ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ನಲ್ಲಿ (Twitter) ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಭಾರತದ ಉದ್ಯೋಗಿಯೊಬ್ಬನಿಗೆ ಕೆಲಸದಿಂದ ತೆಗೆದು ಹಾಕಿದ ಮಾಹಿತಿ ನೀಡಲಾಗಿದೆ. ಯುವ ಉದ್ಯೋಗಿ ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಟ್ವೀಟ್ ವೈರಲ್ ಆಗಿದೆ. 25 ವರ್ಷದ ಯಶ್ ಅಗರ್ವಾಲ್ ಅವರು ಟ್ವಿಟರ್ ಉದ್ಯೋಗ ಕಳೆದುಕೊಂಡಿರುವ ಉದ್ಯೋಗಿ. ಸಾಮಾನ್ಯವಾಗಿ ಕೆಲಸ ಕಳೆದುಕೊಂಡಾಗ ಬಹುತೇಕರು ದುಃಖದಲ್ಲಿರುತ್ತಾರೆ. ಆದರೆ, ಯಶ್ ಈ ಸಂದರ್ಭವನ್ನು ಪಾಸಿಟಿವ್ ರೀತಿಯಲ್ಲಿ ನೋಡಿದ್ದು, ನೇಟಿಜನ್ಸ್ ಮೆಚ್ಚುಗೆಗೆ ಕಾರಣವಾಗಿದೆ.
Just got laid off ಎಂದು ಬರೆದುಕೊಂಡಿರುವ ಯಶ್ ಅಗರ್ವಾಲ್ ಅವರು, ಟ್ವಿಟರ್ ಕಂಪನಿಯಲ್ಲಿ ಕೆಲಸ ಮಾಡಿದ್ದು ಒಂದು ಸೌಭಾಗ್ಯ ಎಂದು ಹೇಳಿಕೊಂಡಿದ್ದಾರೆ. ಕೆಲಸದಿಂದ ಈಗಷ್ಟೇ ವಜಾಗೊಂಡಿದ್ದೇನೆ. ಬರ್ಡ್ (ಟ್ವಿಟರ್) ಅಪ್ಲಿಕೇಶನ್, ಇದು ಸಂಪೂರ್ಣ ಗೌರವವಾಗಿದೆ. ಈ ತಂಡ, ಈ ಸಂಸ್ಕೃತಿಯ ಭಾಗವಾಗಲು ಇದುವರೆಗಿನ ಶ್ರೇಷ್ಠ ಸವಲತ್ತು ಎಂದು ಭಾವಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಯಶ್ ಅವರ ಟ್ವೀಟ್ ಅನ್ನು ನೂರಾರು ಜನ ಮೆಚ್ಚಿ ರಿಟ್ವೀಟ್ ಮಾಡುತ್ತಿದ್ದಾರೆ.
ಏತನ್ಮಧ್ಯೆ, ಟ್ವಿಟರ್ ತನ್ನ ಉದ್ಯೋಗಿಗಳನ್ನು ಕಡಿಮೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಎಲಾನ್ ಮಸ್ಕ್ ಅವರು ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿಯೇ ಅನೇಕರಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ. ಟ್ವಿಟರ್ ಒಡೆತನವನ್ನು ಪಡೆಯುತ್ತಿದ್ದಂತೆ ಅವರು ಟ್ವಿಟರ್ ಸಿಇಒ ಪರಾಗ್ ಅಗ್ರವಾಲ್ ಅವರನ್ನು ಕೆಲಸದಿಂದ ವಜಾ ಮಾಡಿದ್ದರು.
ಇದನ್ನೂ ಓದಿ | Twitter | ನೀವು ಕಚೇರಿಯ ದಾರಿಯಲ್ಲಿದ್ದರೆ, ದಯವಿಟ್ಟು ಮನೆಗೆ ಹೋಗಿ, ಸಿಬ್ಬಂದಿಗೆ ಟ್ವಿಟರ್ ಸೂಚನೆ!