ನವ ದೆಹಲಿ: ಭಾರತೀಯ ಜನತಾ ಪಕ್ಷದ ಮೇಲೆ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನಡೆಸುತ್ತಿರುವ ಸರಣಿ ಆರೋಪಗಳನ್ನು ಗಮನಿಸುತ್ತಿದ್ದರೆ ಅಬಕಾರಿ ಹಗರಣದಲ್ಲಿ ಸಿಬಿಐ ಅವರನ್ನು ಬಂಧಿಸುವುದು ಬಹುತೇಕ ಖಾತ್ರಿಯಾಗಿದೆ ಎಂಬಂತೆ ಕಂಡುಬರುತ್ತಿದೆ.
ಹೊಸ ಅಬಕಾರಿ ನೀತಿಯಡಿ ಲೈಸೆನ್ಸ್ ನೀಡುವಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನುವುದು ಮನೀಷ್ ಸಿಸೋಡಿಯಾ ಅವರ ಮೇಲಿನ ಆರೋಪ. ಸಿಬಿಐ ಈಗ ಒಂದು ಹಂತದ ವಿಚಾರಣೆಯನ್ನು ನಡೆಸಿದೆ. ಸುಮಾರು ೧೫ ಗಂಟೆಗಳ ಕಾಲ ಮನೀಷ್ ಸಿಸೋಡಿಯಾ ಅವರ ಮನೆಯಲ್ಲಿ ಮತ್ತು ಅವರಿಗೆ ಸೇರಿದ ಹಲವಾರು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸಾಕಷ್ಟು ದಾಖಲೆಗಳು ಸಿಕ್ಕಿವೆ ಎಂದು ಸಿಬಿಐ ಹೇಳಿದ್ದರೂ ಆಮ್ ಆದ್ಮಿ ಪಾರ್ಟಿ ಏನೂ ಸಿಕ್ಕಿಲ್ಲ ಎನ್ನುತ್ತಿದೆ.
ಈ ನಡುವೆ ಸೋಮವಾರ ಸಿಸೋಡಿಯಾ ಅವರು ಒಂದು ಟ್ವೀಟ್ ಮಾಡಿ, ಭಾರತೀಯ ಜನತಾ ಪಕ್ಷವು ತನಗೆ ಆಮ್ ಆದ್ಮಿ ಪಾರ್ಟಿ ಬಿಟ್ಟು ಬರುವಂತೆ ಆಮಿಷ ಒಡ್ಡಿತ್ತು. ಆದರೆ, ತಾನು ನಿರಾಕರಿಸಿದ್ದೇನೆ ಎಂದು ಹೇಳಿದ್ದರು. ಈ ಮೂಲಕ ಆಮ್ ಆದ್ಮಿ ಪಾರ್ಟಿ ಬಿಟ್ಟು ಬರದ ಕಾರಣಕ್ಕೆ ತನ್ನ ಮೇಲೆ ಸಿಬಿಐಯನ್ನು ಬಿಟ್ಟು ದಾಳಿ ಮಾಡಿಸಲಾಗಿದೆ ಎನ್ನುವುದು ಸಿಸೋಡಿಯಾ ಮಾತಿನ ಗೂಢಾರ್ಥ. ಆದರೆ, ಬಿಜೆಪಿ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಬಿಜೆಪಿಯಿಂದ ಆಫರ್ ಮಾಡಿದವರು ಯಾರು ಎಂಬುದನ್ನು ಬಹಿರಂಗಪಡಿಸುವಂತೆಯೂ ಅದು ಸವಾಲು ಹಾಕಿದೆ.
ಆದರೆ, ಸಿಸೋಡಿಯಾ ಅವರಾಗಲೀ ಆಮ್ ಆದ್ಮಿ ಪಾರ್ಟಿಯ ಸಂಚಾಲಕರಾಗಿರುವ ಅರವಿಂದ ಕೇಜ್ರಿವಾಲ್ ಅವರಾಗಲೀ ಆಫರ್ ಕೊಟ್ಟವರು ಯಾರು ಎನ್ನುವ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಬದಲಾಗಿ ಆಫರ್‌ಗಳ ಬಗ್ಗೆ ಬೇರೆ ಬೇರೆ ಕಥೆಗಳನ್ನು ಹೇಳುತ್ತಿರುವುದು ಅನುಮಾನ ಮೂಡಿಸಿದೆ.
ಇಬ್ಬರೂ ನಾಯಕರು ಗುಜರಾತ್‌ನಲ್ಲಿ
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಸಿಸೋಡಿಯಾ ಅವರಿಬ್ಬರೂ ಸೋಮವಾರ ಗುಜರಾತ್‌ನಲ್ಲಿದ್ದಾರೆ. ಗುಜರಾತ್‌ನ ಮುಂದಿನ ವಿಧಾನಸಭಾ ಚುನಾವಣೆಗೆ ದೊಡ್ಡ ಮಟ್ಟದ ಸಿದ್ಧತೆಯಲ್ಲಿರುವ ಈ ನಾಯಕರು ಅಲ್ಲಿ ಬಿಜೆಪಿ ವಿರುದ್ಧ ದಾಳಿಗೆ ಹೊಸ ಅಸ್ತ್ರವಾಗಿ ದಿಲ್ಲಿ ರಾಜಕೀಯವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದಂತೆ ಕಾಣುತ್ತಿದೆ.
ಆರಂಭದಲ್ಲಿ ಸಿಸೋಡಿಯಾ ಅವರು ಟ್ವೀಟ್ ಮೂಲಕ ಮಾತನಾಡಿದರೆ, ಬಳಿಕ ಅವರಿಬ್ಬರೂ ನೇರವಾಗಿಯೇ ಮಾತಿಗಿಳಿದಿದ್ದಾರೆ. ಅಹಮದಾಬಾದ್‌ನಲ್ಲಿ ಮಾತನಾಡಿದ ಸಿಸೋಡಿಯಾ ಅವರು, ʻʻನೀವೇ ನಮ್ಮ ಸಿಎಂ ಕ್ಯಾಂಡಿಡೇಟ್ ಆಗಿ ಎಂದು ಹೇಳಿದರು. ಬಿಜೆಪಿಯಲ್ಲಿ ಸಿಎಂ ಆಗಬಲ್ಲ ಮುಖಗಳೇ ಇಲ್ಲವಲ್ಲʼʼ ಎಂದು ಹೇಳಿದರು.
ಆಗ ಪಕ್ಕದಲ್ಲಿದ್ದ ಅರವಿಂದ ಕೇಜ್ರಿವಾಲ್ ಅವರು, ʻʻನಿಜವೆಂದರೆ, ದಿಲ್ಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ್ದಕ್ಕಾಗಿ ಸಿಸೋಡಿಯಾ ಅವರಿಗೆ ಭಾರತ ರತ್ನ ಕೊಡಬೇಕು. ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನು ಅವರ ಕೈಗೆ ಕೊಡಬೇಕು. ಆದರೆ, ಅವರ ಮೇಲೆ ಸಿಬಿಐ ದಾಳಿ ನಡೆಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆʼʼ ಎಂದು ಹೇಳಿದರು.
ʻʻಕೇಜ್ರಿವಾಲ್ ಅವರು ನನ್ನ ಗುರು, ಅವರು ನನ್ನ ಮಾರ್ಗದರ್ಶಕರು. ನಾನು ಮುಖ್ಯಮಂತ್ರಿ ಆಗುವುದಕ್ಕೆ ರಾಜಕೀಯಕ್ಕೆ ಬಂದಿಲ್ಲ. ಸಾರ್ವಜನಿಕರಿಗೆ ಒಳ್ಳೆದು ಮಾಡುವುದಕ್ಕಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ,ʼʼ ಎಂದು ಸಿಸೋಡಿಯಾ ಹೇಳಿದರು.
ʻʻಅಬಕಾರಿ ನೀತಿ ವಿಚಾರದಲ್ಲಿ ನಡೆಯುತ್ತಿರುವ ಈ ತನಿಖೆ ಕೇವಲ ರಾಜಕೀಯ ಉದ್ದೇಶದ್ದು. ಕೇಜ್ರಿವಾಲ್ ಅವರನ್ನು ಕಟ್ಟಿ ಹಾಕುವ ಉದ್ದೇಶವನ್ನು ಹೊಂದಿದೆ. ಅದರಲ್ಲೂ ಮುಖ್ಯವಾಗಿ ಗುಜರಾತ್‌ನಲ್ಲಿ ಒಂದು ಹೊಸ ಭರವಸೆ ಮೂಡಿಸಲು ಹೊರಟ ಹೊತ್ತಿನಲ್ಲಿ ಅವರನ್ನು ಕಟ್ಟಿ ಹಾಕಲು ಈ ರೀತಿ ಮಾಡಲಾಗಿದೆ. ನನಗೂ ಸಂದೇಶಗಳು ಬಂದಾಗ ಅಚ್ಚರಿಯಾಗಿತ್ತು. ಈ ಸಂದೇಶದಲ್ಲಿ ನನಗೆ ಎರಡು ಆಫರ್ ಬಂದಿತ್ತು. ಒಂದು ಆಪ್‌ನ್ನು ವಿಭಜನೆ ಮಾಡಿದರೆ ಸಿಬಿಐ ಮತ್ತು ಇ.ಡಿ ತನಿಖೆಗಳಿಂದ ಮುಕ್ತಿ ನೀಡಲಾಗುತ್ತದೆ. ಎರಡನೇಯದು ನನ್ನನ್ನು ಮುಖ್ಯಮಂತ್ರಿ ಮಾಡಲಾಗುತ್ತದೆʼʼ ಎಂದು ಸಿಸೋಡಿಯಾ ಹೇಳಿದರು. ಬಳಿಕ ಇಬ್ಬರೂ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ| ಸಿಸೋಡಿಯಾ ಆಫರ್ ಹೇಳಿಕೆ ಬರೀ ಸುಳ್ಳು, ಅವರು ಭಾಂಗ್ ಸೇವಿಸಿ ಈ ರೀತಿ ಹೇಳಿರಬಹುದು: ಬಿಜೆಪಿ ಪ್ರತಿದಾಳಿ