Site icon Vistara News

ದಯವೇ ಧರ್ಮದ ಮೂಲವಯ್ಯ; ಪ್ಯಾಲೆಸ್ತೀನ್‌ಗೆ ಭಾರತ 38 ಟನ್‌ ಅಗತ್ಯ ವಸ್ತುಗಳ ನೆರವು

Humanitarian Aid

Israel Palestine War: India Sends 38 Tonnes Of Humanitarian Aid To Palestine Amid War

ಲಖನೌ: ಗಾಜಾ ನಗರದಲ್ಲಿರುವ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ಆರಂಭಿಸಿದ ಬಳಿಕ ಇಸ್ರೇಲ್‌ ಪ್ರತಿದಾಳಿ ಆರಂಭಿಸಿದೆ. ಇದರಿಂದಾಗಿ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಂಘರ್ಷ (Israel Palestine War) ಉಲ್ಬಣಗೊಂಡಿದ್ದು, ಎರಡೂ ದೇಶಗಳ ನಾಗರಿಕರು ಮಾತ್ರ ಪರಿತಪಿಸುತ್ತಿದ್ದಾರೆ. ದಾಳಿ-ಪ್ರತಿದಾಳಿಯಿಂದ ಇದುವರೆಗೆ ಉಭಯ ದೇಶಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ, ಪ್ಯಾಲೆಸ್ತೀನ್‌ನ ಗಾಜಾ ನಗರವಂತೂ ಅಕ್ಷರಶಃ ಮಸಣದಂತಾಗಿದೆ. ಹಾಗಾಗಿ, ಭಾರತ ಸರ್ಕಾರವು ಪ್ಯಾಲೆಸ್ತೀನ್‌ಗೆ ಸುಮಾರು 38 ಟನ್‌ ಅಗತ್ಯ ವಸ್ತುಗಳನ್ನು (Humanitarian aid) ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದೆ.

ಭಾರತೀಯ ವಾಯುಪಡೆಯ ಸಿ-17 ವಿಮಾನದಲ್ಲಿ ಈಜಿಪ್ತ್‌ನ ಎಲ್‌-ಐರಿಶ್‌ ವಿಮಾನ ನಿಲ್ದಾಣಕ್ಕೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. 6.5 ಟನ್‌ ವೈದ್ಯಕೀಯ ಉಪಕರಣಗಳು ಹಾಗೂ 32 ಟನ್‌ ಅಗತ್ಯ ವಸ್ತುಗಳು ಸೇರಿ ಒಟ್ಟು 38.5 ಟನ್‌ ವಸ್ತುಗಳನ್ನು ಮಾನವೀಯತೆ ಆಧಾರದ ಮೇಲೆ ಪ್ಯಾಲೆಸ್ತೀನ್‌ಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿರುವ ಹಿಂಡನ್‌ ವಾಯುನೆಲೆಯಿಂದ ಅಗತ್ಯ ವಸ್ತುಗಳನ್ನು ಹೊತ್ತುಕೊಂಡ ವಿಮಾನವು ಹಾರಾಟ ಆರಂಭಿಸಿದೆ.

ಗಾಯಾಳುಗಳಿಗೆ ಬೇಕಾಗುವ ಔಷಧಗಳು, ಶಸ್ತ್ರಚಿಕಿತ್ಸೆಗೆ ಬೇಕಾಗುವ ವೈದ್ಯಕೀಯ ಸಲಕರಣೆಗಳು, ನಿರಾಶ್ರಿತರು ಆಶ್ರಯ ಪಡೆಯಲು ಟೆಂಟ್‌ಗಳು, ಸ್ಲೀಪಿಂಗ್‌ ಬ್ಯಾಗ್‌ಗಳು, ಟಾರ್ಪಲ್‌ಗಳು, ಸ್ಯಾನಿಟರಿ ಉಪಕರಣಗಳು, ನೀರು ಸ್ವಚ್ಛಗೊಳಿಸುವ ಟ್ಯಾಬ್ಲೆಟ್‌ಗಳು ಸೇರಿ ಹಲವು ವಸ್ತುಗಳನ್ನು ಭಾರತವು ಪ್ಯಾಲೆಸ್ತೀನ್‌ಗೆ ಕಳುಹಿಸಿದೆ.

ಗಾಜಾ ನಗರವೊಂದರಲ್ಲಿಯೇ ಸುಮಾರು 3,800 ಜನ ಮೃತಪಟ್ಟಿದ್ದಾರೆ. ಇನ್ನೂ ಸಾವಿರಾರು ಜನ ಗಾಯಗೊಂಡಿದ್ದಾರೆ. ಇಡೀ ನಗರವೇ ಮಸಣದಂತಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಪರಿತಪಿಸುವಂತಾಗಿದೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಹಾಗಾಗಿ, ಜಗತ್ತಿನ ಹಲವು ರಾಷ್ಟ್ರಗಳು ಪ್ಯಾಲೆಸ್ತೀನ್‌ಗೆ ಮಾನವೀಯತೆ ಆಧಾರದ ಮೇಲೆ ಅಗತ್ಯ ವಸ್ತುಗಳ ನೆರವು ನೀಡುತ್ತಿವೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಪೊಲೀಸರಿಗೂ ಕೇರಳದ ಟೇಲರ್‌ಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ!

ಮತ್ತೊಂದೆಡೆ, ಜಗತ್ತಿನ ಹಲವು ರಾಷ್ಟ್ರಗಳಿಂದ ಪ್ಯಾಲೆಸ್ತೀನ್‌ಗೆ ಅಗತ್ಯ ವಸ್ತುಗಳ ನೆರವು ಸಿಗುತ್ತಲೇ ಇಸ್ರೇಲ್‌ ಸೇನೆಯು ಗಾಜಾ ನಗರದ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಗಾಜಾ ನಗರದಲ್ಲಿರುವ ಮಸೀದಿಗಳು, ಉಗ್ರರು ಅಡಗಿರುವ ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ರಾಕೆಟ್‌ ದಾಳಿ ನಡೆಸುತ್ತಿದೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲೂ 1,400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Exit mobile version