ಲಖನೌ : ಉತ್ತರ ಪ್ರದೇಶದ ಪೊಲೀಸರ ಬಲೆಗೆ ಬಿದ್ದಿದ್ದ ಜೈಷ್ ಎ ಮೊಹಮ್ಮದ್ (JeM Terrorist) ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರು, ಪಾಕಿಸ್ತಾನದ ಉಗ್ರ ಸಂಘಟನೆಯ ಆಣತಿಯಂತೆ ಭಾರತದಲ್ಲಿ ಬೃಹತ್ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದರು ಹಾಗೂ ಅದಕ್ಕಾಗಿ ಆತ್ಮಾಹುತಿ ಬಾಂಬರ್‌ಗಳನ್ನು ಸಜ್ಜುಗೊಳಿಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಬಂಧಿತ ಉಗ್ರರನ್ನು ಮೊಹಮ್ಮದ್ ನದೀಮ್ ಹಾಗೂ ಆತನ ಸಹಚರ ಹಬಿಬುಲ್ ಇಸ್ಲಾಮ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ನದೀಮ್‌ನನ್ನು ಉತ್ತರ ಪ್ರದೇಶ ಪೊಲೀಸರು ಆಗಸ್ಟ್ ೧೨ರಂದು ಬಂಧಿಸಿದ್ದರೆ, ಹಬಿಬುಲ್‌ನನ್ನು ಮರುದಿನವೇ ವಶಕ್ಕೆ ಪಡೆದುಕೊಂಡಿದ್ದರು.
ಬಿಹಾರದ ಮೋತಿಹರಿ ಪ್ರದೇಶದ ಹಬಿಬುಲ್ ಸೂಸೈಡ್ ಬಾಂಬರ್‌ಗಳನ್ನು ಸಿದ್ಧಪಡಿಸುವ ಕುಕೃತ್ಯದಲ್ಲಿ ತೊಡಗಿದ್ದ. ಆತ ಮೊದಲ ದಿನ ಬಂಧನಕ್ಕೆ ಒಳಗಾಗಿದ್ದ ನದೀಮ್ ಜತೆ ಆನ್‌ಲೈನ್ ಮೂಲಕ ಸಂಪರ್ಕದಲ್ಲಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಅವರಿಬ್ಬರೂ ಭಾರತದಲ್ಲಿ ದೊಡ್ಡ ಮಟ್ಟದ ಭಯೋತ್ಪಾದನಾ ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದರು. ಅದಕ್ಕೆ ಪಾಕಿಸ್ತಾನದ ಉಗ್ರಗಾಮಿಗಳ ನೆರವು ಪಡೆಯುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಜಿಹಾದಿ ವಿಡಿಯೊ ಪ್ರಸರಣ
ಬಂಧಿತ ಹಬಿಬುಲ್ ಜಿಹಾದಿ ವಿಡಿಯೊಗಳನ್ನು ರವಾನಿಸಿ ಯುವಕರನ್ನು ತನ್ನತ್ತ ಸೆಳೆಯುತ್ತಿದ್ದ ಎನ್ನಲಾಗಿದೆ. ಹಬಿಬುಲ್ ಆರಂಭದಲ್ಲಿ ಮದರಸಾವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ಆತನನ್ನು ಬಿಡಿಸಿ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಆರೋಪಿ ಹಬಿಬುಲ್ ಇತ್ತೀಚೆಗೆ ೧೦ ಯುವಕರಿಗೆ ಜಿಹಾದಿ ವಿಡಿಯೊಗಳನ್ನು ಕಳುಹಿಸಿ, ಆತ್ಮಾಹುತಿ ಬಾಂಬರ್‌ಗಳಾಗಲು ಉತ್ತೇಜಿಸುತ್ತಿದ್ದ. ೨೦ ವರ್ಷದೊಳಗಿನ ಯುವಕರು ಹಾಗೂ ಗುಜರಾತ್‌ಗೆ ಆಗಾಗ ಹೋಗಿ ಬರುತ್ತಿದ್ದ ಯುವಕರನ್ನೇ ಆತ ಉಗ್ರ ಕೃತ್ಯಕ್ಕೆ ಸೇರಿಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹಬಿಬಲ್ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕರ ಜತೆ ನಿರಂತರವಾಗಿ ಆನ್‌ಲೈನ್ ಮೂಲಕ ಸಂಪರ್ಕದಲ್ಲಿ ಇರುತ್ತಿದ್ದ. ಅವರ ಆಣತಿಯಂತೆ ಆತ್ಮಾಹುತಿ ದಾಳಿಯನ್ನು ಮಾಡುವುದಕ್ಕೆ ಬೇಕಾಗುವ ಯೋಜನೆಗಳನ್ನು ರೂಪಿಸುತ್ತಿದ್ದ. ಅದಕ್ಕಾಗಿ ಹಲವಾರು ವರ್ಚುಯಲ್ ಐಡಿ ಮೂಲಕ ಟೆಲಿಗ್ರಾಮ್ ಖಾತೆಗಳನ್ನು ಸೃಷ್ಟಿ ಮಾಡಿದ್ದದೆ.
ನದೀಮ್ ಮೂಲಕ ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ಮೂಲದ ಉಗ್ರರನ್ನು ಸಂಪರ್ಕ ಮಾಡಿದ್ದ ಹಬಿಬುಲ್, ಅಲ್ಲಿಗೆ ತೆರಳಿ ಅಸ್ತ್ರಗಳನ್ನು ತಯಾರಿ ತರಬೇತಿ ಪಡೆಯಲು ಬಯಸಿದ್ದ ಎನ್ನಲಾಗಿದೆ.
ಅಸ್ತ್ರಗಳನ್ನು ಸಜ್ಜುಗೊಳಿಸಲು ತಾಲಿಬಾನ್ ಸೂಚನೆ
ಪಾಕಿಸ್ತಾನದ ತಾಲಿಬಾನ್ ಅಥವಾ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ (TTP) ಕಮಾಂಡರ್ ಸೈಫುಲ್ಲಾ, ನದೀಮ್‌ನನ್ನು ಸಂಪರ್ಕಿಸಿ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಅಸ್ತ್ರಗಳನ್ನು ಸಜ್ಜುಗೊಳಿಸಲು ಸೂಚಿಸಿದ್ದ. ಅದಕ್ಕಾಗಿ ತಾನೇ ಹಣ ವಿನಿಯೋಗಿಸಿ ಬಳಿಕ ಪಡೆಯುವಂತೆ ಸೂಚನೆ ನೀಡಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪಾಕಿಸ್ತಾನದ ಉಗ್ರಗಾಮಿಯು ನದೀಮ್‌ಗೆ ಬಾಲಾಕೋಟ್ ಮೂಲದ ಉಗ್ರನನ್ನು ಪರಿಚಯಿಸಿದ್ದ. ಅವರಿಬ್ಬರೂ ಪ್ರತಿ ನಿತ್ಯ ಮಾತುಕತೆ ನಡೆಸುತ್ತಿದ್ದರು ಹಾಗೂ ರಾಸಾಯನಿಕ ಸ್ಫೋಟಕಗಳು, ಡಿಟೋನೇಟರ್‌ಗಳು ಹಾಗೂ ಟೈಮ್ ಫ್ಯೂಸ್‌ಗಳನ್ನು ತಯಾರಿಸಲು ಹೇಳಿದ್ದ. ಅಂತೆಯೇ ಬಾಂಬ್ ತಯಾರಿಸುವುದನ್ನು ಕಲಿಸಲು ೭೦ ಪುಟಗಳ ಪಿಡಿಎಫ್ ಫೈಲ್‌ಗಳನ್ನು ಕಳುಹಿಸಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.