಿಸುತ್ತಿದ್ದಾಳೆ ಎಂದು ಖಾನ್ ಜಿಯೋ ನ್ಯೂಸ್ಗೆ ತಿಳಿಸಿದ್ದಾರೆ.
ಅಂಜು ಅವರ ಘಟನೆಯು ಸೀಮಾ ಗುಲಾಮ್ ಹೈದರ್ ಅವರ ಪ್ರಕರಣವನ್ನು ಹೋಲುತ್ತದೆ. ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ 2019ರಲ್ಲಿ ಪಬ್ಜಿ ಆಡುವಾಗ ಸಂಪರ್ಕಕ್ಕೆ ಬಂದ ಹಿಂದೂ ವ್ಯಕ್ತಿ ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಭಾರತಕ್ಕೆ ನುಸುಳಿದ್ದರು. ಸೀಮಾ (30) ಮತ್ತು ಸಚಿನ್ (22) ದೆಹಲಿ ಬಳಿಯ ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.