Site icon Vistara News

ITR FILING 2021-22 | ಇವತ್ತೇ ಕೊನೆಯ ದಿನ, ಹಾಗಿದ್ರೆ ಇವತ್ತೂ ಫೈಲಿಂಗ್‌ ಮಾಡದಿದ್ದರೆ ಏನಾಗ್ತದೆ?

ITR

ನವ ದೆಹಲಿ: ೨೦೨೧-೨೨ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಜುಲೈ ೩೧ ಕೊನೆ ದಿನ ಎಂದು ಸಾರಿ ಸಾರಿ ಹೇಳಲಾಗಿದೆ. ಯಾವುದೇ ಕಾರಣಕ್ಕೂ ಈ ಬಾರಿ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಕೊನೆಯ ಕ್ಷಣದಲ್ಲಾದರೂ ವಿಸ್ತರಣೆ ಆದೀತು ಎಂದು ಕಾಯುವವರ ಸಂಖ್ಯೆ ಕಡಿಮೆ ಏನಿಲ್ಲ.

೨೦೨೦-೨೧ನೇ ಸಾಲಿನಲ್ಲಿ ಡಿಸೆಂಬರ್‌ ೩೧ರವರೆಗೆ ವಿಸ್ತರಿತ ಗಡುವಿನಲ್ಲಿ ಒಟ್ಟು ೫.೮೯ ಕೋಟಿ ರೂ. ರಿಟರ್ನ್ಸ್‌ ಸಲ್ಲಿಕೆಯಾಗಿತ್ತು. ಈ ಸಾಲಿನಲ್ಲಿ ಜುಲೈ ೩೦ಕ್ಕೆ ಐದು ಕೋಟಿ ಸಲ್ಲಿಕೆಯಾಗಿವೆ. ಕೊನೆಯ ದಿನವಾದ ಭಾನುವಾರದ ಭರಾಟೆ ಇನ್ನೂ ಜೋರಾಗಿದ್ದು ಮಧ್ಯಾಹ್ನದ ಹೊತ್ತಿಗೆ ೧೯ ಮಂದಿ ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಸಲ್ಲಿಸದೆ ಹೋದರೆ ಏನಾಗುತ್ತದೆ?
ಜುಲೈ ೩೧ರ ಗಡುವಿನೊಳಗೆ ಅದಾಯ ತೆರಿಗೆ ಐಟಿಆರ್‌ ಸಲ್ಲಿಸದೆ ಹೋದರೆ ದೊಡ್ಡ ಸಮಸ್ಯೆ ಏನೂ ಆಗುವುದಿಲ್ಲ. ಈ ವರ್ಷದ ಡಿಸೆಂಬರ್‌ ೩೧ರವರೆಗೂ ಐಟಿಆರ್‌ ಸಲ್ಲಿಸಲು ಅವಕಾಶವಿದೆ. ಆದರೆ, ೫೦೦೦ ರೂ. ದಂಡ ವಿಧಿಸಲಾಗುತ್ತದೆ. ಈ ದಂಡದ ಮೊತ್ತ ಐದು ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಮಾತ್ರ ಅನ್ವಯ. ಒಂದು ವೇಳೆ ಒಟ್ಟು ಆದಾಯ ಐದು ಲಕ್ಷಕ್ಕಿಂತ ಕಡಿಮೆ ಇದ್ದರೆ ಒಂದು ಸಾವಿರ ರೂ. ದಂಡ ಪಾವತಿಸಿ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಯಾವಾಗ ಬೇಕಾದರೂ ಐಟಿಆರ್‌ ಸಲ್ಲಿಸಬಹುದು. ಆದಾಯ ತೆರಿಗೆ ಕಾಯಿದೆ ೧೯೬೧ರ ಪ್ರಕಾರ ವಿಳಂಬ ಶುಲ್ಕ (ಲೇಟ್‌ ಫೀ) ಪಾವತಿಸಿ ಐಟಿಆರ್‌ ಫೈಲಿಂಗ್‌ ಮಾಡುವುದಕ್ಕೆ ಅವಕಾಶವಿದೆ.

ಕೆಲವು ಅನನುಕೂಲಗಳೂ ಇವೆ!
ಹಾಗಂತ ಲೇಟ್‌ ಫೀ ಜತೆ ಐಟಿಆರ್‌ ಫೈಲ್‌ ಮಾಡುವುದರಿಂದ ಕೆಲವೊಂದು ಅನನುಕೂಲಗಳೂ ಇವೆ.
೧. ಒಬ್ಬ ವ್ಯಕ್ತಿ ಅಂತಿಮ ಗಡು ಮೀರಿದ ಬಳಿಕ ದಂಡ ಶುಲ್ಕರೊಂದಿಗೆ ಐಟಿಆರ್‌ ಫೈಲ್‌ ಮಾಡಿದರೆ ಅವನಿಗೆ ಕೆಲವೊಂದು ವಿಚಾರಗಳಲ್ಲಿ ನಷ್ಟವನ್ನು ಫಾರ್ವರ್ಡ್‌ ಮಾಡಲು ಅವಕಾಶವಿಲ್ಲ. ಉದಾಹರಣೆಗೆ, ಇತರ ಆದಾಯ ಮೂಲಗಳನ್ನು ಸೇರಿಸುವಂತಿಲ್ಲ, ಕ್ಯಾಪಿಟಲ್‌ ಗೇನ್ಸ್‌ನಿಂದ ಬಂದಿರುವ ಲಾಭವನ್ನು ತೋರಿಸುವಂತಿಲ್ಲ, ಉದ್ಯಮ ಮತ್ತು ವೃತ್ತಿಯಿಂದ ಬಂದಿರುವ ಇತರ ಆದಾಯ ಉಲ್ಲೇಖಿಸುವಂತಿಲ್ಲ. ಆದರೆ, ಮನೆ ಮತ್ತಿತರ ಆಸ್ತಿಗಳಿಂದ ಬಂದಿರುವ ಆದಾಯವನ್ನು ತೋರಿಸಲು ಯಾವುದೇ ಅಡ್ಡಿಯಿಲ್ಲ.

೨. ಒಂದು ವೇಳೆ ಆದಾಯ ತೆರಿಗೆ ರಿಫಂಡ್‌ ಬರುವುದಿದ್ದರೆ ಅದು ಐಟಿಆರ್‌ ಫೈಲಿಂಗ್‌ ಆಗಿ ಪರಿಶೀಲನೆ ಆದ ಮೇಲಷ್ಟೇ ಬರುತ್ತದೆ. ಅದಕ್ಕಿಂತ ಮೊದಲು ಪಾವತಿಸಿದರೆ ತಕ್ಷಣವೇ ಬರುತ್ತದೆ.

೩. ಆದಾಯ ತೆರಿಗೆ ರಿಫಂಡ್‌ ಮಾಡುವಾಗ ವಿಳಂಬವಾದರೆ ಇಲಾಖೆ ಗ್ರಾಹಕನಿಗೆ ಪ್ರತಿ ತಿಂಗಳು ೦.೫% ಬಡ್ಡಿಯನ್ನು ನೀಡುತ್ತದೆ. ಈ ಅನುಕೂಲ ಅಂತಿಮ ಗಡು ಮೀರಿ ಪಾವತಿ ಮಾಡುವವನಿಗೆ ಇರುವುದಿಲ್ಲ.

೪. ವಿಳಂಬವಾಗಿ ಐಟಿಆರ್‌ ಫೈಲಿಂಗ್‌ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಆಗ ನಿಮಗೆ ಬರಬೇಕಾದ ರಿಫಂಡ್‌ನಲ್ಲಿ ೫೦೦೦ ರೂ. ದಂಡ ಶುಲ್ಕವನ್ನು ಮುರಿದುಕೊಳ್ಳಲಾಗುತ್ತದೆ. ಒಂದು ವೇಳೆ ರಿಫಂಡ್‌ ಮೊತ್ತ ೫೦೦೦ ರೂ.ಗಿಂತ ಕಡಿಮೆ ಇದ್ದರೆ ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ. ಇದು ತಿಂಗಳಿಗೆ ೧% ಇರುತ್ತದೆ.

ಡಿಸೆಂಬರ್‌ ೩೧ಕ್ಕೂ ಪಾವತಿಸದಿದ್ದರೆ!?
ಇನ್ನೂ ಒಂದು ಸಾಧ್ಯತೆಯನ್ನು ಪರಿಶೀಲಿಸುವುದಾದರೆ, ಒಂದು ವೇಳೆ ಡಿಸೆಂಬರ್‌ ೩೧ರ ಗಡುವಿಗೂ ಆದಾಯ ತೆರಿಗೆ ರಿಟರ್ನ್ಸ್‌ ಫೈಲಿಂಗ್‌ ಮಾಡದೆ ಹೋದರೆ ಏನಾಗುತ್ತದೆ? ಆ ಬಳಿಕ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದರಿಂದ ಒಂದು ವರ್ಷದ ಐಟಿಆರ್‌ ದಾಖಲೆಯೇ ಸಿಗುವುದಿಲ್ಲ. ಹಾಗಿರುವಾಗ ಯಾವುದಾದರೂ ಲೋನ್‌ ಮಾಡಬೇಕು, ಮನೆ ಕಟ್ಟಬೇಕು ಎಂದಾದರೆ ಕಷ್ಟವಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆಯೇ ನಿಮ್ಮ ಐಟಿಆರ್‌ ಫೈಲ್‌ ಆಗಿಲ್ಲ ಎಂದು ನೋಟಿಸ್‌ ಕಳುಹಿಸುವುದೂ ಉಂಟು. ಆಗ ಒಂದು ಛಾನ್ಸ್‌ ಉಳಿದಿರುತ್ತದೆ!

ಇದನ್ನೂ ಓದಿ| ITR Filing 2021-22| ಜುಲೈ 31ರ ಗಡುವು ವಿಸ್ತರಣೆಗೆ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಒತ್ತಾಯ

Exit mobile version