ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನ ಗುರುದ್ವಾರದ ಮೇಲೆ ಭಾನುವಾರ ನಡೆದ ಉಗ್ರರ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸನ್ (ಐಎಸ್‌ಕೆಪಿ) ಹೆಸರಿನಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ನಡೆಸಿದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಕಾಬೂಲ್‌ನಲ್ಲಿ ರಾಯಭಾರ ಕಚೇರಿಯನ್ನು ಮರಳಿ ತೆರೆಯುವ ಭಾರತದ ನಿರ್ಧಾರ ಐಎಸ್‌ಐಗೆ ಅಸಮಾಧಾನ ತಂದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಇವು ತಿಳಿಸಿವೆ.
ಭಾನುವಾರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಅಫ್ಘಾನಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಪಾಕಿಸ್ತಾನದ ಐಎಸ್‌ಐ ಬೇಹುಗಾರಿಕೆ ಸಂಸ್ಥೆಯು ಜೈಶ್ ಉಗ್ರರನ್ನು ಬಳಸಿಕೊಳ್ಳುತ್ತಿದೆ. ಇವರನ್ನು ಐಎಸ್‌ಕೆಪಿ ಹೆಸರಿನಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಜೈಶ್ ಉಗ್ರರು ನಾಗರಹಾರ್ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿ ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಐಎಸ್‌ಕೆಪಿ ಹೆಸರಿನಲ್ಲಿ ದಾಳಿ ನಡೆಸುತ್ತಿದ್ದಾರೆ.
ಕಾಬೂಲ್ ರಾಯಭಾರ ಕಚೇರಿಯನ್ನು ತೆರೆಯುವುದಾಗಿ ಘೋಷಿಸುವ ಭಾರತ ಸರ್ಕಾರದ ನಿರ್ಧಾರದಿಂದ ಪಾಕಿಸ್ತಾನ ಅಸಮಾಧಾನಗೊಂಡಿದೆ. ಭಾರತೀಯ ರಾಯಭಾರ ಸಿಬ್ಬಂದಿಗಳಿಗೆ ಸರ್ವ ಸುರಕ್ಷತೆ ಮತ್ತು ಭದ್ರತೆ ಒದಗಿಸಲಾಗುವುದು ಎಂದು ಇಬ್ಬರು ಪಾಕಿಸ್ತಾನಿ ಸಚಿವರು ಭಾರತೀಯ ಟಿವಿ ಚಾನೆಲ್‌ಗಳಲ್ಲಿ ಘೋಷಿಸಿದ್ದರು, ಇದನ್ನೂ ಐಎಸ್‌ಐ ಇಷ್ಟಪಟ್ಟಿರಲಿಲ್ಲ.
ಇದನ್ನೂ ಓದಿ: Terror attack: ಕಾಬೂಲ್‌ನ ಗುರುದ್ವಾರದ ಮೇಲೆ ಉಗ್ರ ದಾಳಿ, 25ಕ್ಕೂ ಅಧಿಕ ಸಾವು?
ISKP ಯ ಮಾಧ್ಯಮ ವಿಭಾಗವಾದ ಅಲ್ ಅಜೀಮ್ ಫೌಂಡೇಶನ್, ಪಾಷ್ಟೋ ಭಾಷೆಯಲ್ಲಿ ʼಬಹುದೇವತಾವಾದಿಗಳು ಬಹುದೇವತಾವಾದಿಗಳ ಸಹೋದರರು’ ಎಂಬ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ಬಿಜೆಪಿಯ ಮಾಜಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ವಿವಾದಿತ ಪ್ರವಾದಿ ನಿಂದನೆ ಹೇಳಿಕೆಗಳ ಕುರಿತು ವಿವರಿಸಲಾಗಿದೆ. ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲು ತಾಲಿಬಾನ್ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದೆ.
ಇನ್ನಷ್ಟು ಹೆಚ್ಚಿನ ದಾಳಿಗಳನ್ನು ನಡೆಸುವುದಾಗಿ ಐಎಸ್‌ಕೆಪಿ ಬೆದರಿಕೆ ಹಾಕಿದ್ದು, ಕಾಬೂಲ್ ವಿಮಾನ ನಿಲ್ದಾಣದ ದಾಳಿ (ಆಗಸ್ಟ್ 26, 2021) ಮತ್ತು ಗುರುದ್ವಾರ ದಾಳಿಯನ್ನು (ಮಾರ್ಚ್ 25, 2020) ಉದಾಹರಣೆಯಾಗಿ ಹೇಳಿದೆ. ಪ್ರವಾದಿಯನ್ನು ಅವಮಾನಿಸಿದ ಸೇಡು ತೀರಿಸಿಕೊಳ್ಳಲು ಹಿಂದೂಗಳನ್ನು ಗುರಿಯಾಗಿಸುವುದಾಗಿ ಎಚ್ಚರಿಸಿದೆ.
ಈ ನಡುವೆ, ಅಫ್ಘಾನಿಸ್ತಾನದಲ್ಲಿ ಭಾರತ ಆದಷ್ಟು ಬೇಗನೆ ರಾಯಭಾರ ಕಚೇರಿ ತೆರೆಯಬೇಕು, ಇಲ್ಲವಾದರೆ ಶತ್ರುಗಳು ಬಲಿಷ್ಠರಾಗಬಹುದು ಎಂದು ತಾಲಿಬಾನ್ ಸರ್ಕಾರ ಆಗ್ರಹಿಸಿದೆ. ಅಫ್ಘಾನಿಸ್ತಾನದ ಸಾಮಾನ್ಯ ಜನರಿಗೆ ಭಾರತದ ಸ್ನೇಹದ ಅಗತ್ಯವಿದೆ. ಭಾರತೀಯ ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಇಲ್ಲಿನ ಜನ ಬಯಸುತ್ತಾರೆ ಎಂದು ತಾಲಿಬಾನ್ ಸರ್ಕಾರದ ಉನ್ನತಾಧಿಕಾರಿಗಳು ಹೇಳಿದ್ದಾರೆ. ಭಾರತದಿಂದ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ವಿತರಣೆಯ ಕುರಿತು ಚರ್ಚಿಸಲು ಕಾಬೂಲ್‌ಗೆ ಭಾರತೀಯ ನಿಯೋಗ ಭೇಟಿ ನೀಡಿದ ಕೆಲವೇ ಗಂಟೆಗಳಲ್ಲಿ ಗುರುದ್ವಾರ ಮೇಲಿನ ದಾಳಿ ನಡೆದಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಣ್ಣುಮಕ್ಕಳ ಭೂಗತ ಶಾಲೆಗಳು ಚಾಲೂ: ಹೇಗೆ ನಡೀತಿದೆ?