ಟೆಲ್ ಅವಿವ್: ಪ್ಯಾಲೆಸ್ತೀನ್ (Palestine) ಕಾರ್ಮಿಕರ ಜಾಗದಲ್ಲಿ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ (Israel) ಮುಂದಾಗಿದೆ. ಇಸ್ರೇಲ್ ಸುಮಾರು ಒಂದು ಲಕ್ಷ ಭಾರತೀಯ ಕಾರ್ಮಿಕರನ್ನು (Indian workers) ನೇಮಿಸಿಕೊಳ್ಳುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಇತ್ತೀಚಿನ ಸಂಘರ್ಷದ (Israel- Palestine War) ಹಿನ್ನೆಲೆಯು ಈ ದೃಷ್ಟಿಯಿಂದ ಭಾರತಕ್ಕೆ ಆರ್ಥಿಕವಾಗಿ ಲಾಭದಾಯಕವಾದ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಈ ಉಪಕ್ರಮವು 90,000 ಪ್ಯಾಲೆಸ್ತೀನಿಯನ್ ಕಾರ್ಮಿಕರ ಸ್ಥಳಾಂತರಕ್ಕೆ ಪ್ರತಿ ಕ್ರಮವಾಗಿ ಮೂಡಿದೆ. ಏಕೆಂದರೆ ಯುದ್ಧದ ನಂತರ ಪ್ಯಾಲೆಸ್ತೀನ್ ಕಾರ್ಮಿಕರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ, ಭಯೋತ್ಪಾದನೆಯ ವಿರುದ್ಧ ಜಂಟಿ ನಿಲುವನ್ನು ಪ್ರತಿಪಾದಿಸಿದ್ದರು ಮತ್ತು ಪ್ರಸ್ತುತ ಬಿಕ್ಕಟ್ಟಿನ ವಿಚಾರದಲ್ಲಿ ಇಸ್ರೇಲ್‌ಗೆ ಭಾರತದ ದೃಢವಾದ ಬೆಂಬಲವನ್ನು ದೃಢಪಡಿಸಿದ್ದರು.
ಇಸ್ರೇಲ್‌ನ ಕಾರ್ಮಿಕ ಮಾರುಕಟ್ಟೆಯಲ್ಲಿನ ಸ್ಥಿತ್ಯಂತರವು ಭಾರತೀಯ ಕಾರ್ಮಿಕರಿಗೆ ಧನಾತ್ಮಕವಾಗಿ ತೋರುತ್ತಿದೆ. ಭಾರತದಿಂದ ವಿದೇಶಕ್ಕೆ, ಅದರಲ್ಲೂ ಮಧ್ಯ ಪ್ರಾಚ್ಯಕ್ಕೆ ಉದ್ಯೋಗಕ್ಕಾಗಿ ತೆರಳುವವರ ಅವಕಾಶಗಳು ಇದರಿಂದ ಹೆಚ್ಚಲಿವೆ. ಇಸ್ರೇಲ್‌ನ ಈ ಹೊಸ ಆರ್ಥಿಕ ನೀತಿಯು ಪ್ಯಾಲೆಸ್ತೀನ್‌ಗೆ ನಷ್ಟವಾಗಿದ್ದರೆ, ಭಾರತಕ್ಕೆ ಲಾಭವಾಗಿದೆ ಎಂದು ಗ್ರಹಿಸಬಹುದು. ವಾಣಿಜ್ಯ- ಆರ್ಥಿಕ ವಿಚಾರಗಳಲ್ಲಿ ಭಾರತ ಮತ್ತು ಇಸ್ರೇಲ್ ಹೆಚ್ಚು ನಿಕಟವಾಗಿವೆ.
ಇತ್ತೀಚೆಗೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ (ಯುಎನ್‌ಜಿಎ) ಇಸ್ರೇಲ್‌ನ ಯುದ್ಧಕ್ರಮದ ಬಗ್ಗೆ ಮತದಾನ ನಡೆದಾಗ ಭಾರತವು ಅದಕ್ಕೆ ಗೈರುಹಾಜರಿಯಾಗಿತ್ತು. ಇಸ್ರೇಲ್- ಹಮಾಸ್ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಮತದಾನದಲ್ಲಿ ಕರೆ ನೀಡಲಾಗಿತ್ತು. ಆದರೆ ಭಾರತದ ಆಯ್ಕೆಯು ಇಸ್ರೇಲ್‌ನೊಂದಿಗಿದ್ದು, ಅದರೊಂದಿಗೆ ಇನ್ನಷ್ಟು ಬಲವಾದ ಮೈತ್ರಿಯನ್ನು ಪ್ರತಿಬಿಂಬಿಸಿದೆ. ಈ ಮೈತ್ರಿಯು 1992ರಿಂದ ದೃಢವಾಗಿದೆ. ಆ ವರ್ಷ ಎರಡು ರಾಷ್ಟ್ರಗಳ ನಡುವಿನ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳ ಆರಂಭವಾಗಿತ್ತು.
ಭಾರತ-ಇಸ್ರೇಲಿ ಸಂಬಂಧಗಳು ವಿಶೇಷವಾಗಿ ವ್ಯಾಪಾರದ ಮೂಲಕ ಬಲಗೊಂಡಿವೆ. ಭಾರತವು ಇಸ್ರೇಲಿ ರಕ್ಷಣಾ ಸಾಮಗ್ರಿಗಳ ಗಮನಾರ್ಹ ಆಮದುದಾರನಾಗಿ ಹೊರಹೊಮ್ಮಿದೆ. ನಾಯಕರ ನಡುವಿನ ಸಂಬಂಧವು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 2017ರಲ್ಲಿ ಪ್ರಧಾನಿ ಮೋದಿಯವರ ಐತಿಹಾಸಿಕ ಇಸ್ರೇಲ್ ಭೇಟಿ ಇದಕ್ಕೆ ಉದಾಹರಣೆ.
ಇದನ್ನೂ ಓದಿ: Israel Palestine War: ಗಾಜಾ ಎರಡು ತುಂಡು; ಗೆಲ್ಲುವವರೆಗೂ ವಿರಾಮವಿಲ್ಲ: ಇಸ್ರೇಲ್