Site icon Vistara News

Kanker Encounter: ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳ ಹತ್ಯೆಗೈದ ಭದ್ರತಾ ಪಡೆ

Kanker Encounter

Kanker Encounter

ರಾಯ್‌ಪುರ: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ (Kanker Encounter)ನಲ್ಲಿ ಕನಿಷ್ಠ 29 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಗಡಿ ಭದ್ರತಾ ಪಡೆ ಮಂಗಳವಾರ ತಿಳಿಸಿದೆ. ಈ ವೇಳೆ ಮೂವರು ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ʼʼಗುಪ್ತಚರದ ಖಚಿತ ಮಾಹಿತಿಯ ಮೇರೆಗೆ ಬಿಎಸ್ಎಫ್ (BSF) ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ (DRG) ಕಂಕರ್‌ನ ಚೋಟೆಬೆಟಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬಿನಗುಂಡ ಪ್ರದೇಶದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಸಿತುʼʼ ಎಂದು ಕೇಂದ್ರ ಪೊಲೀಸ್ ಪಡೆ ತಿಳಿಸಿದೆ. ಕಾರ್ಯಾಚರಣೆಯ ವೇಳೆ ಬಿಎಸ್ಎಫ್ ತಂಡವು ಸಿಪಿಐ ಮಾವೋವಾದಿಗಳಿಂದಲೂ ಭಾರೀ ಗುಂಡಿನ ದಾಳಿಯನ್ನು ಎದುರಿಸಬೇಕಾಯಿತು.

ಶಸ್ತ್ರಾಸ್ತ್ರ ವಶ

ಎನ್‌ಕೌಂಟರ್‌ ನಡೆದ ಸ್ಥಳದಿಂದ 18 ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ. ಕಾರ್ಯಾಚರಣೆಯ ಸ್ಥಳದಿಂದ ಏಳು ಎಕೆ ಸರಣಿ ರೈಫಲ್‌ಗಳು ಮತ್ತು ಮೂರು ಲೈಟ್ ಮೆಷಿನ್ ಗನ್‌ಗಳನ್ನೂ (LMGs) ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ಚಕಮಕಿ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕಂಕರ್ ಪೊಲೀಸ್ ವರಿಷ್ಠಾಧಿಕಾರಿ ಕಲ್ಯಾಣ್ ಎಲೆಸೆಲಾ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಹತರಾದ ಮಾವೋವಾದಿಗಳ ಪೈಕಿ ಉನ್ನತ ನಕ್ಸಲ್ ನಾಯಕ ಶಂಕರ್ ರಾವ್ ಕೂಡ ಸೇರಿದ್ದಾನೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಶಂಕರ್‌ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಛತ್ತೀಸ್‌ಗಢವು ಹಲವು ದಶಕಗಳಿಂದ ನಕ್ಸಲೈಟ್‌, ಮಾವೋವಾದಿಗಳ ಭೀತಿ ಎದುರಿಸುತ್ತಿದೆ. ವಿಶೇಷವಾಗಿ ಬಸ್ತಾರ್ ಪ್ರದೇಶವು ನಕ್ಸಲ್ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಆಗಾಗ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್‌ ನಡೆಯುತ್ತಲೇ ಇರುತ್ತದೆ. ನಕ್ಸಲರ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವುದು, ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡುವುದು ಮತ್ತು ಶರಣಾಗುವ ನಕ್ಸಲರಿಗೆ ಪುನರ್ವಸತಿ ಕಲ್ಪಸಿಸುವುದು ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಆದಾಗ್ಯೂ ಈ ಪ್ರಯತ್ನಗಳ ಹೊರತಾಗಿಯೂ ರಾಜ್ಯದಲ್ಲಿ ನಕ್ಸಲ್ ಹಾವಳಿ ಮುಂದುವರಿದಿದೆ.

ಕೆಲವು ದಿನಗಳ ಹಿಂದೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್‌ ಸಾವನ್ನಪ್ಪಿದ್ದ. ಕೊಯಲಿಬೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಲ್ಪಾರಸ್ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯ ತಂಡವು ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿತ್ತು.

ಇದನ್ನೂ ಓದಿ: Encounter In Kanker: ಭದ್ರತಾ ಪಡೆಗಳೊಂದಿಗೆ ಎನ್‌ಕೌಂಟರ್‌; ಓರ್ವ ನಕ್ಸಲ್‌ ಸಾವು

ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಗಡಿ ಭದ್ರತಾ ಪಡೆ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಈ ವೇಳೆ ಗುಂಡಿನ ಚಕಮಕಿ ನಡೆದಿತ್ತು. ಸಾವನ್ನಪ್ಪಿದ ನಕ್ಸಲ್‌ನ ಶವ, ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿತ್ತು. ಅದಕ್ಕೂ ಮೊದಲು ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ ಮತ್ತು ಮಾವೋವಾದಿ ಸಾವನ್ನಪ್ಪಿದ್ದರು. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿಡೂರ್ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿತ್ತು.

Exit mobile version