Site icon Vistara News

G20 Summit 2023: ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆ ಅನಾವರಣ!

Indias architectural heritage shines at G20 Summit 2023

ನವದೆಹಲಿ: ಜಿ20 ಶೃಂಗ ಸಭೆಯ (G20 Summit 2023) ವೇಳೆ ಭಾರತೀಯ ಹಿರಿಮೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಜಗತ್ತಿನ ಮುಂದೆ ಅನಾವರಣ ಮಾಡುವಲ್ಲಿ ಭಾರತವು (India) ಯಶಸ್ವಿಯಾಗಿದೆ. ಜಿ20 ಶೃಂಗ ನಡೆದ ಭಾರತ್ ಮಂಟಪದಲ್ಲಿ(Bharat Mantapam) ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಪ್ರತಿಬಿಂಬಿಸಲಾಗಿತ್ತು(architectural heritage). ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು(Rashtrapati Draupadi Murmu) ಅವರು ವಿದೇಶಿ ನಾಯಕರನ್ನು ಸ್ವಾಗತಿಸುವಾಗ, ಅವರ ಹಿನ್ನೆಲೆಯಲ್ಲಿ ಕೋನಾರ್ಕ್ ಚಕ್ರ (konark wheel) ಮತ್ತು ನಳಂದಾ ವಿಶ್ವವಿದ್ಯಾಲಯ (Nalanda University) ಪ್ರತಿಕೃತಿಗಳು ಗಮನ ಸೆಳೆದವು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗಂತೂ ಪ್ರಧಾನಿ ಮೋದಿ ಕೊನಾರ್ಕ್ ಚಕ್ರದ ಬಗ್ಗೆ ಮಾಹಿತಿಯನ್ನೇ ನೀಡಿದ್ದು ವಿಶೇಷವಾಗಿತ್ತು.

ನಳಂದ ವಿಶ್ವವಿದ್ಯಾನಿಲಯವು ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಅತಿಥಿಗಳನ್ನು ಸ್ವಾಗತಿಸುವಾಗ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಕೆಲವು ಜಿ20 ನಾಯಕರಿಗೆ ವಿಶ್ವವಿದ್ಯಾನಿಲಯದ ಮಹತ್ವದ ಬಗ್ಗೆ ಪ್ರಧಾನಿ ವಿವರಿಸಿದರು. ನಳಂದ ವಿಶ್ವವಿದ್ಯಾನಿಲಯವು ವೈವಿಧ್ಯತೆ, ಅರ್ಹತೆ, ಚಿಂತನೆಯ ಸ್ವಾತಂತ್ರ್ಯ, ಸಾಮೂಹಿಕ ಆಡಳಿತ, ಸ್ವಾಯತ್ತತೆ ಮತ್ತು ಜ್ಞಾನ ಹಂಚಿಕೆಯನ್ನು ಪ್ರತಿನಿಧಿಸುತ್ತದೆ. ಇವೆಲ್ಲವೂ ಪ್ರಜಾಪ್ರಭುತ್ವದ ಮೂಲ ತತ್ವಗಳೊಂದಿಗೆ ಹೊಂದಿಕೊಳ್ಳುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.

ಸಂಜೆಯ ಔತಣಕೂಟದ ವೇಳೆ ನಳಂದಾ ಪ್ರತಿಕೃತಿಯು ಹಿನ್ನೆಲೆಯಲ್ಲಿ ಎದ್ದು ಕಂಡರೆ, ಭಾರತ್ ಮಂಟಪದಲ್ಲಿ ಶೃಂಗಸಭೆಯ ಆರಂಭದ ಮೊದಲು ಪ್ರಧಾನ ಮಂತ್ರಿ ಜಿ20 ನಾಯಕರನ್ನು ಸ್ವಾಗತಿಸಿದಾಗ, ಅವರಿದ್ದ ಜಾಗದ ಹಿನ್ನೆಲೆಯಲ್ಲಿ ಒಡಿಶಾದ ಕೊನಾರ್ಕ್ ದೇವಾಲಯದಲ್ಲಿರುವ ಕೊನಾರ್ಕ್ ಚಕ್ರದ ಪ್ರತಿಕೃತಿಯು ಎಲ್ಲರ ಗಮನ ಸೆಳೆಯಿತು.

ಈ ಸುದ್ದಿಯನ್ನೂ ಓದಿ : G20 Summit 2023: ಸಿರಿಧಾನ್ಯ ಭಕ್ಷ್ಯಗಳಿಗೆ ಬ್ರಿಟನ್ ಪಿಎಂ ಪತ್ನಿ ಅಕ್ಷತಾ ಮೂರ್ತಿ ಫುಲ್ ಫಿದಾ!

ಸೂರ್ಯ ದೇವಾಲಯವು ಸೂರ್ಯನ ರಥ ಎಂದೇ ಹೇಳಲಾಗುತ್ತದೆ. ಸುಮಾರು 24 ಚಕ್ರಗಳನ್ನು ಬಳಸಿ ದೇವಾಲಯವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬಂಗಾಳ ಕೊಲ್ಲಿಯ ತೀರದಲ್ಲಿರುವ ಕ್ಲೊರೈಟ್‌ ಹಾಗೂ ಮರಳುಗಲ್ಲುಗಳನ್ನು ಬಳಸಿ, 12 ವರ್ಷ ಶ್ರಮ ವಹಿಸಿ ಇವುಗಳನ್ನು ನಿರ್ಮಿಸಲಾಗಿದೆ. ಸುಮಾರು 1,200 ಕುಶಲಕರ್ಮಿಗಳ ಶ್ರಮವು ಕೊನಾರ್ಕ್‌ ಚಕ್ರಗಳ ಕೆತ್ತನೆಯಲ್ಲಿ ಅಡಗಿದೆ.

ಕೊನಾರ್ಕ್‌ ಚಕ್ರಗಳನ್ನು ಚಲನಶೀಲತೆ, ಕಾಲಚಕ್ರ, ವಾಸ್ತುಶಿಲ್ಪ ಕಲೆಯ ಚಾಣಾಕ್ಷತನ ಎಂಬಂತೆ ಬಿಂಬಿಸಲಾಗುತ್ತದೆ. ಹಾಗೆಯೇ, ಇದನ್ನು ”ಜೀವನ ಚಕ್ರ” ಎಂದೂ ಹೇಳಲಾಗತ್ತದೆ. ಇದು ಪ್ರಜಾಪ್ರಭುತ್ವ ಚಕ್ರದ ಸಂಕೇತವೂ ಆಗಿರುವುದರಿಂದ ಅದರ ಪ್ರತಿಕೃತಿಯನ್ನು ಭಾರತ ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಕೊನಾರ್ಕ್‌ ಚಕ್ರವು 9 ಅಡಿ ಸುತ್ತಳತೆಯನ್ನು ಹೊಂದಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version