Site icon Vistara News

ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?

Tesla May set up factory in Maharashtra, Tamil Nadu and Gujarat Says Report

ನವದೆಹಲಿ: ಬ್ಯಾಟರಿ ಚಾಲಿತ ಕಾರುಗಳ (Electric Car) ಉತ್ಪಾದನೆಗಾಗಿ ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ (Tesla) ಭಾರತದಲ್ಲಿ ತನ್ನ ಘಟಕವನ್ನು ಆರಂಭಿಸಲಿದೆ. ದೇಶಿಯವಾಗಿ ಮಾರಾಟ ಮತ್ತು ರಫ್ತು ಮಾಡಲು ಈ ಘಟಕವನ್ನು ಕಂಪನಿ ಶುರು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಳೆದ ವರ್ಷವೇ ಟೆಸ್ಲಾ ಭಾರತದಲ್ಲಿ ಆಮದು ಮೂಲಕ ಕಾರುಗಳ ಮಾರಾಟಕ್ಕೆ ಮುಂದಾಗಿತ್ತು. ಆದರೆ, ಭಾರತ ಸರ್ಕಾರವು ಆಮದು ಕಾರುಗಳ ಮೇಲೆ ಶೇ.100 ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿತ್ತು. ಅಂತಿಮವಾಗಿ ಮಾತುಕತೆ ಮುರಿದು ಬಿದ್ದ ಪರಣಾಮ ಭಾರತದಲ್ಲಿ ವಿದ್ಯುತ್ ಚಾಲಿತ ಕಾರುಗಳ ಮಾರಾಟದಿಂದ ಟೆಸ್ಲಾ ಹಿಂದೆ ಸರಿದಿತ್ತು.

ಈ ಹಿಂದೆ ಭಾರತವು, ದೇಶಿ ಮಾರುಕಟ್ಟೆಯಲ್ಲೇ ಟೆಸ್ಲಾ ತನ್ನ ಕಾರುಗಳನ್ನು ಉತ್ಪಾದಿಸಬೇಕೆಂದು ಬಯಸಿತ್ತು. ಆದರೆ, ಸರ್ಕಾರದ ಈ ಪ್ರಸ್ತಾಪಕ್ಕೆ ಟೆಸ್ಲಾ ಒಪ್ಪಿರಲಿಲ್ಲ. ಹಾಗಾಗಿ, ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆಗಳು ಕಂಡು ಬಂದಿರಲಿಲ್ಲ. ಹೀಗಿದ್ದೂ, ಭಾರತದಲ್ಲಿ ಟೆಸ್ಲಾ ಕಾರುಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗುತ್ತಿದೆ. ಟೆಸ್ಲಾ ದೇಶದ ಯಾವ ಪ್ರದೇಶದಲ್ಲಿ ತನ್ನ ಘಟಕ ಆರಂಭಿಸಲಿದೆ, ಎಷ್ಟು ಹೂಡಿಕೆಯನ್ನು ಮಾಡಲಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಟೆಸ್ಲಾ ಕಂಪನಿಯ ಹಿರಿಯ ಅಧಿಕಾರಿಗಳು ಭಾರತದ ಪ್ರವಾಸದಲ್ಲಿದ್ದು, ಈ ಸಂಬಂಧ ಅವರು ಸರ್ಕಾರದ ಜತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದ ಅಧಿಕಾರಿಗಳನ್ನು ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಹೀಗಿದ್ದೂ, ಈ ಬಗ್ಗೆ ಟೆಸ್ಲಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಇದನ್ನೂ ಓದಿ: Musk Follows Modi: ಟ್ವಿಟರ್‌ನಲ್ಲಿ ಮೋದಿಯನ್ನು ಫಾಲೋ ಮಾಡಿದ ಎಲಾನ್‌ ಮಸ್ಕ್‌; ಭಾರತಕ್ಕೂ ಬರುತ್ತಾ ಟೆಸ್ಲಾ?

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲೇ ಈ ಬೆಳವಣಿಗೆ ನಡೆದಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕಳೆದ ವರ್ಷ ಕಂಪನಿಯು, ಶೋರೂಮ್‌ಗಾ ಸ್ಥಳವನ್ನು ಹುಡುಕಿತ್ತು, ಇದಕ್ಕಾಗಿ ತಂಡವನ್ನು ನೇಮಕ ಮಾಡಿಕೊಂಡಿತ್ತು. ಆದರೆ, ಕೊನೆಗಳಿಯಲ್ಲಿ ತನ್ನೆಲ್ಲ ಭಾರತದ ಚಟುವಟಿಕೆಗಳಿಗೆ ಪೂರ್ಣ ವಿರಾಮ ನೀಡಿತ್ತು.

ದೇಶ ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version