ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಎಲ್ಲರೂ ಲಕ್ಷದ್ವೀಪಕ್ಕೆ ಬನ್ನಿ ಎಂದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂದು ಕರೆ ನೀಡಿದ್ದಕ್ಕೆ ಭಾರತ ಹಾಗೂ ಮೋದಿ (Narendra Modi) ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ ಮಾಲ್ಡೀವ್ಸ್ ವಿರುದ್ಧ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಲ್ಡೀವ್ಸ್‌ಗೆ ಹೊರಟಿದ್ದ ಭಾರತೀಯರು ಟ್ರಿಪ್ ರದ್ದುಗೊಳಿಸಿದ್ದಾರೆ. ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಎಂಬ ಅಭಿಯಾನ ಶುರುವಾಗಿದೆ. ಇದರಿಂದ ಬೆಚ್ಚಿಬಿದ್ದಿರುವ ಮಾಲ್ಡೀವ್ಸ್ ಈಗ ಭಾರತದ ಕ್ಷಮೆಯಾಚಿಸಿದೆ.
ಎನ್‌ಡಿಟಿವಿ ಜತೆ ಮಾಲ್ಡೀವ್ಸ್ ಸಂಸದೆ, ಮಾಜಿ ಡೆಪ್ಯೂಟಿ ಸ್ಪೀಕರ್ ಆಗಿರುವ ಇವಾ ಅಬ್ದುಲ್ಲಾ (Eva Abdulla) ಅವರು ಮಾತನಾಡಿದ್ದು, ಇದೇ ವೇಳೆ ಅವರು ಭಾರತದ ಕ್ಷಮೆಯಾಚಿಸಿದ್ದಾರೆ. “ಭಾರತದ ಕುರಿತು ಮಾಲ್ಡೀವ್ಸ್ ಸಚಿವರು ನೀಡಿದ ಹೇಳಿಕೆಯು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಜನಾಂಗೀಯ ನಿಂದನೆಯೂ ಆಗಿದೆ. ಇದಕ್ಕಾಗಿ ಭಾರತೀಯರು ಆಕ್ರೋಶ ವ್ಯಕ್ತಪಡಿಸುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳಿದ್ದಾರೆ.
“ಭಾರತದ ಬಗ್ಗೆ ಮಾಲ್ಡೀವ್ಸ್ ಸಚಿವರು ಹೇಳಿಕೆ ನೀಡಿದ ಮಾತ್ರಕ್ಕೆ ಭಾರತದ ಬಗ್ಗೆ ಮಾಲ್ಡೀವ್ಸ್ ಜನರಿಗೆ ಇರುವ ಗೌರವ ಕಡಿಮೆಯಾಗುವುದಿಲ್ಲ. ಆದರೆ, ಉದ್ಧಟತನದ ಹೇಳಿಕೆ ನೀಡಿರುವುದಕ್ಕೆ ನಾವು ಭಾರತದ ಕ್ಷಮೆಯಾಚಿಸುತ್ತೇವೆ. ಭಾರತೀಯರ ಆಕ್ರೋಶವನ್ನು ಗೌರವಿಸುತ್ತೇವೆ. ಆದರೆ, ಭಾರತೀಯರು ಕೂಡಲೇ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ನಿಲ್ಲಿಸಬೇಕು” ಎಂದು ಮನವಿ ಮಾಡಿದ್ದಾರೆ.
ಮಾಲ್ಡೀವ್ಸ್ ರಾಯಭಾರಿಗೆ ಭಾರತ ಸಮನ್ಸ್
ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ, ಭಾರತ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೂವರು ಸಚಿವರು ಆರೋಪಿಸಿದ ಹಿನ್ನೆಲೆಯಲ್ಲಿ ಭಾರತವು ಮಾಲ್ಡೀವ್ಸ್ ರಾಯಭಾರಿಗೆ ಸಮನ್ಸ್ ನೀಡಿದೆ. ಆ ಮೂಲಕ ಮಾಲ್ಡೀವ್ಸ್ ಮೇಲೆ ಒತ್ತಡ ಹೇರಲು ಮುಂದಾಗಿದೆ.
ಇದನ್ನೂ ಓದಿ: Boycott Maldives ಟ್ರೆಂಡ್ ಆಗಿದ್ದೇಕೆ? ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಭಾರತೀಯರು!
“ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ಅನ್ನು ಟಾರ್ಗೆ ಮಾಡುತ್ತಿದೆ. ಬೀಚ್ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮಾಲ್ಡೀವ್ಸ್ ಸಚಿವ ಅಬ್ದುಲ್ಲಾ ಮಹ್ಜೂಮ್ ಮಾಜಿದ್ ಪೋಸ್ಟ್ ಮಾಡಿದ್ದರು. ಮತ್ತೊಬ್ಬ ಸಹಾಯಕ ಸಚಿವೆ ಮರಿಯಮ್ ಶಿವುನಾ, “ಇಸ್ರೇಲ್ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರು ಲೈಫ್ ಜಾಕೆಟ್ ಧರಿಸಿ ಜಿಗಿಯುತ್ತಾರೆ” ಎಂದು ಉದ್ಧಟತನದ ಪೋಸ್ಟ್ ಮಾಡಿದ್ದರು. ಇದೇ ಕಾರಣಕ್ಕೆ ಈಗ ಮೂವರು ಸಚಿವರನ್ನು ಮಾಲ್ಡೀವ್ಸ್ ಅಮಾನತುಗೊಳಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ