Site icon Vistara News

Justin Trudeau: ಮೋದಿಯ ವಿಶೇಷ ವಿಮಾನದ ಆಫರ್‌ ತಿರಸ್ಕರಿಸಿದ ಜಸ್ಟಿನ್‌ ಟ್ರುಡೋ; ದೆಹಲಿಯಲ್ಲೇ 36 ಗಂಟೆ ಠಿಕಾಣಿ

justin trudeau plane

Justin Trudeau refused 'Air India One' service offered by India, chose to wait: Report

ನವದೆಹಲಿ: ರಾಜಧಾನಿಯಲ್ಲಿ ಎರಡು ದಿನ ನಡೆದ ಜಿ20 ಶೃಂಗಸಭೆ (G20 Summit 2023) ಮುಗಿಸಿ ತಮ್ಮ ದೇಶಕ್ಕೆ ತೆರಳಬೇಕಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಅವರು ತಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರು ಹಾಗೂ ಅವರ ನಿಯೋಗವು 36 ಗಂಟೆ ದೆಹಲಿಯಲ್ಲಿಯೇ ಉಳಿದಿತ್ತು. ಆದರೆ, ಅವರು ಕೆನಡಾಗೆ ಹಿಂದಿರುಗಲು ಕೇಂದ್ರ ಸರ್ಕಾರವು ‘ಏರ್‌ ಇಂಡಿಯಾ ಒನ್’ ವಿಮಾನದ ಆಫರ್‌ ನೀಡಿದರೂ ಜಸ್ಟಿನ್‌ ಟ್ರುಡೋ ಅವರು, ಆಫರ್‌ ತಿರಸ್ಕರಿಸಿ ದೆಹಲಿಯಲ್ಲಿಯೇ ಉಳಿದು, ವಿಮಾನ ದುರಸ್ತಿಯಾದ ಬಳಿಕ ಅವರು ಮಂಗಳವಾರ (ಸೆಪ್ಟೆಂಬರ್) ತಮ್ಮದೇ ವಿಮಾನದಲ್ಲಿ ಕೆನಡಾಗೆ ಹಿಂದಿರುಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ‌

ಜಸ್ಟಿನ್ ಟ್ರುಡೋ ಅವರಿಗಾಗಿ ಬ್ಯಾಕಪ್ ವಿಮಾನ ಅಥವಾ ಮೂಲ ವಿಮಾನದ ದುರಸ್ತಿಯ ಬಿಡಿಭಾಗ ಭಾರತಕ್ಕೆ ಬರಬೇಕಿತ್ತು. ಈ ಎರಡರಲ್ಲಿ ಯಾವುದು ಮೊದಲು ಆಗುತ್ತದೋ ಅದನ್ನನುಸರಿಸಿ ಮೂಲ ವಿಮಾನದಲ್ಲಿ ಅಥವಾ ಬೇರೆ ವಿಮಾನದಲ್ಲಿ ಅವರು ತಮ್ಮ ದೇಶಕ್ಕೆ ಮರಳಲಿದ್ದಾರೆ ಎಂದು ಕೆನಡಾದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದರು. ಹಾಗಾಗಿ, ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿಯವರು ಸಂಚರಿಸುವ ಏರ್‌ ಇಂಡಿಯಾ ಒನ್‌ ವಿಮಾನದಲ್ಲಿಯೇ ನಿಮ್ಮ ದೇಶಕ್ಕೆ ತೆರಳಿ ಎಂದು ಸರ್ಕಾರವು ಜಸ್ಟಿನ್‌ ಟ್ರುಡೋ ಅವರಿಗೆ ಕೋರಿತ್ತು. ಆದರೆ, ಆಫರ್‌ ತಿರಸ್ಕರಿಸಿರುವ ಟ್ರುಡೊ ಅವರು, ತಮ್ಮ ವಿಶೇಷ ವಿಮಾನದಲ್ಲಿಯೇ ಕೆನಡಾಗೆ ಹಿಂದಿರುಗಿದರು ಎಂದು ತಿಳಿದುಬಂದಿದೆ.

ಜಸ್ಟಿನ್‌ ಟ್ರುಡೋ ಅವರು ಜಿ20 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದರು. ಇದಾದ ಬಳಿಕ ಅವರು ಭಾನುವಾರ (ಸೆಪ್ಟೆಂಬರ್‌ 10) ರಾತ್ರಿ ತಮ್ಮ ದೇಶಕ್ಕೆ ತೆರಳಬೇಕಿತ್ತು. ವಿಮಾನವೂ ಸಿದ್ಧವಾಗಿತ್ತು. ಇನ್ನೇನು ಜಸ್ಟಿನ್‌ ಟ್ರುಡೋ ಅವರು ಪ್ರಯಾಣ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹಾಗೆಯೇ, ರಾತ್ರೋರಾತ್ರಿ ತಾಂತ್ರಿಕ ದೋಷ ಸರಿಪಡಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ ಕಾರಣ ಜಸ್ಟಿನ್‌ ಟ್ರುಡೋ ಹಾಗೂ ಅವರ ನಿಯೋಗವು ದೆಹಲಿಯಲ್ಲಿಯೇ ಉಳಿದಿತ್ತು.

ಇದನ್ನೂ ಓದಿ: Justin Trudeau: ಜಿ20 ಮುಗಿಸಿ ಹೊರಡಬೇಕಿದ್ದ ವಿಮಾನದಲ್ಲಿ ದೋಷ; ದೆಹಲಿಯಲ್ಲೇ ಉಳಿದ ಕೆನಡಾ ಪ್ರಧಾನಿ

ಭಾರತ ಹಾಗೂ ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ, ರಾಜತಾಂತ್ರಿಕ ಶಿಷ್ಟಾಚಾರದಿಂದಾಗಿ ಕೇಂದ್ರ ಸರ್ಕಾರವು ಏರ್‌ ಇಂಡಿಯಾ ಒನ್‌ ವಿಮಾನದಲ್ಲಿ ಪ್ರಯಾಣಿಸಿ ಎಂದು ಕೋರಿತ್ತು. ಕೇಂದ್ರ ಸರ್ಕಾರದ ಮನವಿಗೆ ಆರು ಗಂಟೆ ಬಳಿಕ ಜಸ್ಟಿನ್‌ ಟ್ರುಡೋ ಪ್ರತಿಕ್ರಿಯಿಸಿ, ನಯವಾಗಿ ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಕೆನಡಾ ಪ್ರಧಾನಿ ಸಂಚರಿಸಬೇಕಿದ್ದ ವಿಮಾನ ದುರಸ್ತಿಯಾದ ಬಳಿಕ ಮಂಗಳವಾ ರಾತ್ರಿ ಅವರು ಕೆನಡಾಗೆ ಹಾರಾಟ ನಡೆಸಿದ್ದಾರೆ. ಅಲ್ಲದೆ, ವಿಮಾನದ ದೋಷದ ಕುರಿತು ಕೆನಡಾ ಪ್ರತಿಪಕ್ಷಗಳು ವ್ಯಂಗ್ಯವಾಡಿವೆ ಎನ್ನಲಾಗಿದೆ.

Exit mobile version