ಹೊಸದಿಲ್ಲಿ: ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾ (Actress, former MP Jaya Prada) ಅವರನ್ನು ಬಂಧಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು (Rampur MP/MLA court) ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿದೆ. ವಿಶೇಷ ತಂಡ ರಚಿಸಿ ಮಾಜಿ ಸಂಸದರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿದೆ.
ಜಯಪ್ರದಾ ಅವರು ಅನೇಕ ಬಾರಿ ನ್ಯಾಯಾಲಯಕ್ಕೆ ಹಾಜರಾಗದ ನಂತರ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಜಯಪ್ರದಾ ವಿರುದ್ಧ ಹೊರಡಿಸಲಾದ ಏಳನೇ ವಾರಂಟ್ ಇದಾಗಿದ್ದು, ಆಕೆಯನ್ನು ಬಂಧಿಸುವಂತೆ ರಾಂಪುರ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.
2019ರ ಎರಡು ಪ್ರಕರಣಗಳಲ್ಲಿ ಜಯಪ್ರದಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನಟಿ ತಲೆಮರೆಸಿಕೊಂಡಿದ್ದಾರೆ.
ಜಯಪ್ರದಾ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಚೆನ್ನೈನ ನ್ಯಾಯಾಲಯವು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ತಪ್ಪಿತಸ್ಥರೆಂದು ಘೋಷಿಸಿತು. ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಜಯಪ್ರದಾ ಅವರ ಥಿಯೇಟರ್‌ನ ಕಾರ್ಮಿಕರಿಗೆ ಇಎಸ್‌ಐ ಹಣವನ್ನು ಪಾವತಿಸಿರಲಿಲ್ಲ. ವರದಿಗಳ ಪ್ರಕಾರ ಜಯಪ್ರದಾ ಅಪರಾಧವನ್ನು ಒಪ್ಪಿಕೊಂಡಿದ್ದು, ಬಾಕಿ ಪಾವತಿಸುವುದಾಗಿ ಒಪ್ಪಿದ್ದಾರೆ. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿದ್ದಾರೆ. ಆದರೆ ನ್ಯಾಯಾಲಯ ಆಕೆಯ ಮನವಿಯನ್ನು ತಿರಸ್ಕರಿಸಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದೆ.
ಜಯಪ್ರದಾ ಎಂದು ಕರೆಯಲ್ಪಡುವ ಲಲಿತಾ ರಾಣಿ ರಾವ್ ಅವರು 70, 80 ಮತ್ತು 90ರ ದಶಕದ ಆರಂಭದಲ್ಲಿ ಹಿಂದಿ, ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಹಬ್ಬ, ಶಬ್ದವೇದಿ, ಹುಲಿಯ ಹಾಲಿನ ಮೇವು ಮುಂತಾದ ಕನ್ನಡ ಚಲನಚಿತ್ರಗಳಲ್ಲಿ, ಅಡವಿ ರಾಮುಡು, ಸಿರಿ ಸಿರಿ ಮುವ್ವ, ಸೀತಾ ರಾಮ ವನವಾಸಂ, ರಾಮ ಕೃಷ್ಣುಲು, ಮಜ್ಬೂರ್, ಫರಿಷ್ತೆ, ತ್ಯಾಗಿ, ಲವ್ ಕುಶ್, ಮುಂತಾದ ತೆಲುಗು, ತಮಿಳು, ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಂಡಿಯನ್ ಐಡಲ್, ಸಸುರಲ್ ಸಿಮರ್ ಕಾ, ಡ್ರಾಮಾ ಜೂನಿಯರ್ಸ್ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Jaya Prada: ಬಹುಭಾಷಾ ನಟಿ, ಕನ್ನಡದ ‘ಹಬ್ಬ’ ಚಿತ್ರದ ನಾಯಕಿ ಜಯಪ್ರದಾಗೆ ಜೈಲು ಶಿಕ್ಷೆ!