Site icon Vistara News

Instagram Reel: ಪ್ರಾಣಕ್ಕೇ ಕುತ್ತು ತಂದ ಇನ್‌ಸ್ಟಾಗ್ರಾಮ್‌ ರೀಲ್ಸ್‌; ಸಾಹಸ ಪ್ರದರ್ಶಿಸಲು ಹೋಗಿ 21 ವರ್ಷದ ಯುವಕ ಸಾವು

Instagram Reel

Instagram Reel

ಲಕ್ನೋ: ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹುಚ್ಚು ಸಾಹಸ ಪ್ರದರ್ಶಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಡುತ್ತಾರೆ. ಅದರಲ್ಲೂ ಜನಪ್ರಿಯತೆ ಗಳಿಸಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯಲು ತಯಾರಿರುತ್ತಾರೆ. ಇಂತಹ ಇನ್‌ಸ್ಟಾಗ್ರಾಮ್‌ ರೀಲ್ಸ್‌ (Instagram Reel) ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನ ಚಿತ್ರೀಕರಣಕ್ಕಾಗಿ ಸಾಹಸ ಪ್ರದರ್ಶಿಸುತ್ತಿದ್ದ 21 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಮೃತನನ್ನು ಶಿವಂ ಕುಮಾರ್ ಎಂದು ಗುರುತಿಸಲಾಗಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಶಿವಂ ಕುಮಾರ್‌ ಶಾಲೆಯ ಧ್ವಜ ಸ್ತಂಭದಲ್ಲಿ ನೇತಾಡುತ್ತಿದ್ದ. ಸ್ನೇಹಿತರು ಇದನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಆತನ ಭಾರ ತಾಳಲಾರದೆ ಧ್ವಜ ಸ್ತಂಭ ಕುಸಿದು ಶಿವಂ ಕುಮಾರ್ ಕೊನೆಯುಸಿರು ಎಳೆದಿದ್ದಾನೆ.

ಘಟನೆ ವಿವರ

ಈ ಅವಘಡ ಗುರುವಾರ (ಏಪ್ರಿಲ್‌ 18) ಸಂಜೆ ನಡೆದಿದೆ. ಉತ್ತರ ಪ್ರದೇಶದ ಜನಪದ್ ಬಂದಾದ ಖೈರಾಡಾ ಗ್ರಾಮದ ಪ್ರೌಢಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಶಿವಂ ತನ್ನ ತಂದೆಯನ್ನು ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಬಂದು ಮನೆಗೆ ಬಿಟ್ಟು ಸಂಜೆ ಸುಮಾರು 5 ಗಂಟೆಗೆ ಶಾಲೆಗೆ ತಲುಪಿದ್ದ. ಅಷ್ಟರಲ್ಲೆ ಶಾಲೆಗೆ ಬಂದಿದ್ದ ಆತನ ಸ್ನೇಹಿತರಾದ ಅನು ಮತ್ತು ಅಂಕಿತ್ ಅವನಿಗಾಗಿ ಕಾಯುತ್ತಿದ್ದರು. ನಂತರ ಈ ಮೂವರು ಶಾಲೆಯ ಛಾವಣಿಯನ್ನು ಏರಿದರು. ಇದು ಶಿವಂ ಅವರ ಕೊನೆಯ ಇನ್‌ಸ್ಟಾಗ್ರಾಂ ಸ್ಟಂಟ್ ಎಂದು ಆಗ ಅವರಿಗೆ ತಿಳಿದಿರಲಿಲ್ಲ. ಸ್ನೇಹಿತರು ರೆಕಾರ್ಡ್‌ ಮಾಡುತ್ತಿದ್ದಂತೆ ಶಿವಂ ಕಂಬದಲ್ಲಿ ಸಾಹಸ ಪ್ರದರ್ಶಿಸತೊಡಗಿದ್ದ. ಆಗ ಇದ್ದಕ್ಕಿದ್ದಂತೆ ಕಂಬ ಕುಸಿಯಿತು. ಬಿದ್ದು ಗಂಭೀರ ಗಾಯಗೊಂಡಿದ್ದ ಶಿವಂ ಸ್ನೇಹಿತರ ಕಣ್ಣೇದುರು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಹಿಂದೆಯೂ ಇದೇ ರೀತಿಯ ಸಾಹಸ ಪ್ರದರ್ಶಿಸಿದ್ದ

ಅಚ್ಚರಿ ಎಂದರೆ ಶಿವಂ ಇಂತಹ ಸಾಹಸ ಪ್ರದರ್ಶಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಆತನ ಇನ್‌ಸ್ಟಾಗ್ರಾಂ ತುಂಬ ಇಂತಹದ್ದೇ ಸಾಹಸದ ವಿಡಿಯೊ ತುಂಬಿಕೊಂಡಿದೆ. ಮರ ಮತ್ತು ಛಾವಣಿಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ಹಲವು ರೀಲ್ಸ್‌ಗಳಿವೆ.

ಶಿವಂ ಅವರದ್ದು ಬಡತನದ ಕುಟುಂಬ. ಅವರ ತಂದೆ ವರ್ದಾನಿ ವಾಟರ್ ಪೌಚ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದಾರೆ. ಕುಟುಂಬವು ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಮಾಟೌಂಡ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರಾಮ್ ಮೋಹನ್ ರೈ ಹೇಳಿದ್ದಾರೆ.

ಇದನ್ನೂ ಓದಿ: Viral News: ರಿಕ್ಷಾದ ಟಾಪ್‌ಗೆ ಹತ್ತಿ ಸ್ಟೆಪ್‌ ಹಾಕಿದ ಯುವಕ; ವಿಡಿಯೊ ಕೊನೆಯಲ್ಲಿರುವ ರೋಚಕ ಟ್ವಿಸ್ಟ್‌ ಮಿಸ್‌ ಮಾಡದೆ ನೋಡಿ

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಉತ್ತರ ಪ್ರದೇಶದಲ್ಲಿ ಅಮಾನುಷ ಘಟನೆಯೊಂದು ನಡೆದಿತ್ತು. ಗಾಜಿಯಾಬಾದ್‌ನಲ್ಲಿ ಯುವಕನೋರ್ವ ನಾಯಿಯ ಕಾಲನ್ನು ಹಿಡಿದು ಕ್ರೂರವಾಗಿ ತಿರುಗಿಸುವ ಮೂಲಕ ಅಮಾನುಷವಾಗಿ ವರ್ತಿಸಿದ ವಿಡಿಯೊ ವೈರಲ್‌ ಆದ ಬಳಿಕ ಈತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಝಾಫರ್‌ (Zafar) ಎನ್ನುವ ಯುವಕ ನಾಯಿಯನ್ನು ಬಲವಂತದಿಂದ ಎಳೆದುಕೊಂಡು ಬರುತ್ತಾನೆ. ನಾಯಿ ಗಾಬರಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಮತ್ತಷ್ಟು ಬಿಗಿಯಾಗಿ ಹಿಡಿದುಕೊಳ್ಳುವ ಆತ ಅದನ್ನು ಅನಾಮತ್ತಾಗಿ ಎತ್ತಿಕೊಳ್ಳುತ್ತಾನೆ. ಬಳಿಕ ಅದರ ಕಾಲುಗಳನ್ನು ಹಿಡಿದುಕೊಂಡು ವೇಗವಾಗಿ ಸುತ್ತುತ್ತಾನೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಇದನ್ನು ಚಿತ್ರೀಕರಿಸಲಾಗಿತ್ತು.

Exit mobile version