Site icon Vistara News

Kashmir Travel: ಕಾಶ್ಮೀರದಲ್ಲಿ ಈ ಬಾರಿ ಹಿಮವೇ ಇಲ್ಲ! ಜನವರಿಯಲ್ಲೂ ಒಣಕಲಾದ ʻಭೂಮಿ ಮೇಲಿನ ಸ್ವರ್ಗʼ!

no snow in kashmir

ಚಳಿಗಾಲ ಬಂದ ತಕ್ಷಣ ಬಹುತೇಕ ಪ್ರವಾಸಿಗರ ಬಯಕೆ, ಜೀವಮಾನದಲ್ಲಿ ಒಮ್ಮೆಯಾದರೂ ಹಿಮದೂರಿಗೆ (Snow mountains) ಪ್ರವಾಸ ಮಾಡಬೇಕು, ಕನಸಲ್ಲಿ ಕಾಣುವ ಹಾಗೆ ಹಿಮದೂರಿನ ಸೌಂದರ್ಯವನ್ನು ಕಣ್ಣಾರೆ ನೋಡಬೇಕು, ಹಿಮದಲ್ಲಿ ಮಗುವಿನ ಹಾಗೆ ಆಡಬೇಕು. ಹಿಮದಲ್ಲಿ ಮುಳುಗಿ ಹೋಗುವ ಹಾಗೆ ಕುಣಿದಾಡಿ ಬಗೆಬಗೆಯ ಫೋಟೋ ತೆಗೆಸಬೇಕು, ಮಗುವಿನ ಹಾಗೆ ಆಗಸಕ್ಕೆ ಮುಖಮಾಡಿ, ಬೀಳುವ ಹಿಮವನ್ನು ಕುಡಿಯಬೇಕು… ಹೀಗೆ, ಒಂದೇ ಎರಡೇ? ನೂರಾರು ಪುಟ್ಟಪುಟ್ಟ ಕನಸುಗಳು. ಸಾಮಾನ್ಯ ಮಧ್ಯಮವರ್ಗದ ಮಂದಿಗೆ ಇಂತಹ ಒಂದು ಪ್ರವಾಸವನ್ನು ಮಾಡಲೂ ಕೂಡಾ ಸಾಕಷ್ಟು ವರ್ಷಗಳ ಕನಸು ಕಾಣಬೇಕು, ಕಂಡ ಕನಸನ್ನು ನನಸಾಗಿಸಲು ಶ್ರಮಪಟ್ಟು ಕೆಲಸ ಮಾಡಬೇಕು, ಒಂದು ದಿನ ಕನಸನ್ನು ಸಾಕಾರಗೊಳಿಸಲು ಎಲ್ಲ ತಯಾರಿಯನ್ನೂ ಮಾಡಿ, ಹಿಮ ಬೀಳುವ ಕಾಲವನ್ನು ನೋಡಿ ಅಂಥ ಸಮಯದಲ್ಲಿ ಹೊರಟು ನಿಲ್ಲುವವರು ಕೆಲವು ಮಂದಿ. ಭಾರತದಲ್ಲಿ ಹಿಮದೂರಿನ ಕನಸು ಕಂಡರೆ, ಸಾಮಾನ್ಯವಾಗಿ ಎಲ್ಲರೂ ಹೊರಡುವುದು ಒಂದೋ ಮನಾಲಿಯೆಡೆಗೆ, ಇಲ್ಲವೇ ಕಾಶ್ಮೀರದ ಗುಲ್ಮಾರ್ಗ್‌ (Kashmir Travel) ಕಡೆಗೆ. ಆದರೆ, ಈ ಬಾರಿ ಹಿಮದೂರಿನ ಕನಸು ಕಂಡು ಜನವರಿ ತಿಂಗಳಲ್ಲಿ ಹಿಮ ಸಿಕ್ಕೇ ಸಿಗುತ್ತದೆ ಎಂಬ ನೂರಾರು ಕನಸು ಕಂಡು ಕಾಶ್ಮೀರದ ಕಡೆಗೆ ಹೊರಟು ನಿಂತ ಮಂದಿಗೆ ನಿರಾಸೆ ಕಾದಿತ್ತು. ಯಾಕೆಂದರೆ, ಅತೀ ಹೆಚ್ಚು ಹಿಮ ಇರಬೇಕಾದ ಜನವರಿ ಮೊದಲ ವಾರದಲ್ಲಿ ಕಾಶ್ಮೀರದ ಗುಲ್ಮಾರ್ಗ್‌ ಒಣ ಭೂಮಿಯಂತೆ ಖಾಲಿ ಖಾಲಿ. ಒಂದಿಂಚು ಹಿಮವೂ ನೆಲದ ಮೇಲಿಲ್ಲ! ಆಸೆಯಿಟ್ಟು ಹೋದವರ ಪರಿಸ್ಥಿತಿ ಊಹಿಸಿ!

ಹೌದು, ಜಾಗತಿಕ ತಾಪಮಾನದ ಏರಿಕೆಯ ಪರಿಣಾಮವೋ ಎಂಬಂತೆ ಕಾಶ್ಮೀರ ಈ ಬಾರಿ ವಿಚಿತ್ರ ಹವಾಮಾನ ಬದಲಾವಣೆಯನ್ನು ಕಂಡಿದೆ. ಕಾಶ್ಮೀರದಲ್ಲಿ ಶೇ.79ರಷ್ಟು ಮಳೆ ಈ ಬಾರಿ ಕಡಿಮೆಯಾಗಿದ್ದೂ ಆಲ್ಲದೆ, ಡಿಸೆಂಬರ್‌ನಲ್ಲಿ ಅತ್ಯಂತ ಕಡಿಮೆ ಹಿಮ ಸುರಿದಿದೆ. ಸ್ಕೀಯಿಂಗ್‌ ಮಾಡುವ ಹಂಬಲದಲ್ಲಿ ವರ್ಷವೂ ಕಾಶ್ಮೀರಕ್ಕೆ ಸಾವಿರಾರು ಮಂದಿ ಕೇವಲ ಸ್ಕೀಯಿಂಗ್‌ ಕಲಿಯುವ ಉದ್ದೇಶದಿಂದಲೂ ಬರುತ್ತಾರೆ. ಈ ಬಾರಿ ಅವರ ಪಾಲಿಗೂ ನಿರಾಸೆ.

ಭಾರತದ ಅತ್ಯಂತ ಸುಂದರ ಜಾಗಗಳಲ್ಲಿ ಒಂದಾದ ಗುಲ್ಮಾರ್ಗ್‌ ಎಂಬ ತಾಣವನ್ನು ಈಗ ಹಿಮಬೀಳುವ ಸಮಯದಲ್ಲಿ ಹಿಮವಿಲ್ಲದೆ ಖಾಲಿಯಾಗಿ ಒಣಕಲಾಗಿ ಬರಡಾಗಿ ನೋಡಿದರೆ, ಯಾರಿಗಾದರೂ ಎದೆ ಒಡೆದು ಹೋದೀತು. ಹಲವಾರು ವರ್ಷಗಳು ಕನಸು ಕಂಡು ಒಮ್ಮೆ ಕಾಶ್ಮೀರದ ಸೌಂದರ್ಯವನ್ನು ನೋಡಲು ಪ್ರವಾಸ ಹೊರಟಾಗ, ಹಿಮ ನೋಡುವ ಅದೃಷ್ಟ ಸಿಗದಿದ್ದರೆ ಹೇಗಾದೀತು ಹೇಳಿ!

ಸಮುದ್ರಮಟ್ಟದಿಂದ ಸುಮಾರು 8694 ಅಡಿ ಎತ್ತರದಲ್ಲಿರುವ ಗುಲ್ಮಾರ್ಗ್‌ ಚಳಿಗಾಲ ಬಂದಾಕ್ಷಣ ಪೋಸ್ಟರ್‌ನ ಹಾಗೆ ಬದಲಾಗಿಬಿಡುತ್ತದೆ. ಅತತ ರಮಣೀಯವಾಗಿ ಕಾಣುವ ಗುಲ್ಮಾರ್ಗ್‌ ಚಳಿಗಾಲ ಕಳೆದು ವಸಂತ ಕಾಲ ಬರುತ್ತಿದ್ದ ಹಾಗೆ ಹಸಿರು ಹಸಿರಾಗಿ ಹೂಗಳಿಂದ ತುಂಬಿ ನಳನಳಿಸುತ್ತದೆ. ಹೀಗಾಗಿ ಗುಲ್ಮಾರ್ಗ್‌ ನಮ್ಮ ದೇಶದ ಅತ್ಯಂತ ರಮಣೀಯ ಸ್ಥಳಗಳ ಪೈಕಿ ಅಗ್ರಸ್ಥಾನದಲ್ಲಿದೆ ಎಂದರೂ ತಪ್ಪಿಲ್ಲ. ಆದರೆ, ಈ ಬಾರಿ ಮಾತ್ರ ಕೇವಲ ಗುಲ್ಮಾರ್ಗ್‌ ಮಾತ್ರವಲ್ಲ ಕಾಶ್ಮೀರದ ಎಲ್ಲ ಪ್ರೇಕ್ಷಣೀಯ ಸ್ಥಳಗಳಾದ ಸೋನ್‌ಮಾರ್ಗ್‌, ಪೆಹಲ್‌ಗಾಂ ಮತ್ತಿತರ ಪ್ರದೇಶಗಳೂ ಕೂಡಾ ಒಣಕಲಾಗಿದೆ.

ತಜ್ಞರು ಇದನ್ನು ಎಲ್‌ ನೈನೋ ಎಂದು ಹೆಸರಿಸಿದ್ದು, ಜಾಗತಿಕ ತಾಪಮಾನದಲ್ಲಾದ ಬದಲಾವಣೆಯೇ ಇದಕ್ಕೆ ಕಾರಣ ಎಂದಿದ್ದಾರೆ. ಕಾಶ್ಮೀರದ ಹವಾಮಾನ ಇಲಾಖೆ ಈ ಬಾರಿ ಡಿಸೆಂಬರ್‌ ಹಾಗೂ ಜನವರಿಯ ಒಂದು ವಾರ ಪೂರ್ತಿಯಾಗಿ ಯಾವುದೇ ಹಿಮ ಸುರಿಯದೆ ಒಣಕಲಾಗಿ ಇತ್ತು ಎಂದು ವರದಿ ಮಾಡಿದೆ. ಇದರಿಂದಾಗಿ ಈಗಾಗಲೇ ಬುಕ್‌ ಮಾಡಿರುವ ಸಾಕಷ್ಟು ಪ್ರವಾಸಿಗರು ತಮ್ಮ ಪ್ರವಾಸವನ್ನು ರದ್ದು ಮಾಡುತ್ತಿದ್ದು, ಇದು ನಿಜಕ್ಕೂ ಪ್ರವಾಸೋದ್ಯಮಕ್ಕೂ ಧಕ್ಕೆ ತರಲಿದೆ ಎಂದಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರಿ ಪಂಡಿತರ ಅಳಲು ಕೊನೆಯಾಗಲು ಹೊಸ ವಿಧೇಯಕ ನೆರವಾಗಲಿ

Exit mobile version