ಪಟನಾ: ಬಿಹಾರದಲ್ಲಿ ಕೊನೆಗೂ ಎಲ್ಲ ಊಹಾಪೋಹಗಳಿಗೆ ನಿತೀಶ್ ಕುಮಾರ್ (Nitish Kumar) ಅವರು ಇತಿಶ್ರೀ ಹಾಡಿದ್ದಾರೆ. ಆರ್‌ಜೆಡಿ ಜತೆಗಿನ ಮೈತ್ರಿ (JDU RJD Alliance) ಮುರಿದುಕೊಂಡ ನಿತೀಶ್ ಕುಮಾರ್ ಅವರು ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ (Bihar Politics) ನೀಡಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಮಹಾಘಟಬಂಧನದಿಂದ ಹೊರಬಂದಿರುವ ನಿತೀಶ್ ಕುಮಾರ್ ಅವರು ತಮ್ಮ ದೀರ್ಘಕಾಲದ ಮೈತ್ರಿಯಾದ ಎನ್‌ಡಿಎ ಜತೆ ಮತ್ತೆ ಕೈಜೋಡಿಸಿದ್ದಾರೆ. ಭಾನುವಾರ ಸಂಜೆ 5 ಗಂಟೆಗೆ ಬಿಜೆಪಿ ಬೆಂಬಲದೊಂದಿಗೆ 9ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಎನ್‌ಡಿಎ ಜತೆ ಕೈಜೋಡಿಸುತ್ತಿರುವುದು ಪ್ರಾಮುಖ್ಯತೆ ಪಡೆದಿದೆ. ಆರ್‌ಜೆಡಿ ಜತೆಗಿನ ಮೈತ್ರಿ ಮಾತ್ರವಲ್ಲ, ಇಂಡಿಯಾ ಒಕ್ಕೂಟದಿಂದಲೂ ನಿತೀಶ್ ಕುಮಾರ್ ಅವರು ಹೊರಬಂದಿದ್ದಾರೆ. ಈಗಾಗಲೇ ಆರ್‌ಜೆಡಿ ಸಚಿವರನ್ನು ವಜಾಗೊಳಿಸಿರುವ ನಿತೀಶ್ ಕುಮಾರ್ ಅವರು, ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ನೀಡಲಿದ್ದಾರೆ. ಬಿಜೆಪಿಯ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Bihar CM Nitish Kumar quits ruling alliance, hands over resignation letter to Governor
— ANI Digital (@ani_digital) January 28, 2024
Read @ANI Story | https://t.co/9SRPgiN2FD#NitishKumar #Biharpoltics #resign pic.twitter.com/p1xWKePEZ4
ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ನಿತೀಶ್ ಕುಮಾರ್, “ರಾಜ್ಯದ ಜನರ ಹಿತದೃಷ್ಟಿಯಿಂದ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ರಾಜೀನಾಮೆ ನೀಡಿದ್ದೇನೆ. ಶಾಸಕರ ಅಭಿಪ್ರಾಯ ಪಡೆದ ಬಳಿಕವೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇಂಡಿಯಾ ಒಕ್ಕೂಟದಿಂದಲೂ ನಾನು ಹೊರಬಂದಿದ್ದೇನೆ. ಮೈತ್ರಿಯಲ್ಲಿ ಒಗ್ಗಟ್ಟು ಮೂಡದ ಕಾರಣ ಹೊರಬಂದಿದ್ದೇನೆ” ಎಂದು ತಿಳಿಸಿದ್ದಾರೆ.
"Today, I have resigned as the Chief Minister and I have also told the Governor to dissolve the government in the state," says JD(U) president Nitish Kumar pic.twitter.com/uDgt6sbBO3
— ANI (@ANI) January 28, 2024
ಬಿಹಾರದಲ್ಲಿ ಪಕ್ಷಗಳ ಬಲಾಬಲ
ಇದನ್ನೂ ಓದಿ: Bihar Politics: ನಿತೀಶ್ ಕುಮಾರ್ ರಾಜೀನಾಮೆ; ಪಕ್ಷವಾರು ಬಲಾಬಲ ಹೇಗಿದೆ?
ಪಕ್ಷ | ಶಾಸಕರು |
ಆರ್‌ಜೆಡಿ | 79 |
ಬಿಜೆಪಿ | 78 |
ಜೆಡಿಯು | 45 |
ಸಿಪಿಐ (ಎಂಎಲ್) | 12 |
ಕಾಂಗ್ರೆಸ್ | 19 |
ಎಚ್‌ಎಎಂ | 04 |
ಎಐಎಂಐಎಂ | 01 |
ಸಿಪಿಎಂ | 02 |
ಸಿಪಿಐ | 02 |
ಸ್ವತಂತ್ರ | 01 |
ಒಟ್ಟು | 243 |
ಮ್ಯಾಜಿಕ್ ನಂಬರ್ | 122 |
ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್ ಕುಮಾರ್ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ