Site icon Vistara News

Jagan Mohan Reddy: ಬರೀ ಎಗ್‌ ಪಫ್ಸ್‌ಗಾಗಿ ಒಂದಲ್ಲ.. ಎರಡಲ್ಲ ಬರೋಬ್ಬರಿ 3.6 ಕೋಟಿ ರೂ. ವೆಚ್ಚ- ಜಗನ್‌ ಮತ್ತೊಂದು ಹಗರಣ ಬಯಲು

Jagan Mohan Reddy

ಹೈದರಾಬಾದ್‌:ತಮ್ಮ ಅಧಿಕಾರಾವಧಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ವಿಶಾಖಪಟ್ಟಣಂನಲ್ಲಿ ಅರಮನೆಯಂತಹ ಐಷಾರಾಮಿ ಬಂಗಲೆ ಕಟ್ಟಿಸಿಕೊಂಡು ಅಕ್ರಮ ಎಸಗಿರುವ ಆರೋಪದ ಬೆನ್ನಲ್ಲೇ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್‌ ಜಗನ್ ಮೋಹನ್ ರೆಡ್ಡಿ(Jagan Mohan Reddy) ವಿರುದ್ಧ ಮತ್ತೊಂದು ಹಗರಣ ಬಯಲಿಗೆ ಬಂದಿದೆ. ತಮ್ಮ ಅಧಿಕಾರಾವಧಿಯ ಐದು ವರ್ಷಗಳಲ್ಲಿ ಎಗ್‌ ಪಫ್ಸ್‌(Jagan Egg puffs Scam)ಗಾಗಿ ಬರೊಬ್ಬರಿ 3.6 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಿನಕ್ಕೆ 993 ‘ಮೊಟ್ಟೆ ಪಫ್ಸ್‌’ಗಳಂತೆ 5 ವರ್ಷಗಳಲ್ಲಿ 18.12 ಲಕ್ಷ ಪಫ್ಸ್‌ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಅಧಿಕಾರದಿಂದ ಕೆಳಗಿಳಿದ ಬಳಿಕ ಆಂಧ್ರ ಪ್ರದೇಶ ಮಾಜಿ ಸಿಎಂ ವೈಎಸ್ ಜಗನ್ ಮೋಹರ್ ರೆಡ್ಡಿ ವಿರುದ್ಧ ದಿನಕ್ಕೊಂದು ಆರೋಪಗಳು ಕೇಳಿಬರುತ್ತಿದ್ದು, ಇದೀಗ ಹೊಸದಾಗಿ ‘ಮೊಟ್ಟೆ ಪಫ್ಸ್’ ವಿವಾದ ಹೊಸದಾಗಿ ಸೇರ್ಪಡೆಯಾಗಿದೆ. ಜಗನ್ ಮೋಹನ್ ರೆಡ್ಡಿ ತಮ್ಮ ಅಧಿಕಾರಾವಧಿಯಲ್ಲಿ ಮೊಟ್ಟೆ ಪಫ್ಸ್ ಗಳಿಗಾಗಿ ಬರೊಬ್ಬರಿ 3.6 ಕೋಟಿ ರೂ ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪತ್ರಕರ್ತೆಯೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ‘ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ ವತಿಯಿಂದ ಪ್ರತಿದಿನ 993 ಮೊಟ್ಟೆ ಪಫ್ಸ್‌ಗಳನ್ನು ಖರೀದಿಸಲಾಗಿದ್ದು, 5 ವರ್ಷಗಳಲ್ಲಿ ಮೊಟ್ಟೆ ಪಫ್ಸ್‌ಗಳಗಾಗಿಯೇ 3.62 ಕೋಟಿ ಖರ್ಚು ಮಾಡಲಾಗಿದೆ. ವರ್ಷಕ್ಕೆ ಪಫ್ಸ್‌ಗಾಗಿಯೇ 72 ಲಕ್ಷ ರೂ. ವೆಚ್ಚವಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನು ಈ ಆರೋಪವನ್ನು ಜಗನ್‌ ಅವರ ವೈಎಸ್‌ಆರ್ ಕಾಂಗ್ರೆಸ್‌ ತಳ್ಳಿ ಹಾಕಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಮಾಹಿತಿಯ ಮೂಲವನ್ನು ಉಲ್ಲೇಖಿಸದೆ ಪತ್ರಕರ್ತರು ಆಧಾರರಹಿತ ಆರೋಪ ಮಾಡುತ್ತಿರುವುದು ನಿಜಕ್ಕೂ ನಿರಾಶೆ ಮೂಡಿಸುತ್ತದೆ. ಪುರಾವೆಗಳಿಲ್ಲದೆ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ. ಮಾಧ್ಯಮಗಳೂ ಇಂತಹ ವದಂತಿಗಳಿಗೆ ಆದ್ಯತೆ ನೀಡುತ್ತಿರುವುದು ವಿಷಾದನೀಯ ಎಂದಿದೆ.

ಎನ್‌.ಚಂದ್ರಬಾಬು ನಾಯ್ಡು (N Chandra Babu Naidu) ಅವರ ಟಿಡಿಪಿಯು ಆಂಧ್ರದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ, “ಜಗನ್‌ ಮೋಹನ್‌ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ 500 ಕೋಟಿ ರೂ. ವೆಚ್ಚದಲ್ಲಿ ವಿಶಾಖಪಟ್ಟಣಂನಲ್ಲಿ ಅರಮನೆಯಂತಹ ಐಷಾರಾಮಿ ಬಂಗಲೆ ಕಟ್ಟಿಸಿಕೊಂಡಿದ್ದಾರೆ” ಎಂಬುದಾಗಿ ಟಿಡಿಪಿ ಗಂಭೀರ ಆರೋಪ ಮಾಡಿದೆ.

ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಇಂತಹ ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ. ಇದನ್ನೇ ಪಾರ್ಟಿ ಕಚೇರಿ ಮಾಡುವುದು ಜಗನ್‌ ಮೋಹನ್‌ ರೆಡ್ಡಿ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ. ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ. ವೈಎಸ್‌ಆರ್‌ಸಿಪಿಯು ಕೇವಲ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಅವರಿಗೆ ಮುಖಭಂಗ ತಂದಿದೆ.

ಇದನ್ನೂ ಓದಿ: Jagan Mohan Reddy: ಸರ್ಕಾರದ 500 ಕೋಟಿ ರೂ.ನಲ್ಲಿ ಜಗನ್‌ ಅರಮನೆ ನಿರ್ಮಾಣ? ಟಿಡಿಪಿ ಸ್ಫೋಟಕ ಆರೋಪ

Exit mobile version