Site icon Vistara News

India Iran: ಇಸ್ರೇಲ್‌ ಮೇಲೆ ದಾಳಿಯ ಮಧ್ಯೆಯೂ ಭಾರತದ ಪರ ನಿಂತ ಇರಾನ್;‌ ಏನಿದು ಬೆಳವಣಿಗೆ?‌

India Iran

Iran To Give India Access To 17 Citizens Onboard Seized Cargo

ನವದೆಹಲಿ: ಇಸ್ರೇಲ್‌ ಮೇಲೆ ಇರಾನ್‌ ನೂರಾರು ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ನಡೆಸಿದೆ. ಇದಕ್ಕೆ ತಕ್ಕ ತಿರುಗೇಟು ನೀಡುವುದಾಗಿಯೂ ಇಸ್ರೇಲ್‌ ತಿಳಿಸಿದೆ. ಹಾಗಾಗಿ, ಜಾಗತಿಕ ಅಸ್ಥಿರತೆಯ ಭೀತಿ ಎದುರಾಗಿದೆ. ಇದರ ಮಧ್ಯೆಯೂ, ಭಾರತಕ್ಕೆ ಸಹಕಾರ ನೀಡಲು ಇರಾನ್‌ ಒಪ್ಪಿಗೆ ಸೂಚಿಸಿದೆ. ಇರಾನ್‌ನಲ್ಲಿ ಇಸ್ರೇಲ್‌ ಮೂಲದ ಹಡಗನ್ನು ಜಪ್ತಿ ಮಾಡಿದ್ದು, ಇದರಲ್ಲಿ 17 ಭಾರತೀಯರೂ ಇದ್ದಾರೆ. ಈ ಹಡಗಿನಲ್ಲಿರುವ ಭಾರತೀಯರ ಜತೆ ಸಂಪರ್ಕ ಸಾಧಿಸಲು ಅನುಮತಿ ನೀಡುವುದಾಗಿ ಇರಾನ್‌ (India Iran) ಒಪ್ಪಿಗೆ ಸೂಚಿಸಿದೆ. ಇದು ಭಾರತದ ಮಟ್ಟಿಗೆ ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಇರಾನ್‌ನ ಸ್ಟೇಟ್‌ ಆಫ್‌ ಹಾರ್ಮುಜ್‌ ಬಳಿ ಇಸ್ರೇಲ್‌ ಮೂಲದ ಎಂಎಸ್‌ಸಿ ಎರೀಸ್‌ ಎಂಬ ಹಡಗನ್ನು ಇರಾನ್‌ ಇಸ್ಲಾಮಿಕ್‌ ರೆವೊಲ್ಯೂಷನರಿ ಗಾರ್ಡ್ಸ್‌ ಕಾರ್ಪ್ಸ್‌ ಸಿಬ್ಬಂದಿಯು ಜಪ್ತಿ ಮಾಡಿದ್ದಾರೆ. ಆದರೆ, ಈ ಹಡಗಿನಲ್ಲಿ 17 ಭಾರತೀಯರಿದ್ದು, ಅವರನ್ನು ರಕ್ಷಿಸಲು ಭಾರತದ ವಿದೇಶಾಂಗ ಇಲಾಖೆಯು ಇರಾನ್‌ ಜತೆ ನಿರಂತರವಾಗಿ ಸಂಪರ್ಕದಲ್ಲಿತ್ತು. ಈಗ ಭಾರತದ ಮನವಿಯನ್ನು ಇರಾನ್‌ ಪುರಸ್ಕರಿಸಿದ್ದು, ಭಾರತೀಯರ ಜತೆ ಸಂಪರ್ಕ ಸಾಧಿಸಲು ಅನುಮತಿ ನೀಡುವುದಾಗಿ ತಿಳಿಸಿದೆ.

“ಎಂಎಸ್‌ಸಿ ಎರೀಸ್‌ ಹಡಗಿನಲ್ಲಿರುವ ಭಾರತದ 17 ಸಿಬ್ಬಂದಿಯನ್ನು ರಕ್ಷಿಸುವ ಕುರಿತು ಇರಾನ್‌ ಜತೆಗೆ ಮಾತುಕತೆ ನಡೆಸಲಾಗಿದೆ. ಭಾರತ ಹಾಗೂ ಇರಾನ್‌ ರಾಜತಾಂತ್ರಿಕ ಸಂಬಂಧ, ಸಹಕಾರ, ಭಾರತೀಯರ ರಕ್ಷಣೆ ಕುರಿತು ಇರಾನ್‌ ಜತೆ ಚರ್ಚಿಸಲಾಗಿದೆ. ಇದಾದ ಬಳಿಕ ಭಾರತದ ಸಿಬ್ಬಂದಿ ಜತೆ ಸಂಪರ್ಕ ಸಾಧಿಸಲು ಇರಾನ್‌ ಒಪ್ಪಿಗೆ ಸೂಚಿಸಿದೆ” ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಮಾಹಿತಿ ನೀಡಿದ್ದಾರೆ. ಇದು ಭಾರತ ಹಾಗೂ ಇರಾನ್‌ ರಾಜತಾಂತ್ರಿಕ ಸಂಬಂಧಕ್ಕೆ ಸಾಕ್ಷಿ ಎಂದೂ ಹೇಳಲಾಗುತ್ತಿದೆ.

17 ಭಾರತೀಯರ ರಕ್ಷಣೆ

ಕೆಲ ದಿನಗಳ ಹಿಂದಷ್ಟೇ ಭಾರತವು ಲಾವೋಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 17 ಭಾರತೀಯರನ್ನು ರಕ್ಷಿಸಿತ್ತು. ಕೆಲಸಕ್ಕೆಂದು ದಕ್ಷಿಣ ಏಷ್ಯಾ ರಾಷ್ಟ್ರ ಲಾವೋಸ್‌ಗೆ ಹೋಗಿ ತೊಂದರೆಗೆ ಸಿಲುಕಿದ್ದ 17 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದರು. ಕಾಂಬೋಡಿಯಾದಲ್ಲಿ ಲಾಭದಾಯಕ ಉದ್ಯೋಗಾವಕಾಶಗಳ ಭರವಸೆ ನೀಡಿ ಮಾನವ ಕಳ್ಳಸಾಗಣೆ ನಡೆಸುವ ವಂಚಕರ ಬಲೆಗೆ ಬೀಳದಂತೆ ವಿದೇಶಾಂಗ ಸಚಿವಾಲಯ (MEA) ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ಕಂಡು ಬಂದಿತ್ತು.

ಇದನ್ನೂ ಓದಿ: S Jaishankar: ಲಾವೋಸ್‌ನಲ್ಲಿ ತೊಂದರೆಗೆ ಸಿಲುಕಿದ್ದ 17 ಭಾರತೀಯರ ರಕ್ಷಣೆ; ಇದು ಮೋದಿಯ ಗ್ಯಾರಂಟಿ ಎಂದ ಸಚಿವ ಜೈಶಂಕರ್

Exit mobile version