Site icon Vistara News

Karan Bhushan Singh: ಬಿಜೆಪಿ ಅಭ್ಯರ್ಥಿಯ ಬೆಂಗಾವಲು ವಾಹನ ಡಿಕ್ಕಿಯಾಗಿ ಇಬ್ಬರ ಸಾವು

Karan Bhushan Singh

Karan Bhushan Singh

ಲಕ್ನೋ: ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಕುಡಿದು ಐಷಾರಾಮಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಘಟನೆ ಹಸಿಯಾಗಿರುವಾಗಲೇ ಅಂತಹದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಕೈಸರ್ಗಂಜ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಮತ್ತು ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ)ನ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ಪುತ್ರ ಕರಣ್ ಭೂಷಣ್ ಸಿಂಗ್ (Karan Bhushan Singh) ಅವರ ಬೆಂಗಾವಲು ಪಡೆಗೆ ಸೇರಿದ ಟೊಯೊಟಾ ಫಾರ್ಚೂನರ್ ಎಸ್‌ಯುವಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಗೊಂಡಾದ ಕರ್ನಲ್‌ಗಂಜ್-ಹುಜೂರ್‌ಪುರ ರಸ್ತೆಯ ಬೈಕುಂತ್ ಪದವಿ ಕಾಲೇಜು ಬಳಿ ಅಪಘಾತ ಸಂಭವಿಸಿದ್ದು, ಮೃತರನ್ನು 17 ವರ್ಷದ ರೆಹಾನ್ ಮತ್ತು ಆತನ ಸಂಬಂಧಿ 24 ವರ್ಷದ ಶಹಜಾದ್ ಎಂದು ಗುರುತಿಸಲಾಗಿದೆ. ಇನ್ನೋರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ವಿವರ

ಈ ಬಗ್ಗೆ ಎಫ್ಐಆರ್ ದಾಖಲಿಸಿರುವ ಚಂದಾ ಬೇಗಂ ಮಾತನಾಡಿ, ʼʼಇಂದು (ಮೇ 29) ಬೆಳಿಗ್ಗೆ 9 ಗಂಟೆ ಸುಮಾರಿಗೆ ತನ್ನ ಮಗ ರೆಹಾನ್ ಮತ್ತು ಸೋದರಳಿಯ ಶಹಜಾದ್ ಔಷಧ ಖರೀದಿಸಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಟೊಯೊಟಾ ಫಾರ್ಚೂನರ್ ಎಸ್‌ಯುವಿ ಡಿಕ್ಕಿ ಹೊಡೆದಿದೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆʼʼ ಎಂದು ಹೇಳಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಮೃತರ ಕುಟುಂಬದವರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು. ಕ್ರಮ ಕೈಗೊಂಡ ಪೊಲೀಸರು ಅಪಘಾತ ನಡೆದ ನಂತರ ಪರಾರಿಯಾಗಿದ್ದ ಟೊಯೊಟಾ ಫಾರ್ಚೂನರ್‌ನ ಚಾಲಕನ್ನು ಬಂಧಿಸಿದ್ದಾರೆ. ಅಪಘಾತ ನಡೆದ ಸಮಯದಲ್ಲಿ ಕರಣ್ ಭೂಷಣ್ ಸಿಂಗ್ ಅವರು ವಾಹನದಲ್ಲಿ ಇದ್ದರಾ ಎನ್ನುವ ಬಗ್ಗೆ ಇದುವರೆಗೆ ಮಾಹಿತಿ ಲಭಿಸಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕೈಸರ್‌ಗಂಜ್‌ ಲೋಕಸಭೆ ಕ್ಷೇತ್ರದಿಂದ ಕಳೆದ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬ್ರಿಜ್‌ ಭೂಷಣ್‌ ಸಿಂಗ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿರುವ ಕಾರಣ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್‌ ನೀಡಿರಲಿಲ್ಲ. ಅವರ ಬದಲಾಗಿ ಪುತ್ರ ಕರಣ್ ಭೂಷಣ್ ಸಿಂಗ್ ಅವರಿಗೆ ಮಣೆ ಹಾಕಲಾಗಿತ್ತು. ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಈ ಹಿಂದೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದರು. ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಅವರನ್ನು ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿತ್ತು.

ಇದನ್ನೂ ಓದಿ: Brij Bhushan: ಮಗನ ನಾಮನಿರ್ದೇಶನದ ವೇಳೆ 10 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸಿದ ಬ್ರಿಜ್ ಭೂಷಣ್

ಕರಣ್ ಭೂಷಣ್ ಸಿಂಗ್ ಹಿನ್ನೆಲೆ

2019ರ ಲೋಕಸಭಾ ಚುನಾವಣೆಯಲ್ಲಿ, ಬ್ರಿಜ್ ಭೂಷಣ್ ಅವರು ಕೈಸರ್‌ಗಂಜ್‌ನಿಂದ ಎರಡು ಲಕ್ಷ ಮತಗಳಿಂದ ಗೆದ್ದಿದ್ದರು. ಕರಣ್ ಭೂಷಣ್ ಸಿಂಗ್ ಉತ್ತರ ಪ್ರದೇಶದ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ. ಗೊಂಡಾದ ನವಾಬ್‌ಗಂಜ್‌ನಲ್ಲಿರುವ ಸಹಕಾರಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಜನ ಸಂಪರ್ಕ ಹೊಂದಿದ್ದಾರೆ.

Exit mobile version