ಭಾರತ ಮತ್ತು ಪಾಕಿಸ್ತಾನದ ನಡುವೆ ಇತಿಹಾಸದಿಂದ ಇರುವ ಕಾಶ್ಮೀರ ಸಂಘರ್ಷ (Kashmir Dispute)ವನ್ನು ವಿಶ್ವಸಂಸ್ಥೆಯ ನಿರ್ಣಯದ ಅನುಸಾರವಾಗಿಯೇ ಪರಿಹರಿಸಿಕೊಳ್ಳಬೇಕು. ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಏಕಪಕ್ಷೀಯ ಕ್ರಮ ಸರಿಯಲ್ಲ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಕ್ವಿನ್ ಗಾಂಗ್ ಹೇಳಿದ್ದಾರೆ. ಮೇ 5ರಂದು ಭಾರತದ ಗೋವಾದಲ್ಲಿ, ಶಾಂಘೈ ಸಹಕಾರ ಸಂಘಟನೆ ಶೃಂಗದ ಪೂರ್ವಭಾವಿಯಾಗಿ ನಡೆದ ವಿದೇಶಾಂಗ ಇಲಾಖೆ ಸಚಿವರ ಸಭೆಯಲ್ಲಿ ಪಾಲ್ಗೊಂಡಿದ್ದ ಕ್ವಿನ್ ಗಾಂಗ್ ಬಳಿಕ ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿ ಅವರು ಪಾಕಿಸ್ತಾನ ವಿದೇಶಾಂಗ ಇಲಾಖೆ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಜತೆ ಸಭೆ/ಚರ್ಚೆ ನಡೆಸಿದರು. ಪಾಕಿಸ್ತಾನದಲ್ಲಿ ನಿಂತು ಭಾರತಕ್ಕೆ ಕಾಶ್ಮೀರದ ವಿಷಯದಲ್ಲಿ ಬಿಟ್ಟಿ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ಮತ್ತು ಚೀನಾ ವಿದೇಶಾಂಗ ಸಚಿವರುಗಳು ನಾಲ್ಕು ಸುತ್ತಿನ ಕಾರ್ಯತಂತ್ರ ಮಾತುಕತೆ ನಡೆಸಿದ ಬಳಿಕ ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕಾಶ್ಮೀರದ ವಿಷಯವನ್ನು ಪ್ರಸ್ತಾಪ ಮಾಡಲಾಗಿದೆ. ‘ಭಾರತ-ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದಕ್ಕೆ ಸುದೀರ್ಘ ಇತಿಹಾಸವಿದೆ. ಇದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು, ಸಂಬಂಧಿತ ಭದ್ರತಾ ಕೌನ್ಸಿಲ್ಗಳ ನಿಯಮಗಳು, ದ್ವಿಪಕ್ಷೀಯ ಒಪ್ಪಂದಗಳ ಅನುಸಾರವಾಗಿ, ಶಾಂತಿಯುತವಾಗಿ ಮತ್ತು ಸೂಕ್ತ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು. ಕಾಶ್ಮೀರದ ಪರಿಸ್ಥಿತಿ ಈಗಾಗಲೇ ಹದಗೆಟ್ಟಿದ್ದು, ಅಲ್ಲಿ ಯಾವುದೇ ರೀತಿಯ ಏಕಪಕ್ಷೀಯ ನಿರ್ಣಯ ಕೈಗೊಂಡು, ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಾರದು ಎಂದು ಚೀನಾ ಪುನರುಚ್ಚರಿಸುತ್ತದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಪಾಕಿಸ್ತಾನ ಅನುಮೋದಿಸಿದೆ.
ಇನ್ನು ಪಾಕಿಸ್ತಾನ ಮತ್ತು ಚೀನಾ ವಿದೇಶಾಂಗ ಸಚಿವರುಗಳ ಮಾತುಕತೆಯಲ್ಲಿ ಪರಸ್ಪರ ದೇಶಗಳ ನಡುವಿನ ಸಂಬಂಧ, ಸಹಕಾರದ ಬಗ್ಗೆ ಚರ್ಚಿಸಲಾಯಿತು. ರಾಜಕೀಯ, ಕಾರ್ಯತಂತ್ರ, ಆರ್ಥಿಕ, ರಕ್ಷಣೆ, ಭದ್ರತೆ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಮನ್ವಯತೆ ಬಗ್ಗೆಯೂ ಮಾತುಕತೆ ನಡೆಸಲಾಯಿತು ಎಂದೂ ಈ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ ‘ದಕ್ಷಿಣ ಏಷ್ಯಾ ವಲಯದಲ್ಲಿ ಶಾಂತಿ-ಸ್ಥಿರತೆ ಕಾಪಾಡುವ ಮತ್ತು ಈಗಾಗಲೇ ಬಾಕಿ ಇರುವ ವಿವಾದಗಳನ್ನು ಪರಿಹರಿಸುವ ಬಗ್ಗೆ ಒತ್ತುಕೊಡಲಾಯಿತು’ ಎಂದೂ ಹೇಳಲಾಗಿದೆ.
ಚೀನಾ ಈ ಹಿಂದೆಯೂ ಪಾಕಿಸ್ತಾನದ ಪರ ವಹಿಸಿಕೊಂಡು ಕಾಶ್ಮೀರದ ಬಗ್ಗೆ ಮಾತನಾಡಿತ್ತು. ಆಗ ಭಾರತ ಅದನ್ನು ತೀಕ್ಷ್ಣವಾಗಿ ವಿರೋಧಿಸಿತ್ತು. 2022ರ ಮಾರ್ಚ್ನಲ್ಲಿ, ಚೀನಾದ ಅಂದಿನ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವನಾಗಿದ್ದ ಯಂಗ್ ಯಿ ಅವರೂ ಕೂಡ ಪಾಕಿಸ್ತಾನದ ಪರವಾಗಿ ಧ್ವನಿ ಎತ್ತಿ ‘ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆ ನಿರ್ಣಯಗಳಿಗೆ ಅನುಗುಣವಾಗಿ ಪರಿಹರಿಸಿಕೊಳ್ಳಬೇಕು ಎಂದಿದ್ದರು. ಆಗ ಭಾರತ ತಿರುಗೇಟು ಕೊಟ್ಟಿತ್ತು. ‘ಕಾಶ್ಮೀರ ಭಾರತದ ಆಂತರಿಕ ವಿಚಾರ, ಅದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ತೀಕ್ಷ್ಣ ಪ್ರತಕ್ರಿಯೆ ನೀಡಿತ್ತು. ಆದರೆ ಚೀನಾ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದೆ.