Site icon Vistara News

International Sex workers day: ನಾವು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದ ದಿನ

sex workers

ವೇಶ್ಯಾವಾಟಿಕೆ ಜಗತ್ತಿನ ಅತ್ಯಂತ ಹಳೇ ವೃತ್ತಿ ಅಂತ ಬ್ರಿಟಿಷ್‌ ಲೇಖಕ ರುಡ್‌ಯಾರ್ಡ್‌ ಕಿಪ್ಲಿಂಗ್‌ ತುಂಬಾ ಹಿಂದೇ ಹೇಳಿದ್ದು ದಾಖಲಾಗಿದೆ. ಅದಕ್ಕೂ ಹಿಂದೆಯೇ ಕಾಳಿದಾಸ, ಭಾಸ ಮುಂತಾದ ಸಂಸ್ಕೃತದ ಕವಿ, ನಾಟಕಕಾರರ ಮಹಾಕಾವ್ಯ, ನಾಟಕಗಳಲ್ಲಿ ಬರುವ ಅಷ್ಟಾದಶ ವರ್ಣನೆಗಳಲ್ಲಿ ವೇಶ್ಯಾವಾಟಿಕೆಯ ವರ್ಣನೆ ಕಡ್ಡಾಯ ಎನಿಸಿಕೊಂಡಿತ್ತು. ಹೀಗಾಗಿ ನಮ್ಮ ದೇಶದಲ್ಲೂ ಇದು ಇತ್ತು ಎಂದು ಧಾರಾಳವಾಗಿ ಹೇಳಬಹುದು. ಆಮ್ರಪಾಲಿ ಮುಂತಾದ ʼನಗರವಧುʼಗಳ ಉಲ್ಲೇಖ ಬುದ್ಧನ ಕಾಲದ ಸಾಹಿತ್ಯದಲ್ಲಿ ಇದೆ.

ವೇಶ್ಯಾವಾಟಿಕೆ ಜಾಗೃತಿಗೊಂದು ದಿನ

ಇಂಥ ವೇಶ್ಯಾವಾಟಿಕೆಯ ಕುರಿತು ಅರಿವು ಮೂಡಿಸಲು ಒಂದು ದಿನ ಮೀಸಲಾಗಿರಲಿ ಎಂಬ ದೃಷ್ಟಿಯಿಂದ ವಿಶ್ವಸಂಸ್ಥೆ ಜೂನ್‌ 2ನ್ನು international sex workers day ಎಂದು ಘೋಷಿಸಿತು. ಇದಕ್ಕೆ ಕಾರಣವಾದದ್ದು ಒಂದು ಕುತೂಹಲಕಾರಿ ಹೋರಾಟದ ಘಟನೆ.

1975ರ ಜೂನ್‌ 2ರಂದು ಫ್ರಾನ್ಸ್‌ನ ಲ್ಯೋನ್‌ ನಗರದಲ್ಲಿ ಸುಮಾರು 100 ವೇಶ್ಯೆಯರು ರೊಚ್ಚಿಗೆದ್ದು ಸೇಂಟ್‌ ನಿಝಿಯರ್‌ ಚರ್ಚ್‌ಗೆ ನುಗ್ಗಿ ಅಲ್ಲಿ ಪ್ರತಿಭಟನೆ ಆರಂಭಿಸಿದರು. ತಮ್ಮ ವೃತ್ತಿಯ ವಾತಾವರಣ ಆರೋಗ್ಯಕರವಾಗಿಲ್ಲ. ನಮ್ಮನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಕಾನೂನು ರಕ್ಷಕರು ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ. ನಮ್ಮ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಾವೂ ಮನುಷ್ಯರಲ್ಲವೇ? ಸರಕಾರ ನಮ್ಮ ಕಡೆಗೆ ಕಣ್ಣು ಬಿಡಬೇಕು- ಎಂದು ಆಗ್ರಹಿಸಿದರು.

ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಫ್ರಾನ್ಸಿನಾದ್ಯಂತ ವೇಶ್ಯೆಯರು ಒಟ್ಟಾಗಿ ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಇದು ಇಡೀ ಯುರೋಪಿಗೆ ಹಬ್ಬಿತು. ವೇಶ್ಯೆಯರ ಹಕ್ಕುಗಳ ಬಗ್ಗೆ ಆಡಳಿತಾತ್ಮಕ ಅರಿವು ಮೂಡಲು, ಕಾನೂನುಗಳನ್ನು ರೂಪಿಸಲು ಇದು ಕಾರಣವಾಯಿತು.

ಇನ್ನಷ್ಟು ಓದಿಗಾಗಿ : Explainer: Sex work ಲೀಗಲ್‌ ಅಂದರೆ ಏನರ್ಥ?

ಎಲ್ಲೆಲ್ಲಿ ಕ್ರೈಮ್?‌

ವೇಶ್ಯೆಯರು ಬದುಕು ಸಾಗಿಸುವುದು ಅಂದುಕೊಂಡಷ್ಟು ಸುಲಭವಾಗಿಲ್ಲ. ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ವಯಸ್ಕರು ಸಮ್ಮತಿಯಿಂದ ಸಂಭೋಗ ನಡೆಸುವುದು ಕಾನೂನುಬಾಹಿರವಲ್ಲ. ಅದಕ್ಕಾಗಿ ಕಾಸು ಪಡೆದಿದ್ದಾರೆಯೋ ಇಲ್ಲವೋ ಎಂಬುದು ಕೂಡ ಮುಖ್ಯವಲ್ಲ. ಇನ್ನೂ ಮುಂದುವರಿದ ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಲಾಗಿದೆ. ಅಲ್ಲಿ ವೇಶ್ಯೆಯರು ಸರಕಾರಕ್ಕೆ ತೆರಿಗೆ ಕೂಡ ಕಟ್ಟಬೇಕಿದೆ. ಉದಾಹರಣೆಗೆ ಜರ್ಮನಿ ಮತ್ತು ಗ್ರೀಸ್.‌ ಇಂಗ್ಲೆಂಡ್‌ನಲ್ಲಿ ಇದು ಕಾನೂನುಬದ್ಧ ಮತ್ತು ಅಮೆರಿಕದಲ್ಲಿ ಕಾನೂನುಬಾಹಿರ. ಅಫಘಾನಿಸ್ತಾನ, ಇರಾನ್‌, ಇರಾಕ್‌ನಂಥ ಮುಸ್ಲಿಂ ದೇಶಗಳಲ್ಲಿ ಇದು ಸಂಪೂರ್ಣ ನಿಷೇಧಿತ. ಸುಮಾರು 109 ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರ; 77 ದೇಶಗಳಲ್ಲಿ ಮಾತ್ರ ಇದು ಲೀಗಲ್.‌

ಹಾಗಿದ್ರೆ ಭಾರತದಲ್ಲಿ?
ಭಾರತದಲ್ಲಿ ವೇಶ್ಯಾವಾಟಿಕೆ ಒಂದು ಬಗೆಯಲ್ಲಿ ನಿರ್ಬಂಧಿತ ಚಟುವಟಿಕೆ. ಈ ಬಗ್ಗೆ ಹಲವು ಕಾನೂನುಗಳಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಕೂಡ ಅದರ ವ್ಯಾಪ್ತಿಯನ್ನು ಸ್ವಲ್ಪಮಟ್ಟಿಗೆ ಖಚಿತಗೊಳಿಸುವ ಕೆಲಸ ಮಾಡಿದೆ.

ಕೋರ್ಟ್‌ ಹೇಳಿರುವಂತೆ-

ಕಾನೂನು ಹೇಳುವುದೇನು?
ಭಾರತೀಯ ದಂಡ ಸಂಹಿತೆಯ ಪ್ರಕಾರ, ಇಬ್ಬರು ವಯಸ್ಕರ ನಡುವೆ ಸಮ್ಮತಿಯಿಂದ ನಡೆಯುವ ಲೈಂಗಿಕ ಕ್ರಿಯೆ ಅಪರಾಧವೇ ಅಲ್ಲ. ಆದರೆ ಈ ಸೇವೆಯ ಸುತ್ತ ನಡೆಯುವ ಇತರ ಕೆಲವು ಚಟುವಟಿಕೆಗಳು ಅಪರಾಧ ಎನಿಸಿಕೊಳ್ಳುತ್ತವೆ. ಉದಾಹರಣೆಗೆ ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಯ ಸೇವೆಗಳನ್ನು ಪ್ರದರ್ಶಿಸುವುದು ಕಾನೂನುಬಾಹಿರ. ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುವುದು ಕಾನೂನುಬಾಹಿರ. ಲೈಂಗಿಕ ಕಾರ್ಯಕರ್ತೆಯನ್ನು ಸಂಪರ್ಕಿಸಿಕೊಡುವುದು ಕಾನೂನುಬಾಹಿರ. ವೇಶ್ಯಾವಾಟಿಕೆಗೆ ಗಿರಾಕಿಗಳನ್ನು ಹೊಂದಿಸುವುದು ಕಾನೂನುಬಾಹಿರ. ಅನೈತಿಕ ವ್ಯವಹಾರಗಳ (ತಡೆ) ಕಾಯಿದೆ- 1986ರ ಪ್ರಕಾರ, ವೇಶ್ಯಾವೃತ್ತಿಗಾಗಿ ಇತರರನ್ನು ಆಕರ್ಷಿಸುವುದು, ಪ್ರಚೋದಿಸುವುದು ಅಪರಾಧ. ಕಾಲ್‌ಗರ್ಲ್‌ಗಳು ತಮ್ಮ ಫೋನ್‌ ನಂಬರ್‌ಗಳನ್ನು ಸಾರ್ವಜನಿಕಗೊಳಿಸುವುದು ಅಪರಾಧ.

ಇದನ್ನೂ ಓದಿ: Sex work legal: ವೇಶ್ಯೆಯರನ್ನು ಬಂಧಿಸುವಂತಿಲ್ಲ, ದಂಡ ವಿಧಿಸುವಂತಿಲ್ಲ ಎಂದ ಸುಪ್ರೀಂಕೋರ್ಟ್

ಬದಲಾಗುತ್ತಿರುವ ಪ್ರಪಂಚದಲ್ಲಿ ವೇಶ್ಯೆಯರ ಸ್ಥಾನಮಾನಗಳು ಕೂಡ ಬದಲಾಗುತ್ತಿವೆ. ಇಂಟರ್‌ನೆಟ್‌ ಹಾಗೂ ಸ್ಮಾರ್ಟ್‌ಫೋನ್‌ನ ಹೊಕ್ಕುಬಳಕೆ ಹೆಚ್ಚಾದಂತೆ ವೇಶ್ಯಾವಾಟಿಕೆ ಕೂಡ ಹೈಟೆಕ್‌ ಆಗುತ್ತಿರುವುದನ್ನು ಕಾಣಬಹುದು. ಈಗ ಮೊದಲಿನಂತೆ ಹಾದಿಬೀದಿಯಲ್ಲಿ ನಿಲ್ಲಬೇಕಿಲ್ಲ. ಆದರೆ ವೇಶ್ಯೆಯರ ಹಕ್ಕುಗಳ ಬಗ್ಗೆ ಸಾಕಷ್ಟು ಜಾಗೃತಿ ಇಲ್ಲ. ಜಾಗೃತಿ ಮೂಡಬೇಕು. ಅದರೆ ಇದು ಸಮಾಜದ ನೈತಿಕತೆಗೂ ಸವಾಲಾಗಲಿದೆಯಾ? ಕಾದು ನೋಡಬೇಕು.

Exit mobile version