ಮುಂಬೈ: ದೇಶದಲ್ಲಿ ಹುಸಿ ಬಾಂಬ್ ಬೆದರಿಕೆ ಕರೆಗಳ ಹಾವಳಿ ಹೆಚ್ಚುತ್ತಿದೆ. ಶಾಲೆ, ಆಸ್ಪತ್ರೆಗಳ ಜತೆಗೆ ವಿಮಾನಗಳಿಗೂ ಬಾಂಬ್ ಬೆದರಿಕೆ ಕರೆ ಬರುತ್ತಿವೆ. ಶುಕ್ರವಾರವಷ್ಟೇ ದಿಲ್ಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ವಿಸ್ತಾರ ವಿಮಾನ(Vistara Flight)ಕ್ಕೆ ಹುಸಿಬಾಂಬ್ ಬಂದಿತ್ತು. ಇದೀಗ ಇಂಡಿಗೋ ವಿಮಾನಕ್ಕೆ ಇಂತಹದ್ದೇ ಕರೆ ಬಂದಿದೆ. ಶನಿವಾರ ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ 6ಇ 5314 ವಿಮಾನಕ್ಕೆ (IndiGo Flight) ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
IndiGo issues a press statement – IndiGo flight 6E 5314 operating from Chennai to Mumbai had received a bomb threat. Upon landing in Mumbai, the crew followed protocol and the aircraft was taken to an isolation bay as per security agency guidelines. All passengers have safely… pic.twitter.com/sdgH9ZrgRx
— ANI (@ANI) June 1, 2024
ಈ ಬಗ್ಗೆ ವಿಮಾನ ವಕ್ತಾರರು ಮಾಹಿತಿ ನೀಡಿ, ʼʼಚೆನ್ನೈಯಿಂದ ಮುಂಬೈಗೆ ತೆರಳುವ ಇಂಡಿಗೋ 6ಇ 5314 ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಮುಂಬೈಯಲ್ಲಿ ವಿಮಾನವನ್ನು ತುರ್ತಾಗಿ ಲ್ಯಾಂಡಿಂಗ್ ಮಾಡಲಾಗಿದ್ದು, ಭದ್ರತಾ ಏಜೆನ್ಸಿಯ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ಪ್ರತ್ಯೇಕ ಬೇಗೆ ಕೊಂಡೊಯ್ಯಲಾಯಿತು” ಎಂದು ತಿಳಿಸಿದ್ದಾರೆ.
“ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ. ವಿಮಾನವನ್ನು ಪ್ರಸ್ತುತ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲ ಭದ್ರತಾ ತಪಾಸಣೆಗಳು ಪೂರ್ಣಗೊಂಡ ನಂತರ, ವಿಮಾನವನ್ನು ಟರ್ಮಿನಲ್ ಪ್ರದೇಶಕ್ಕೆ ಮತ್ತೆ ಕೊಂಡೊಯ್ಯಲಾಗುವುದು. ತಪಾಸಣೆ ವೇಳೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲʼʼ ಎಂದು ವಿವರಿಸಿದ್ದಾರೆ.
ನಿಲ್ಲುತ್ತಲೇ ಇಲ್ಲ ಹುಸಿಬಾಂಬ್ ಕರೆ ಹಾವಳಿ
ಶುಕ್ರವಾರ ಬೆಳಗ್ಗೆ 12.10ಗೆ ದಿಲ್ಲಿ ವಿಮಾನ ನಿಲ್ದಾಣದಿಂದ ವಿಸ್ತಾರ UK611 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಈ ಕರೆ ಶ್ರೀನಗರದ ಏರ್ ಟ್ರಾಫಿಕ್ ಕಂಟ್ರೋಲ್(ATC)ಗೆ ಬಂದಿದ್ದ ಹಿನ್ನೆಲೆಯಲ್ಲಿ ತಕ್ಷಣ ಆ ವಿಮಾನವನ್ನು ಪ್ರತ್ಯೇಕವಾಗಿ ಲ್ಯಾಂಡಿಂಗ್ ಮಾಡಿಸಲಾಗಿತ್ತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಸಲಾಗಿದ್ದು, ಏರ್‌ಪೋರ್ಟ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳವೂ ದೌಡಾಯಿಸಿ ಪರಿಶೀಲನೆ ನಡೆಸಿದೆ. ಯಾವುದೇ ಬಾಂಬ್, ಸ್ಫೋಟಕ ವಸ್ತುಗಳು ಪರಿಶೀಲನೆ ವೇಳೆ ಪತ್ತೆ ಆಗಿಲ್ಲ.
ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅನಾಮಿಕ ವ್ಯಕ್ತಿಯೊಬ್ಬ ಏರ್‌ಪೋರ್ಟ್‌ನ ಬಾತ್ ರೂಮ್‌ನ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಏರ್‌ಪೋರ್ಟ್‌ನ ಅಲ್ಪಾ 2ರ ಆಡಳಿತ ಕಚೇರಿಯ ಬಾತ್ ರೂಮ್‌ನಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಬರೆದಿದ್ದ. ತಕ್ಷಣ ಶ್ವಾನದಳ, ಬಾಂಬ್ ಸ್ಕ್ವಾಡ್‌ನೊಂದಿಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಸಂದೇಶ ಅಂತ ಗೊತ್ತಾಗಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ದಿಲ್ಲಿಯಿಂದ ವಾರಣಾಸಿಗೆ ಪ್ರಯಾಣಿಸಬೇಕಾಗಿದ್ದ ಇಂಡಿಗೋ ಏರ್‌ಲೈನ್ಸ್‌ನ 6E2211 ವಿಮಾನಕ್ಕೆ ಮಂಗಳವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇನ್ನೇನು ಟೇಕ್ ಆಫ್ ಆಗಬೇಕಾಗಿದ್ದ ವಿಮಾನವನ್ನು ಪ್ರತ್ಯೇಕ ರನ್ ವೇ ಒಯ್ದು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಇತ್ತೀಚೆಗೆ ಪದೇಪದೆ ಕೆಲ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Bomb Threat: ತಡರಾತ್ರಿ ಬಾಂಬ್ ಬೆದರಿಕೆ ಕರೆ; ಬೆಂಗಳೂರು ಪೊಲೀಸರು ಅಲರ್ಟ್, ಆರೋಪಿ ಸೆರೆ