Site icon Vistara News

Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

Ayodhya

ಅಯೋಧ್ಯೆ: ರಾಮಮಂದಿರ ನಿರ್ಮಾಣವಾದ ಬಳಿಕ ಅಯೋಧ್ಯೆಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನ ವಿಮಾನಗಳಲ್ಲಿ ಪ್ರಯಾಣಿಸಿ ಅಯೋಧ್ಯೆ ತಲುಪುತ್ತಿದ್ದಾರೆ. ಶ್ರೀರಾಮನ ದರ್ಶನ ಪಡೆಯಲು ಜನ ಭಕ್ತಿ-ಭಾವದಿಂದ ಅಯೋಧ್ಯೆಗೆ ಆಗಮಿಸುತ್ತಾರೆ. ಜನಸಾಮಾನ್ಯರು ಮಾತ್ರವಲ್ಲ, ವಿಮಾನದ ಸಿಬ್ಬಂದಿಗೂ ರಾಮಮಂದಿರ, ಅಯೋಧ್ಯೆಯ ಮೇಲೆ ವಿಶೇಷ ಗೌರವ ಇದೆ. ಇದಕ್ಕೆ ನಿದರ್ಶನ ಎಂಬಂತೆ, ಆಕಾಂಕ್ಷಾ ಪಾರ್ಮರ್‌ ಎಂಬ ಇಂಡಿಗೋ ವಿಮಾನದ ಗಗನಸಖಿಯು ವಿಮಾನ ಅಯೋಧ್ಯೆ ತಲುಪುತ್ತಲೇ, ಕೆಳಗೆ ಇಳಿದು ನೆಲಕ್ಕೆ ನಮಸ್ಕಾರ ಮಾಡಿದ್ದಾರೆ. ರಾಮನ ಕಾರಣಕ್ಕಾಗಿ ಅಯೋಧ್ಯೆ ಪುಣ್ಯಭೂಮಿ ಎಂದು ಅವರು ಭಕ್ತಿ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ.

ಇಂಡಿಗೋ ವಿಮಾನದಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್‌ ಅವರು ವಿಮಾನ ಇಳಿಯುತ್ತಲೇ ಡಾಂಬರ್‌ ಇದ್ದರೂ ಭೂಮಿಗೆ ನಮಸ್ಕಾರ ಮಾಡಿದ್ದಾರೆ. ಇದಾದ ಬಳಿಕ ರಾಮಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಅಯೋಧ್ಯೆಯ ಭೂಮಿಗೆ ನಮಸ್ಕಾರ ಮಾಡುವುದು ಹೆಮ್ಮೆ ಅನಿಸುತ್ತಿದೆ. ಹಿಂದು ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಜೈ ಶ್ರೀರಾಮ್”‌ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಆಕಾಂಕ್ಷಾ ಅವರ ವಿಡಿಯೊವನ್ನು ಉದ್ಯಮಿ ಮೋಹನ್‌ದಾಸ್‌ ಪೈ ಹಂಚಿಕೊಂಡಿದ್ದಾರೆ. ಅಲ್ಲದೆ, ಆಕಾಂಕ್ಷಾ ಹಾಗೂ ಇಂಡಿಗೋ ಬಗ್ಗೆ ಹೆಮ್ಮೆ ಎನಿಸುತ್ತದೆ. ಭಗವಾನ್‌ ಶ್ರೀರಾಮನು 500 ವರ್ಷಗಳ ಬಳಿಕ ಅಯೋಧ್ಯೆಗೆ ಬಂದಿದ್ದು, ಅಂತಹ ರಾಮನನ್ನು ಆರಾಧಿಸುವ ಉದ್ಯೋಗಿಯನ್ನು ಹೊಂದಿರುವುದಕ್ಕೆ ಸಂಸ್ಥೆಯು ಹೆಮ್ಮೆಪಡಬೇಕು” ಎಂಬುದಾಗಿ ಮೋಹನ್‌ದಾಸ್‌ ಪೈ ಅವರು ಒಕ್ಕಣೆ ಬರೆದುಕೊಂಡಿದ್ದಾರೆ.

ವಿವಾದ ಉಂಟಾಗಿದ್ದೇಕೆ?

ಇಂಡಿಗೋ ವಿಮಾನದ ಸಿಬ್ಬಂದಿಯು ಅಯೋಧ್ಯೆ ಭೂಮಿಗೆ ನಮಸ್ಕಾರ ಮಾಡಿರುವ ವಿಡಿಯೊ ಹಂಚಿಕೊಂಡು, ಮೆಚ್ಚುಗೆಯ ಮಾತುಗಳನ್ನು ಆಡಿದ ಮೋಹನ್‌ದಾಸ್‌ ಪೈ ಹಾಗೂ ಗಗನಸಖಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದೆಲ್ಲ ಗಿಮಿಕ್‌, ರೀಲ್ಸ್‌ಗಾಗಿ ಇಂತಹ ವಿಡಿಯೊ ಮಾಡುತ್ತಾರೆ, ಮೊದಲೇ ಪ್ಲಾನ್‌ ಮಾಡಿ, ರೆಕಾರ್ಡ್‌ ಮಾಡಿದ ವಿಡಿಯೊ ಇದು, ಇಂತಹ ನಾಟಕದ ವಿಡಿಯೊವನ್ನು ಮೋಹನ್‌ ದಾಸ್‌ ಪೈ ಬೆಂಬಲಿಸಬಾರದು, ಅಷ್ಟೊಂದು ಭಕ್ತಿ ಇದ್ದರೆ ದೇವಾಲಯಕ್ಕೆ ಹೋಗಲಿ, ಗಗನಸಖಿಯಾದವರು ಹೇಗೆ ವರ್ತಿಸಬೇಕು ಎಂಬುದು ಮೊದಲು ಗೊತ್ತಿರಬೇಕು” ಎಂಬುದು ಸೇರಿ ಹತ್ತಾರು ರೀತಿಯಲ್ಲಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir : ರಾಮಮಂದಿರದ ಚಾವಣಿ ಸೋರುತ್ತಿಲ್ಲ; ನಿರ್ಮಾಣ ಸಮಿತಿ ಸ್ಪಷ್ಟನೆ

Exit mobile version