ನವದೆಹಲಿ: ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರಕಾರ ಬುಧವಾರ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.
ನಿರ್ಗಮನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಸುಪ್ರೀಂಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಆಗಿರುವ ಉದಯ್ ಲಲಿತ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವಂತೆ ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದರು. ಉದಯ್ ಲಲಿತ್ ಅವರು ದೇಶದ ೪೯ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ.
ಹಿರಿಯ, ಅನುಭವಿ ನ್ಯಾಯಮೂರ್ತಿ
ಸದ್ಯ ಸುಪ್ರೀಂಕೋರ್ಟ್‌ನಲ್ಲಿ ಸಿಜೆಐ ಎನ್.ವಿ.ರಮಣರನ್ನು ಬಿಟ್ಟರೆ ಎರಡನೇ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ . ೧೯೫೭ರ ನವಂಬರ್ ೯ರಂದು ಜನಿಸಿದ ಇವರ ತಂದೆ ಯು.ಆರ್. ಲಲಿತ್ ಅವರು ಮುಂಬಯಿ ಹೈಕೋರ್ಟ್‌ನಲ್ಲಿ ಅಡಿಷನಲ್ ಜಡ್ಜ್ ಆಗಿದ್ದರು. ಇವರ ತಾಯಿ ಕೂಡಾ ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿದ್ದರು. ಉದಯ್ ಲಲಿತ್ ಅ ವರು ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭ ಮಾಡಿದ್ದು 1983ರಲ್ಲಿ. 1985ರವರೆಗೂ ಬಾಂಬೆ ಹೈಕೋರ್ಟ್‌ನಲ್ಲಿ ಕಾನೂನು ಅಭ್ಯಾಸ ಮಾಡಿದರು. ಅದಾಗಿ ಒಂದು ವರ್ಷದಲ್ಲಿ 1986ರಿಂದ ದೆಹಲಿ ಕೋರ್ಟ್ನಲ್ಲಿ ಪ್ರ್ಯಾಕ್ಟೀಸ್ ಪ್ರಾರಂಭಿಸಿದರು. 2004ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಹಲವು ಗಣ್ಯರ, ಪ್ರಮುಖ ಸಂಸ್ಥೆಗಳ ಕಾನೂನು ಸಲಹೆಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಸುಪ್ರೀಂಕೋರ್ಟ್‌ನ ಕಾನೂನು ಸೇವಾ ಸಮಿತಿಗೆ ಎರಡು ಅವಧಿಗೆ ಸದಸ್ಯರಾಗಿದ್ದರು.
೭೪ ದಿನ ಅಧಿಕಾರದಲ್ಲಿರುತ್ತಾರೆ
ಹಾಲಿ ಮುಖ್ಯ ನ್ಯಾಯಮೂರ್ತಿಗಳಾಗಿರುವ ಎನ್.ವಿ. ರಮಣ ಅವರು ಆಗಸ್ಟ್ ೨೬ರಂದು ನಿವೃತ್ತರಾಗಲಿದ್ದಾರೆ. ಅಂದರೆ ಆವತ್ತಿಗೆ ಅವರಿಗೆ ೬೫ ವರ್ಷ ತುಂಬುತ್ತದೆ.
ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ 2022ರ ನವೆಂಬರ್ 8ರಂದು ನಿವೃತ್ತಿಯಾಗಲಿದ್ದಾರೆ. ಅಂದರೆ, ಅವರು ೭೪ ದಿನಗಳ ಕಾಲ ಅಧಿಕಾರದಲ್ಲಿರುತ್ತಾರೆ. ಅವರ ಬಳಿಕ ಈ ಹುದ್ದೆಗೆ ಜೇಷ್ಠತೆಯ ಆಧಾರದಲ್ಲಿ ಅರ್ಹತೆ ಹೊಂದಿರುವವರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್.
೧೭ ದಿನಗಳ ಅತಿ ಕಡಿಮೆ ಅಧಿಕಾರಾವಧಿ
ಅಂದ ಹಾಗೆ ಭಾರತದ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವರು ಕಮಲ್ ನಾರಾಯಣ್ ಸಿಂಗ್. ಅವರು ೧೯೯೧ರ ನವೆಂಬರ್ ೨೫ರಿಂದ ಡಿಸೆಂಬರ್ ೧೨ರವರೆಗೆ ಅಂದರೆ ೧೭ ದಿನ ಚೀಫ್ ಜಸ್ಟಿಸ್ ಆಗಿದ್ದರು.
ಇದನ್ನೂ ಓದಿ| ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಉದಯ್ ಯು ಲಲಿತ್; ಸಿಜೆಐ ರಮಣ ಶಿಫಾರಸು