Site icon Vistara News

Jharkhand shocker: ಪ್ರವಾಸಕ್ಕೆ ಬಂದ ಸ್ಪೇನ್‌ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10 ಕಿರಾತಕರು

physical abuse

ದುಮ್ಕಾ: ಶುಕ್ರವಾರ ತಡರಾತ್ರಿ ಜಾರ್ಖಂಡ್‌ನ (Jharkhand shocker) ದುಮ್ಕಾದಲ್ಲಿ ಸ್ಪೇನ್‌ ಮೂಲದ ಮಹಿಳೆಯೊಬ್ಬರ ಮೇಲೆ ಎಂಟರಿಂದ ಹತ್ತು ಮಂದಿ ಪಾತಕಿಗಳು ಸಾಮೂಹಿಕ ಅತ್ಯಾಚಾರ (physical abuse) ಎಸಗಿದ್ದಾರೆ. ಮಾಹಿತಿಯ ಪ್ರಕಾರ, ಮಹಿಳೆ ಮತ್ತು ಆಕೆಯ ಪತಿ ಬೈಕ್ ರೈಡ್‌ ಮಾಡುತ್ತಾ ಭಾರತ ಪ್ರವಾಸ (India tour) ಮಾಡುತ್ತಿದ್ದವರು.

ಹಂಸದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ ಈ ಘಟನೆ ನಡೆದಿದೆ. ಬೈಕ್‌ ಸವಾರಿ ಮಾಡುತ್ತ ಬಂದ ದಂಪತಿ ದುಮ್ಕಾದ ಕುಂಜಿ ಗ್ರಾಮದಲ್ಲಿ ಹಾಕಿದ ಟೆಂಟ್‌ನಲ್ಲಿ ಬಿಡಾರ ಹೂಡಿದ್ದರು. ಘಟನೆ ವೇಳೆ ದಂಪತಿ ಬೈಕ್‌ನಲ್ಲಿ ಬಿಹಾರದ ಭಾಗಲ್‌ಪುರಕ್ಕೆ ಹೊರಟಿದ್ದರು.

ಸುಮಾರು 8 ರಿಂದ 10 ಪುರುಷರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ವಿಧಿವಿಜ್ಞಾನ ತಜ್ಞರನ್ನೂ ನಿಯೋಜಿಸಲಾಗಿದೆ.

ಮಹಿಳೆ ಮತ್ತು ಆಕೆಯ ಪತಿ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದರು. ಅವರು ಏಷ್ಯಾದಾದ್ಯಂತ ಮೆಗಾ ಟ್ರಿಪ್‌ನಲ್ಲಿದ್ದರು. ದಂಪತಿಗಳು ಮೊದಲು ಪಾಕಿಸ್ತಾನಕ್ಕೆ, ನಂತರ ಅಲ್ಲಿಂದ ಬಾಂಗ್ಲಾದೇಶಕ್ಕೆ ಹೋಗಿದ್ದರು. ಅಲ್ಲಿಂದ ದುಮ್ಕಾ ಬಂದಿದ್ದು, ಇಲ್ಲಿಂದ ನೇಪಾಳಕ್ಕೆ ಹೋಗಲು ಯೋಜಿಸಿದ್ದರು.

ಸ್ಪ್ಯಾನಿಷ್ ಮಹಿಳೆ ಪ್ರಸ್ತುತ ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರದ (CHC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಮ್ಕಾ ಪೊಲೀಸ್ ಅಧೀಕ್ಷಕರು ಶುಕ್ರವಾರ ರಾತ್ರಿ ಅಪರಾಧ ಸ್ಥಳಕ್ಕೆ ಹೋಗಿದ್ದು, ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು, ಕಾನೂನಿನ ಪ್ರಕಾರ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಅಪರಾಧ ನಡೆದ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ನಲ್ಲಿದ್ದರು. ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ರಾಜ್ಯ ಬಿಜೆಪಿ ಈ ಕೃತ್ಯವನ್ನು ʼʼರಾಜ್ಯಕ್ಕೆ ಒಂದು ಕಪ್ಪು ಚುಕ್ಕೆʼʼ ಎಂದು ಬಣ್ಣಿಸಿದೆ. “ಅಪರಾಧಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದೆ.

ಇದನ್ನೂ ಓದಿ: Asaram Bapu: ಬಾಲಕಿ ಮೇಲೆ ಅತ್ಯಾಚಾರ; ಅಸಾರಾಂ ಬಾಪುಗೆ ಜೈಲೇ ಗತಿ

Exit mobile version