Site icon Vistara News

India’s GDP : ಭಾರತದ ಜಿಡಿಪಿ ಈಗ 3.75 ಲಕ್ಷ ಕೋಟಿ ಡಾಲರ್‌ಗೆ ಏರಿಕೆ, 2014ರಲ್ಲಿ ಎಷ್ಟಿತ್ತು?

gdp

ನವ ದೆಹಲಿ: ಕಳೆದ 2014ರಲ್ಲಿ 2 ಲಕ್ಷ ಕೋಟಿ ಡಾಲರ್‌ನಷ್ಟಿದ್ದ ಭಾರತದ ಜಿಡಿಪಿ ಮೌಲ್ಯ 2023ರಲ್ಲಿ 3.75 ಲಕ್ಷ ಕೋಟಿ ಡಾಲರ್‌ಗೆ (India’s GDP) ಏರಿಕೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ತಿಳಿಸಿದ್ದಾರೆ. ಜಾಗತಿಕ ಎಕಾನಮಿಯಲ್ಲಿ ಭಾರತ bright spot ಆಗಿ ಹೊರಹೊಮ್ಮಿದೆ. ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಕಳೆದ ವರ್ಷ ಬ್ರಿಟನ್‌ ಅನ್ನು ಭಾರತ ಹಿಂದಿಕ್ಕಿತ್ತು. ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ಬಳಿಕ ಜಗತ್ತಿನ ದೊಡ್ಡ ಆರ್ಥಿಕತೆ ಭಾರತದ್ದಾಗಿದೆ. ದಶಕದ ಹಿಂದೆ ಭಾರತ 11ನೇ ಸ್ಥಾನದಲ್ಲಿತ್ತು ಎಂದು ಅವರು ವಿವರಿಸಿದ್ದಾರೆ.

ಭಾರತವು 2022-23ರ ನಾಲ್ಕನೇ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಬೆಳವಣಿಗೆ ದಾಖಲಿಸಿದೆ. 6.1% ಜಿಡಿಪಿ ಪ್ರಗತಿಯನ್ನು ದಾಖಲಿಸಿದೆ. ಹಲವಾರು ಸವಾಲುಗಳ ಎದುರೂ ದೇಶದ ಎಕಾನಮಿ ಪ್ರಗತಿಯ ಪಥದಲ್ಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ನ್ಯಾಶನಲ್‌ ಸ್ಟಾಟಿಸ್ಟಿಕಲ್‌ ಆಫೀಸ್‌ (NSO) ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ಜಿಡಿಪಿ 6.1 % ಏರಿಕೆಯಾಗಿದೆ. 2022-23ರಲ್ಲಿ 7.2% ಜಿಡಿಪಿ ಬೆಳವಣಿಗೆ ನಿರೀಕ್ಷಿಸಲಾಗಿದೆ.

ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜು ಕಳೆದ 2022-23ರಲ್ಲಿ ನಿರೀಕ್ಷೆ ಮೀರಿ 7%ಕ್ಕೆ ಏರಿಕೆಯಾಗಿದೆ. ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 6.1%ಕ್ಕೆ ವೃದ್ಧಿಸಿದೆ. 2022-23ರ ಸಾಲಿನಲ್ಲಿ ವಿತ್ತೀಯ ಕೊರತೆ ಜಿಡಿಪಿಯ 6.4%ರಷ್ಟಿದ್ದು, ಸರ್ಕಾರದ ವಿತ್ತೀಯ ನಿಯಂತ್ರಣ ಗುರಿಯ ಒಳಗೆಯೇ ಇದೆ. ವಿತ್ತೀಯ ಕೊರತೆ 1.34 ಲಕ್ಷ ಕೋಟಿ ರೂ.ಗಳಷ್ಟಿತ್ತು. ಕಳೆದ 2021-22ರ ಸಾಲಿಗೆ ಹೋಲಿಸಿದರೆ ವಿತ್ತೀಯ ಕೊರತೆಯ ನಿಯಂತ್ರಣದಲ್ಲಿ ಸುಧಾರಣೆಯಾಗಿದೆ. ಆಗ ವಿತ್ತೀಯ ಕೊರತೆ 6.7% ಇತ್ತು. ಈಗ 6.4%ಕ್ಕೆ ಇಳಿಕೆಯಾಗಿದೆ. ವಿತ್ತೀಯ ಕೊರತೆಯನ್ನು 2025-26ರ ವೇಳೆಗೆ ಜಿಡಿಪಿಯ 4.5% ಒಳಗೆ ನಿಯಂತ್ರಿಸುವ ಗುರಿಯನ್ನು ಸರ್ಕಾರ ಹೊಂದಿದೆ. 2023-24ರಲ್ಲಿ 5.9%ಕ್ಕೆ ತಗ್ಗಿಸುವ ಉದ್ದೇಶ ಹೊಂದಿದೆ. ವಿತ್ತೀಯ ಕೊರತೆಯನ್ನು ಭರಿಸಲು ಸರ್ಕಾರ ಹಣಕಾಸು ಮಾರುಕಟ್ಟೆಯಿಂದ ಸಾಲ ಮಾಡಿದೆ. ಜಿಡಿಪಿ ಬೆಳವಣಿಗೆಯು 2020-21ರಲ್ಲಿ 8.7%, 2021-22ರಲ್ಲಿ 9.1% ಏರಿಕೆಯಾಗಿತ್ತು.

ವಿಶ್ವ ಬ್ಯಾಂಕ್‌ (world Bank) 2023-24ರ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು 6.6% ರಿಂದ 6.4%ಕ್ಕೆ ಇಳಿಸಿತ್ತು. ಹಣದುಬ್ಬರವನ್ನು ತಗ್ಗಿಸುವ ಸಲುವಾಗಿ ಆರ್‌ಬಿಐ ಕಳೆದ ಮೇಯಿಂದ ಬಡ್ಡಿ ದರದಲ್ಲಿ 2.50% ಏರಿಸಿದೆ. ಇದರ ಪರಿಣಾಮ ಸಾಲದ ಬಡ್ಡಿ ದರಗಳು ಏರಿಕೆಯಾಗಿದೆ. ಇದು ಬೆಳವಣಿಗೆಯ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ವಬ್ಯಾಂಕ್‌ ಅಭಿಪ್ರಾಯಪಟ್ಟಿತ್ತು. ಜನವರಿ-ಮಾರ್ಚ್‌ ಅವಧಿಯಲ್ಲಿ ಸೇವಾ ವಲಯ 6.3% ಪ್ರಗತಿ ದಾಖಲಿಸಿತ್ತು.

ಸಾಲದ ಬಡ್ಡಿ ದರ ಏರಿಕೆಯಾದಾಗ ಜನ ಖರ್ಚು ವೆಚ್ಚಗಳ ಮೇಲೆ ಹಿಡಿತ ಮಾಡುತ್ತಾರೆ. ಇದು ಬೇಡಿಕೆಯನ್ನು ತಗ್ಗಿಸಿ ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಆದರೆ ಇದೇ ಸಂದರ್ಭ ಆರ್ಥಿಕ ಚಟುವಟಿಕೆಗಳೂ ಮಂದಗತಿಯಲ್ಲಿರುವಂತೆ ಮಾಡುತ್ತದೆ. ಖಾಸಗಿ ವೆಚ್ಚದ ಮೇಲೆ ಪ್ರತಿಕೂಲ ಪ್ರಭಾವ ಬೀರುವುದರಿಂದ ಆರ್ಥಿಕ ಬೆಳವಣಿಗೆ ಕೂಡ ನಿಧಾನಗತಿ ಪಡೆಯಬಹುದು ಎಂದು ಬ್ಯಾಂಕ್‌ ತಿಳಿಸಿದೆ.

2022-23ರಲ್ಲಿ 6.9% ಜಿಡಿಪಿ ಬೆಳವಣಿಗೆಯನ್ನು ವರ್ಲ್ಡ್‌ ಬ್ಯಾಂಕ್‌ ಅಂದಾಜಿಸಿತ್ತು. ಪ್ರಸಕ್ತ ಸಾಲಿನಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ 2.1%ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಸಂಭವಿಸಿರುವ ಬ್ಯಾಂಕಿಂಗ್‌ ಬಿಕ್ಕಟ್ಟು ಭಾರತದ ಮೇಲೆ ಸೀಮಿತ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು. ಆದರೆ ಭಾರತದ ಬ್ಯಾಂಕಿಂಗ್‌ ವಲಯ ಸುಭದ್ರವಾಗಿದೆ ಎಂದು ವಿಶ್ವಬ್ಯಾಂಕ್‌ ವಿವರಿಸಿತ್ತು.

ಇದನ್ನೂ ಓದಿ: India GDP Q4 Growth : 2022-23ರಲ್ಲಿ ಭಾರತದ ಜಿಡಿಪಿ 7.2%ಕ್ಕೆ ಏರಿಕೆ

Exit mobile version