Site icon Vistara News

Deepavali 2023: ಮೋದಿ ಪರವಾಗಿ ರಿಷಿ ಸುನಕ್‌ಗೆ ದೀಪಾವಳಿ ಶುಭಾಶಯ ಕೋರಿದ ಜೈಶಂಕರ್

S Jaishankar And Rishi Sunak

Jaishankar meets Rishi Sunak in London to extend Diwali wishes from PM Narendra Modi

ಲಂಡನ್: ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಕೇಳಿಸುತ್ತಿದೆ. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರ ಜತೆ ಹಬ್ಬದ ಆಚರಣೆ ಭರ್ಜರಿಯಾಗಿದೆ. ಇದರ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ (Minister S Jaishankar) ಅವರು ಲಂಡನ್‌ನಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ (Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಅವರನ್ನು ಭೇಟಿಯಾಗಿದ್ದು, ಮೋದಿ ಅವರ ಪರವಾಗಿ ದೀಪಾವಳಿ ಶುಭಾಶಯ ಕೋರಿದ್ದಾರೆ.

ಲಂಡನ್‌ನ 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಪತ್ನಿ ಕ್ಯೋಕೊ ಜೈಶಂಕರ್‌ ಅವರ ಜತೆ ತೆರಳಿದ ಎಸ್‌. ಜೈಶಂಕರ್‌, ರಿಷಿ ಸುನಕ್‌ ಹಾಗೂ ಅಕ್ಷತಾ ಮೂರ್ತಿ ಅವರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಹಾಗೆಯೇ, ನರೇಂದ್ರ ಮೋದಿ ಅವರು ರವಾನಿಸಿದ ದೀಪಾವಳಿ ಶುಭಾಶಯಗಳನ್ನೂ ತಿಳಿಸಿದರು. ಇದೇ ವೇಳೆ, ಗಣೇಶನ ಮೂರ್ತಿ ಹಾಗೂ ವಿರಾಟ್‌ ಕೊಹ್ಲಿ ಸಹಿ ಮಾಡಿರುವ ಕ್ರಿಕೆಟ್‌ ಬ್ಯಾಟನ್ನು ಸುನಕ್‌ ದಂಪತಿಗೆ ಉಡುಗೊರೆಯಾಗಿ ನೀಡಿದರು.

ರಿಷಿ ಸುನಕ್‌ ದಂಪತಿಯನ್ನು ಭೇಟಿಯಾದ ಬಳಿಕ ಫೋಟೊಗಳ ಸಮೇತ ಜೈಶಂಕರ್‌ ಪೋಸ್ಟ್‌ ಮಾಡಿದ್ದಾರೆ. “ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ದೀಪಾವಳಿ ಹಬ್ಬದಂದು ಭೇಟಿಯಾಗಿದ್ದು ಸಂತಸ ತಂದಿದೆ. ನರೇಂದ್ರ ಮೋದಿ ಅವರ ಪರವಾಗಿಯೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದೆ. ಭಾರತ ಹಾಗೂ ಬ್ರಿಟನ್‌ ಸಂಬಂಧವು ಅನೂಹ್ಯವಾಗಿದೆ. ನಮಗೆ ಆತಿಥ್ಯ ನೀಡಿದ ರಿಷಿ ಸುನಕ್‌ ದಂಪತಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Muhurat Trading: ದೀಪಾವಳಿ ಮುಹೂರ್ತ ಟ್ರೇಡಿಂಗ್‌ನಲ್ಲಿ ಹೂಡಿಕೆದಾರರಿಗೆ 2.22 ಲಕ್ಷ ಕೋಟಿ ಲಾಭ!

ಎಸ್‌. ಜೈಶಂಕರ್‌ ಹಾಗೂ ಅವರ ಪತ್ನಿಯು ಲಂಡನ್‌ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ದೇವಾಲಯಕ್ಕೂ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. “ಬ್ಯಾಪ್ಸ್‌ ಶ್ರೀ ಸ್ವಾಮಿ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ. ಜಗತ್ತಿನಾದ್ಯಂತ ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದೆ. ಹಾಗೆಯೇ, ಲಂಡನ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ಭೇಟಿಯಾಗುವ ಅವಕಾಶ ನನ್ನದಾಯಿತು” ಎಂದು ಪೋಸ್ಟ್‌ ಮಾಡಿದ್ದಾರೆ.

ಯೋಧರೊಂದಿಗೆ ಮೋದಿ ದೀಪಾವಳಿ ಆಚರಣೆ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ, ಸೈನಿಕರಿಗೆ ಸಿಹಿ ತಿನ್ನಿಸಿದರು. ಇದೇ ವೇಳೆ ಮಾತನಾಡಿದ ಮೋದಿ, “ನೀವು (ಯೋಧರು) ಎಲ್ಲಿ ಇರುತ್ತೀರೋ, ಅಲ್ಲಿಯೇ ನನ್ನ ಹಬ್ಬ” ಎಂದು ಹೇಳಿದರು. ಹಾಗೆಯೆ, ಸಾಲು ಸಾಲು ಪೋಸ್ಟ್‌ ಮಾಡಿದ ಮೋದಿ, ದೇಶದ ರಕ್ಷಣೆಗೆ ಯೋಧರ ಕೊಡುಗೆಯನ್ನು ಸ್ಮರಿಸಿದರು. 

Exit mobile version