ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಅರಾಜಕತೆ, ನಾಗರಿಕ ದಂಗೆ ಭುಗಿಲೆದ್ದಿದೆ. ವಿವಾದಿತ ಮೀಸಲಾತಿ ವಿರುದ್ಧ ಜನ ಹಿಂಸಾಚಾರದಲ್ಲಿ ತೊಡಗಿದ್ದು, 200ಕ್ಕೂ ಅಧಿಕ ಮಂದಿ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ, ಬಾಂಗ್ಲಾದೇಶದ ವ್ಲಾಗರ್ (Vlogger) ಒಬ್ಬ, ಭಾರತಕ್ಕೆ ಹೇಗೆ ಅಕ್ರಮವಾಗಿ ನುಗ್ಗಬಹುದು (Infiltration) ಎಂಬುದನ್ನು ತೋರಿಸುವ ವಿಡಯೊವನ್ನು ಹರಿಬಿಟ್ಟಿದ್ದಾನೆ. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಅದರಲ್ಲೂ, “ಬಾಂಗ್ಲಾದೇಶದ ನಿರಾಶ್ರಿತರು ಪಶ್ಚಿಮ ಬಂಗಾಳಕ್ಕೆ ಬಂದರೆ ಆಶ್ರಯ ನೀಡುತ್ತೇವೆ” ಎಂಬುದಾಗಿ ಮಮತಾ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರು ಹೇಳಿಕೆ ನೀಡಿದ ಬೆನ್ನಲ್ಲೇ ವಿಡಿಯೊ ಹರಿದಾಡುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಬಾಂಗ್ಲಾದೇಶದ ಗಡಿಗೆ ತೆರಳಿದ ವ್ಲಾಗರ್ ಒಬ್ಬನು, ಅಕ್ರಮವಾಗಿ ಹೇಗೆ ಭಾರತವನ್ನು ಪ್ರವೇಶಿಸಬಹುದು, ನುಸುಳಬಹುದು ಎಂಬುದನ್ನು ವಿಡಿಯೊ ಸಮೇತ ಪೋಸ್ಟ್ ಮಾಡಿದ್ದಾನೆ. ಕಾಲುವೆಯ ಪುಟ್ಟದಾದ ಪೈಪ್‌ಗಳ ಮೂಲಕ ಬಾಂಗ್ಲಾದೇಶದ ಗಡಿಯಿಂದ ಭಾರತದ ಗಡಿಯೊಳಗೆ ನುಗ್ಗಬಹುದು, ಆ ಮೂಲಕ ಸುಲಭವಾಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಬಹುದು ಎಂಬುದನ್ನು ಕೆಲ ಸ್ನೇಹಿತರೊಂದಿಗೆ ಆತ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ಇದು ಈಗ ಗಡಿಯಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಆದಾಗ್ಯೂ, ಭಾರತ-ಬಾಂಗ್ಲಾ ಗಡಿಯಲ್ಲಿ ಸೈನಿಕರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದಲ್ಲಿ ನಿಲ್ಲದ ಗಲಭೆ
ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶ ದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿರುವ ಮಧ್ಯೆಯೇ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಹಾಗಾಗಿ, ಬಾಂಗ್ಲಾದೇಶದಲ್ಲಿ ಗಲಭೆ ನಿಂತಿಲ್ಲ. ಇದರಿಂದಾಗಿ ಭಾರತದ ಗಡಿಯಲ್ಲೂ ಆತಂಕದ ವಾತಾವರಣ ನಿರ್ಮಾಣವಾದಂತಾಗಿದೆ.
ಮಮತಾ ಬ್ಯಾನರ್ಜಿ ಹೇಳಿದ್ದೇನು?
ಜುಲೈ 21ರಂದು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಡೆಸಿದ ಮೆಗಾ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, “ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಬಾಗಿಲನ್ನು ತಟ್ಟಿದರೆ ಸರ್ಕಾರ ಅವರಿಗೆ ಆಶ್ರಯ ನೀಡುತ್ತದೆ” ಎಂದಿದ್ದರು. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಬಾಂಗ್ಲಾದೇಶದ ಅಕ್ರಮ ವಲಸೆಗಾರರಿಗೆ ಮಮತಾ ಬ್ಯಾನರ್ಜಿ ಆಶ್ರಯ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ ಅವರು ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡುತ್ತೇನೆ ಎಂಬುದಾಗಿ ನೀಡಿದ ಹೇಳಿಕೆ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗಿದ್ದವು.
ಇದನ್ನೂ ಓದಿ: Mamata Banerjee: ಮಾತನಾಡಲು 5 ನಿಮಿಷ ಮಾತ್ರ ಅವಕಾಶ ನೀಡಿದರು: ನೀತಿ ಆಯೋಗದ ಸಭೆಯಿಂದ ಹೊರ ಬಂದ ಮಮತಾ ಬ್ಯಾನರ್ಜಿ ಕಿಡಿ