Site icon Vistara News

Justin Trudeau: ಖಲಿಸ್ತಾನ್ ಉಗ್ರನ ಹತ್ಯೆ ಹಿಂದೆ ಭಾರತದ ಕೈವಾಡ ಆರೋಪ; ರಾಜತಾಂತ್ರಿಕರ ಉಚ್ಚಾಟನೆ

justin trudeau

ಕೆನಡಾ: ಖಲಿಸ್ತಾನಿ ಭಯೋತ್ಪಾದಕರನ್ನು (Khalistan terrorist) ಅಪರಿಚಿತರು ಸಾಯಿಸಿದ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ (Justin Trudeau), ಹಿರಿಯ ಭಾರತೀಯ ರಾಜತಾಂತ್ರಿಕರಿಗೆ ಗೇಟ್‌ಪಾಸ್‌ ನೀಡಿದೆ.

ಇತ್ತೀಚೆಗೆ ಖಲಿಸ್ತಾನ್ ಟೈಗರ್ ಫೋರ್ಸ್ (Khalistan tiger force) ಭಯೋತ್ಪಾದಕ ಗುಂಪಿನ ಮುಖ್ಯಸ್ಥ, ಖಲಿಸ್ತಾನ್ ಪರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಇದರ ಹಿಂದೆ ʼವಿದೇಶಿ ಶಕ್ತಿಗಳು’ ಇವೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ ಹೇಳಿದ್ದಾರೆ. ಉಗ್ರನ ಮೇಲಾದ ಮಾರಣಾಂತಿಕ ಗುಂಡಿನ ದಾಳಿಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಗಳಾದ ANI ಮತ್ತು CBC ವರದಿ ಮಾಡಿದೆ.

ಟ್ರೂಡೊ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕೆನಡಾ ಹಿರಿಯ ಭಾರತೀಯ ರಾಜತಾಂತ್ರಿಕರನ್ನು (Indian diplomat) ಹೊರಹಾಕಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ತಮ್ಮ ಸರ್ಕಾರ ಹೊರಹಾಕಿದೆ ಎಂದು ಕೆನಡಾದ ಮಾಧ್ಯಮಗಳಿಗೆ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಜಿ20 ಶೃಂಗಸಭೆಗೆ (G20 Summit delhi) ಜಸ್ಟಿನ್‌ ಟ್ರುಡೊ ಭೇಟಿ ನೀಡಿದ್ದಾಗ ಅವಮಾನ ಎದುರಿಸಿದ್ದರು. ಕೆನಡಾದಲ್ಲಿ ಭಾರತದ ವಿರುದ್ಧ ಖಲಿಸ್ತಾನಿ ಚಟುವಟಿಕೆಗಳನ್ನು ನಾವು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ನೀಡಿದ್ದರು. ಜತೆಗೆ ತಾವು ಬಂದ ವಿಮಾನ ಹಾಳಾಗಿಯೂ ಒಂದು ದಿನ ಟ್ರುಡೊ ಉಳಿಯಬೇಕಾಗಿ ಬಂದಿತ್ತು. ಈ ಅವಮಾನದೊಂದಿಗೆ ಟ್ರುಡೊ ಸ್ವದೇಶಕ್ಕೆ ಮರಳಿದ್ದರು.

ನಿಜ್ಜರ್ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ. ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಪ್ರಾಂತ್ಯದ ಸರ್ರೆಯಲ್ಲಿ ಗುರುದ್ವಾರದ ಪಾರ್ಕಿಂಗ್ ಸ್ಥಳದ ಹೊರಗೆ ಈತನನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಪಂಜಾಬ್‌ನ ಜಲಂಧರ್‌ನ ಭರ್ಸಿಂಗ್‌ಪುರ ಗ್ರಾಮದಿಂದ ಬಂದಿರುವ ನಿಜ್ಜರ್ ಕೆನಡಾದ ಪ್ರಜೆಯಾಗಿದ್ದು, ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ.

ಕೆನಡಾದೊಳಗೆ ಕೆನಡಾದ ಪ್ರಜೆಯ ಮೇಲೆ ನಡೆದ ದಾಳಿಯು ರಾಷ್ಟ್ರದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಟ್ರೂಡೊ ಹೇಳಿದ್ದಾರೆ. “ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯಲ್ಲಿ ವಿದೇಶಿ ಸರ್ಕಾರದ ಯಾವುದೇ ಒಳಗೊಳ್ಳುವಿಕೆ ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಇದು ಮುಕ್ತ ಮತ್ತು ಪ್ರಜಾಪ್ರಭುತ್ವ ಸಮಾಜಗಳು ನಡೆದುಕೊಳ್ಳುವ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಜಸ್ಟಿನ್ ಟ್ರುಡೊ ಹೇಳಿದ್ದಾರೆ.

“ಭಾರತ ಸರ್ಕಾರದ ಏಜೆಂಟರ ಹಾಗೂ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಡುವಿನ ಸಂಬಂಧವನ್ನು ಕೆನಡಾದ ಭದ್ರತಾ ಏಜೆನ್ಸಿಗಳು ಕಂಡುಕೊಂಡಿವೆ” ಎಂದು ಜಸ್ಟಿನ್‌ ಹೇಳಿದ್ದಾರೆ. ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಜ್ಜರ್‌ನನ್ನು ಪರಾರಿಯಾಗಿರುವ ಉಗ್ರ ಎಂದು ಘೋಷಿಸಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನಲ್ಲಿ ಭಾರತದ ಪಾತ್ರವಿದೆ ಎಂದು ಟ್ರುಡೊ ಹೇಳಿದ ಕೆಲವೇ ಗಂಟೆಗಳ ನಂತರ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿಕೆ ನೀಡಿದರು. “ನಾವು ಯಾವುದೇ ರೀತಿಯ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ನಾವು ಮೂರು ತತ್ವಗಳಿಂದ ಮಾರ್ಗದರ್ಶಿಸಲ್ಪಟ್ಟಿದ್ದೇವೆ. ಮೊದಲನೆಯದು, ನಾವು ಸತ್ಯವನ್ನು ಹುಡುಕುತ್ತೇವೆ. ಎರಡನೆಯದು, ನಾವು ಎಲ್ಲಾ ಸಮಯದಲ್ಲೂ ಕೆನಡಿಯನ್ನರನ್ನು ರಕ್ಷಿಸುತ್ತೇವೆ. ಮತ್ತು ಮೂರನೆಯದಾಗಿ, ನಾವು ಕೆನಡಾದ ಸಾರ್ವಭೌಮತ್ವವನ್ನು ರಕ್ಷಿಸುತ್ತೇವೆ. ನಾವು ಈ ತತ್ವಗಳನ್ನು ಭಾರತೀಯ ಸಹವರ್ತಿಗಳಿಗೆ ತಿಳಿಸಿದ್ದೇವೆ. ಇಂದಿನಿಂದ ನಾವು ಕೆನಡಾದಿಂದ ಉನ್ನತ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿದ್ದೇವೆ” ಎಂದು ಜೋಲಿ ಹೇಳಿದ್ದಾರೆ.

Exit mobile version