Site icon Vistara News

ವಿಸ್ತಾರ ಸಂಪಾದಕೀಯ: ಹಮಾಸ್‌ ಉಗ್ರರ ಸಮರ್ಥಕರು ಭಯೋತ್ಪಾದಕರಿಗೆ ಸಮಾನರು

Hamas Terrorists

Israel Palestine War: Pro Hamas People Are Equivalent To Terrorists

ಇಸ್ರೇಲ್‌ ಮೇಲೆ ಸುಮಾರು 5 ಸಾವಿರ ರಾಕೆಟ್‌ಗಳ ಮೂಲಕ ಹಾಗೂ ಒಳನುಗ್ಗಿ ಸಿಕ್ಕಸಿಕ್ಕವರನ್ನು ಗುಂಡಿಕ್ಕಿ ಕೊಂದು (Israel Palestine War) 4 ಸಾವಿರ ಜನರ ಸಾವಿಗೆ ಕಾರಣವಾಗಿರುವ, ಇನ್ನೂ ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ವಿರುದ್ಧ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹಮಾಸ್‌ ಉಗ್ರರ (Hamas Terrorists) ನಾಶಕ್ಕೆ ಇಸ್ರೇಲ್‌ ಶಪಥ ಮಾಡಿದೆ. ಅಮೆರಿಕ ಹಾಗೂ ಬ್ರಿಟನ್‌ ಕೂಡ ಇಸ್ರೇಲ್‌ಗೆ ಇದಕ್ಕಾಗಿ ಶಸ್ತ್ರಾಸ್ತ್ರ ಒದಗಿಸಿದೆ. ಭಾರತವೂ ಇಸ್ರೇಲ್‌ ಪರ ನಿಂತಿದೆ. ಆದರೆ, ಹಮಾಸ್‌ ಉಗ್ರರ ಪರ ಮಾತಾಡುತ್ತಿರುವವರು, ಅವರು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿರುವವರು ನಮ್ಮ ನಾಗರಿಕ ಸಮಾಜದ ನಡುವೆಯೇ ಕಂಡುಬರುತ್ತಿರುವುದು ಸೋಜಿಗ. ಉತ್ತರ ಪ್ರದೇಶದಲ್ಲಿ ಮೌಲ್ವಿಯೊಬ್ಬ ಹಮಾಸ್‌ ಉಗ್ರರ ಪರವಾಗಿ ಪೋಸ್ಟ್‌ ಹಂಚಿಕೊಂಡಿದ್ದಾನೆ. ಇದು ವೈರಲ್‌ ಆಗಿದೆ. ಇಸ್ರೇಲ್-ಪ್ಯಾಲೆಸ್ತೀನ್‌ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಇದು ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ದೂರು ದಾಖಲಿಸಿ ಬಂಧಿಸಲಾಗಿದೆ. ಇದನ್ನು ಶೇರ್‌ ಮಾಡಿದವನ ಮೇಲೂ ಕೇಸ್‌ ದಾಖಲಿಸಲಾಗಿದೆ. ಇನ್ನೊಂದು ಇಂಥ ಪ್ರಕರಣ ಕರ್ನಾಟಕದ್ದು. ಮಂಗಳೂರಿನ ಬಂದರು ಪ್ರದೇಶದ ಝಾಕಿರ್‌ ಎಂಬಾತ ವಿಡಿಯೊ ಮೂಲಕ ಹಮಾಸ್‌ ಉಗ್ರರಿಗೆ ತನ್ನ ಬೆಂಬಲ ಸಾರಿದ್ದಾನೆ. ʻʻಪ್ಯಾಲೆಸ್ತೀನ್​, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲಿ. ಹಮಾಸಿಗರು​​ ದೇಶ ಪ್ರೇಮಿ ಯೋಧರು. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ‌ ಸಲ್ಲಿಸಬೇಕುʼʼ ಎಂದು ಹೇಳಿರುವ ಝಾಕಿರ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ಮತ್ತು ಈತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದು ಸಹಜ. ಇಸ್ರೇಲ್‌ ಮೇಲೆ ನಡೆದಿರುವ ಹಮಾಸ್‌ ಉಗ್ರರ ದಾಳಿಯ ಬಗ್ಗೆ ಭಾರತದ ಅಧಿಕೃತ ನಿಲುವು ಏನು ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಭಾರತ ಎಂದೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಭಾರತ ಉಗ್ರಗಾಮಿ ಕೃತ್ಯಗಳ ದುಷ್ಫಲವನ್ನು ಅನುಭವಿಸಿರುವ ದೇಶವೂ ಆಗಿದೆ. ಹೀಗಾಗಿ ಉಗ್ರ ಕೃತ್ಯಗಳು ಒಂದು ದೇಶಕ್ಕೆ ಏನನ್ನು ಮಾಡುತ್ತವೆ, ಎಷ್ಟು ತಲೆಮಾರುಗಳ ಕಾಲ ಅದು ತನ್ನ ಕಲೆಗಳನ್ನು ಉಳಿಸುತ್ತದೆ, ಅದರಿಂದ ಯಾತನೆ ಅನುಭವಿಸುವ ಜನರು ಯಾರು, ಅದರಿಂದ ಒಂದು ಪ್ರದೇಶದ ಅಭಿವೃದ್ಧಿಯೇ ಹೇಗೆ ಮೊಟಕುಗೊಳ್ಳುತ್ತದೆ ಎಂಬುದನ್ನೆಲ್ಲ ನೋಡಿದೆ. ಉದಾಹರಣೆಗೆ ಕಾಶ್ಮೀರವನ್ನು ನೋಡಬಹುದು. ಹೀಗೆ ಇಸ್ಲಾಮಿಕ್‌ ಭಯೋತ್ಪಾದನೆಯಿಂದ ಯಾತನೆ ಅನುಭವಿಸಿದ ದೇಶವೊಂದು, ತನ್ನಂತೆಯೇ ಯಾತನೆ ಅನುಭವಿಸಿದ ಇನ್ನೊಂದು ದೇಶದ ಜತೆಗೆ ನಿಲ್ಲಬೇಕಲ್ಲದೆ ದಾಳಿಕೋರರ ಜತೆಗಲ್ಲ. ಸಹಜವಾಗಿಯೇ ಭಾರತ ಇಸ್ರೇಲ್‌ ಪರ ನಿಂತಿದೆ. ಹೀಗಾಗಿ ಭಾರತದ ಜವಾಬ್ದಾರಿಯುತ ಪ್ರಜೆಗಳ ನಿಲುವೂ ಇದೇ ಆಗಿರಬೇಕಾದುದು ಅವಶ್ಯ. ಅದನ್ನು ಬಿಟ್ಟು ಪ್ರತ್ಯೇಕ ಧ್ವನಿ ಎತ್ತುವವರ ಉದ್ದೇಶಗಳನ್ನು ಸಂಶಯಿಸಬೇಕಾಗುತ್ತದೆ.

ಹಮಾಸ್‌ ಉಗ್ರರು ಯುದ್ಧವೀರರಲ್ಲ. ಯಾವ ದೇಶವೂ ಅವರನ್ನು ಗುರುತಿಸಿಲ್ಲ. ಅವರಿಗೆ ವಿಶ್ವಸಂಸ್ಥೆಯೂ ಅಧಿಕೃತ ಸ್ಥಾನಮಾನ ನೀಡಿಲ್ಲ. ಅದೊಂದು ಪುಂಡರ ಗುಂಪು. ಇಸ್ರೇಲ್‌ನಲ್ಲಿ ಹಾವಳಿ ಎಬ್ಬಿಸುವುದು, ಯಹೂದಿಗಳನ್ನು ನಾಶ ಮಾಡುವುದು ಸದ್ಯದ ಅವರ ಗುರಿ. ʼʼಸದ್ಯ ಇಸ್ರೇಲ್‌ ನಮ್ಮ ಗುರಿ. ಇದು ಆರಂಭ ಮಾತ್ರ. ಮುಂದೆ ಇಡೀ ಜಗತ್ತೇ ನಮ್ಮ ಕಾನೂನಿನಡಿಯಲ್ಲಿ ಬರಲಿದೆʼʼ ಎಂದು ಹಮಾಸ್‌ನ ಸುಪ್ರೀಂ ಕಮಾಂಡರ್‌ ಒಬ್ಬ ಯಾರ ಭಯವೂ ಇಲ್ಲದೇ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಾನೆ. ಅಲ್ಲಿಗೆ ಅವರ ಉದ್ದೇಶ ಸ್ಪಷ್ಟವಾಗಿದೆ. ಅಂದರೆ ಭೂಮಂಡಲದಲ್ಲಿ ಶರಿಯಾ ಕಾನೂನು ಸ್ಥಾಪಿಸಲು ಹೊರಟಿರುವ ಐಸಿಸ್‌ಗೂ ಈ ಹಮಾಸ್‌ಗೂ ಯಾವ ವ್ಯತ್ಯಾಸವೂ ಇಲ್ಲ. ಐಸಿಸ್‌ ಮತ್ತು ಹಮಾಸ್‌ ಪ್ರಕಾರ ಇತರ ಎಲ್ಲ ಧರ್ಮಗಳವರೂ ದೈವದ್ರೋಹಿಗಳು; ಮುಸ್ಲಿಮರು ಹೊರತುಪಡಿಸಿದರೆ ಉಳಿದೆಲ್ಲರೂ ನಾಶಪಡಿಸಲಿಕ್ಕಾಗಿಯೇ ಇರುವವರು. ಇತರ ಧರ್ಮಗಳು ಪುರುಷರನ್ನು ಕೊಂದು ನಾಶಪಡಿಸುವುದು, ಅವರ ಮಹಿಳೆಯರನ್ನು ಬಲಾತ್ಕರಿಸಿ ತಮ್ಮ ಲೈಂಗಿಕ ಜೀತದಾಳುಗಳನ್ನಾಗಿ ಮಾಡಿಕೊಳ್ಳುವುದು, ಮಕ್ಕಳನ್ನು ಗುಲಾಮರನ್ನಾಗಿ ಅಥವಾ ಭವಿಷ್ಯದ ಜಿಹಾದಿಗಳಾಗಿ ತಯಾರಿ ಮಾಡುವುದು ಇವರ ಅಂತಿಮ ಗುರಿ. ಐಸಿಸ್‌ ಮಾಡಿದ್ದು ಇದನ್ನೇ. ಈಗ ಇಸ್ರೇಲ್‌ನಲ್ಲಿ ಹಮಾಸ್‌ ಮಾಡಿರುವುದೂ ಇದನ್ನೇ. ಅದು ಇಸ್ರೇಲಿ ಗಂಡಸರನ್ನು ಕೊಂದಿದೆ. ಮಹಿಳೆಯರು ಹಾಗೂ ಮಕ್ಕಳನ್ನು ಒತ್ತಯಾಳುಗಳಾಗಿ ಹೊತ್ತೊಯ್ದಿದೆ.

ಇದನ್ನೂ ಓದಿ: Israel Palestine War: ಹಮಾಸ್ ಉಗ್ರರ ಪರ ಪೋಸ್ಟ್;‌ ಉತ್ತರ ಪ್ರದೇಶದಲ್ಲಿ ಮೌಲ್ವಿಯ ಬಂಧನ

ಇಂಥ ಅಮಾನುಷ ಕೃತ್ಯ ಮಾಡಿದವರನ್ನು ಸಮರ್ಥಿಸಿಕೊಳ್ಳುವ ಮನಸ್ಥಿತಿಯನ್ನು ಏನೆಂದು ಕರೆಯೋಣ? ಇವರು ಬಹುಶಃ ನಮ್ಮನಿಮ್ಮಂಥ ಸಾಮಾನ್ಯ ಮನುಷ್ಯರಂತೂ ಆಗಿರಲಿಕ್ಕಿಲ್ಲ. ಇವರು ಒಂದೋ ಈ ಹಮಾಸ್‌ ಉಗ್ರರ ಜತೆಗೇ ಇರಬೇಕಾದವರು; ಅಥವಾ ಜೈಲಿನ ಕಂಬಿಗಳ ಒಳಗೆ ಇರಬೇಕಾದವರು. ಉಗ್ರರ ಕೃತ್ಯಗಳನ್ನು ಸರಿ ಎನ್ನುವವರೂ ಉಗ್ರರಲ್ಲದೇ ಬೇರಿನ್ಯಾರೂ ಆಗಿರಲು ಸಾಧ್ಯವಿಲ್ಲ. ಇವರಿಗೆ ಅನ್ಯಧರ್ಮೀಯರ ಕತ್ತರಿಸಿದ ರುಂಡ ಹಾಗೂ ನೆತ್ತರನ್ನು ಕಂಡರೆ ಸಂತೋಷ. ಗಡಿಯಲ್ಲಿ ಉಗ್ರರು ನುಸುಳಿ ಹಿಂದೂಗಳನ್ನು ಕೊಂದರೆ ಆನಂದ. ಇವರು ನಮ್ಮ ನಡುವೆ ಸಾಮಾನ್ಯರಂತೆ ಇರಲು ಬಿಡಬಹುದೇ ಎಂಬ ಬಗ್ಗೆ ಸಂಶಯವಿದೆ. ಇವರು ಯಾವುದೇ ಕ್ಷಣದಲ್ಲಾದರೂ ಮಾರಕಾಯುಧಗಳನ್ನು ಕೈಗೆತ್ತಿಕೊಳ್ಳಲಿಕ್ಕಿಲ್ಲ ಎಂದು ಹೇಗೆ ನಂಬೋಣ? ಇಂಥವರನ್ನು ಹುಡುಕಿ ಸೂಕ್ತ ಕಾನೂನು ಕ್ರಮ ಕೈಗೊಂಡು, ಜೀವನಪೂರ್ತಿ ಕಂಬಿಗಳ ಹಿಂದಿರುವಂತೆ ನೋಡಿಳ್ಳಬೇಕಿದೆ. ಹಾಗೆಯೇ ಇಸ್ರೇಲಿಗರನ್ನು ಹಳಿಯುವ, ಇಸ್ಲಾಮಿಕ್‌ ಭಯೋತ್ಪಾದನೆಯನ್ನು ನಾಜೂಕಾದ ಶಬ್ದಜಾಲಗಳ ಮೂಲಕ ಸಮರ್ಥಿಸಿಕೊಳ್ಳುವ ʼಬುದ್ಧಿಜೀವಿʼಗಳ, ʼಇಂಟಲೆಕ್ಚುವಲ್‌ʼಗಳ ಜಾಲವೂ ಕ್ರಿಯಾಶೀಲವಾಗಿದೆ. ಇವರು ನಿಧಾನ ವಿಷದಂತೆ. ಇವರು ಸುಭದ್ರ ಮರವೊಂದರ ಒಳಗೇ ತಿಳಿಯದಂತೆ ಒಳಹೊಕ್ಕ ಗೆದ್ದಲುಗಳ ಹಾಗೆ. ಇವರು ಭಾರತದ ಗಣರಾಜ್ಯ ಎಂಬ ಗಟ್ಟಿ ವೃಕ್ಷವನ್ನು ಒಳಗಿನಿಂದ ಕೊರೆದು ಟೊಳ್ಳಾಗಿಸಿ ಸರ್ವನಾಶ ಮಾಡುತ್ತಿರುವವರು. ಇವರ ಬಗ್ಗೆಯೂ ಒಂದು ಕಣ್ಣಿಟ್ಟಿರುವುದು ಅಗತ್ಯವಾಗಿದೆ.

Exit mobile version