ಬೆಂಗಳೂರು: ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿರುವ ಕನ್ನಡದ ಮೊದಲ ಸಿನಿಮಾ ʼಕಾಂತಾರʼ ತನ್ನ ಮುಕುಟಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ. ಅದೀಗ ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಲ್ಲಿ ಸ್ಪರ್ಧಾರ್ಹತೆ ಪಡೆದುಕೊಂಡಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ವಿಶ್ವದ ಅತ್ಯಂತ ಪ್ರತಿಷ್ಠಿತ ಪುರಸ್ಕಾರ ಆಸ್ಕರ್‌ನ ʼಅತ್ಯುತ್ತಮ ಚಿತ್ರʼ ಹಾಗೂ ʼಅತ್ಯುತ್ತಮ ನಟʼ ವಿಭಾಗಗಳಲ್ಲಿ ಸ್ಪರ್ಧೆಯ ಅರ್ಹತೆ ಪಡೆದಿದೆ. 301 ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರ ಚಿತ್ರಕ್ಕೂ ಅರ್ಹತೆ ದೊರೆತಿದೆ. ಕಳೆದ ವರ್ಷದ ಭಾರತೀಯ ಚಿತ್ರಗಳಲ್ಲೆಲ್ಲ ಕಾಂತಾರ ಅತಿ ಹೆಚ್ಚು ಗಳಿಕೆಯ ಹಾಗೂ ಅತ್ಯುತ್ತಮ ಚಿತ್ರ ಎಂದು ಕರೆಸಿಕೊಂಡಿತ್ತು. ರಿಷಬ್ ಶೆಟ್ಟಿ ಅವರ ನಟನೆಗೂ ಅತ್ಯುತ್ತಮ ಎಂಬ ಗೌರವ ವಿಮರ್ಶಕರಿಂದ ಸಂದಿತ್ತು.
ಜನವರಿ 24ರಂದು ಆಸ್ಕರ್ ವಿಜೇತ ಚಿತ್ರಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಕಾಂತಾರ ಜೊತೆ RRR, ಗಂಗೂಬಾಯಿ ಕಾಥಿಯಾವಾಡಿ, ಕಾಶ್ಮೀರಿ ಫೈಲ್ಸ್ ಕೂಡ ಸ್ಪರ್ಧಿಸಲಿವೆ. ನಾಳೆಯಿಂದ ಓಟಿಂಗ್ ಪ್ರಕ್ರಿಯೆ ಶುರುವಾಗಲಿದ್ದು, 17ರವರೆಗೂ ಓಟಿಂಗ್ ನಡೆಯಲಿದೆ. ಆಸ್ಕರ್ ಜೂರಿಯ 350 ಸದಸ್ಯರಿಂದ ಓಟಿಂಗ್ ನಡೆಯಲಿದೆ.
ಈ ಬಗ್ಗೆ ಹೊಂಬಾಳೆ ಫಿಲಂಸ್‌ನಿಂದ ಅಧಿಕೃತ ಘೋಷಣೆ ಬಂದಿದೆ. ಕಾಂತಾರ ಚಿತ್ರ ಆಸ್ಕರ್ ಸ್ಪರ್ಧೆಗೆ ನಾಮಿನೇಟ್ ಆಗಿರುವ ಸಂತಸವನ್ನು ಟ್ವೀಟ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಹಂಚಿಕೊಂಡಿದ್ದು, ಚಿತ್ರರಸಿಕರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದೆ.
ಇದನ್ನೂ ಓದಿ | Kantara Movie | ಆಸ್ಕರ್ ಕಣದತ್ತ ಕಾಂತಾರ : ಕಾಂತಾರ-2 ಬಗ್ಗೆ ವಿಜಯ್ ಕಿರಗಂದೂರು ಹೇಳಿದ್ದೇನು?