ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಮೇ 20ರಂದು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಸಂಚಾರ ಸೇರಿ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದ್ದು, ಅವುಗಳನ್ನು ಈಡೇರಿಸುವ ಉಮೇದಿಯಲ್ಲಿದೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿ ಹೆಣ್ಣುಮಕ್ಕಳು ಇದ್ದರೆ ಬಸ್ ಚಾಲಕರು ಬಸ್ ನಿಲ್ಲಿಸದೆ ಹೋಗುತ್ತಿರುವ ಪ್ರಕರಣಗಳು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿವೆ.
ಹೌದು, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಹೆಣ್ಣುಮಕ್ಕಳಿಗೆ ಉಚಿತ ಸಂಚಾರ ಸೌಲಭ್ಯ ನೀಡಿದೆ. ಹೆಣ್ಣುಮಕ್ಕಳು ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ. ಆದರೆ, ಇದನ್ನೇ ನೆಪವಾಗಿಸಿಕೊಂಡ ಸರ್ಕಾರಿ ಬಸ್‌ಗಳ ಚಾಲಕರು ಮಹಿಳೆಯರು ಜಾಸ್ತಿ ಇದರೆ, ಬಸ್ ನಿಲ್ದಾಣಗಳಲ್ಲಿಯೇ ಬಸ್ ನಿಲ್ಲಿಸದೆ ಹಾಗೆಯೇ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವಿಡಿಯೊ ವೈರಲ್ ಆಗಿದೆ.
ಬಸ್ ನಿಲ್ಲಿಸದ ವಿಡಿಯೊ ಇಲ್ಲಿದೆ
ಬಸ್ ಚಾಲಕ ಅಮಾನತು
ಹೆಣ್ಣುಮಕ್ಕಳು ಇರುವ ಕಡೆ ಬಸ್ ನಿಲ್ಲಿಸದ ವಿಡಿಯೊ ವೈರಲ್ ಆಗುತ್ತಲೇ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ. ಮೂವರು ಹೆಣ್ಣುಮಕ್ಕಳು ಬಸ್‌ಗಾಗಿ ಕಾಯುತ್ತ ನಿಂತಿದ್ದು, ಕೂಗಿದರೂ ಬಸ್ ನಿಲ್ಲಿಸದ ಕಾರಣ ಚಾಲಕನನ್ನು ಅಮಾನತು ಮಾಡಲಾಗಿದೆ.
ಕ್ರಮದ ಎಚ್ಚರಿಕೆ ನೀಡಿದ್ದ ಕೇಜ್ರಿವಾಲ್
ಹೆಣ್ಣುಮಕ್ಕಳು ಹೆಚ್ಚಿರುವ ಕಡೆ ಚಾಲಕರು ಬಸ್ ನಿಲ್ಲಿಸದೆ ಹೋಗುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕ್ರಮದ ಎಚ್ಚರಿಕೆ ನೀಡಿದ್ದರು. “ಹೆಣ್ಣುಮಕ್ಕಳು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾದ ಕಾರಣ ಅವರೇ ಹೆಚ್ಚಿರುವ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದಿರುವ ಪ್ರಕರಣಗಳು ಕಂಡುಬರುತ್ತಿವೆ. ಇದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬಸ್ ಚಾಲಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.
ಹೆಣ್ಣುಮಕ್ಕಳಿಗೆ ಅನುಕೂಲವಾಗಲಿ ಎಂದು ಸರ್ಕಾರವು ಅವರು ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸುವ ಅವಕಾಶ ನೀಡಿದೆ. ಕರ್ನಾಟಕದಲ್ಲೂ ಈ ಯೋಜನೆ ಜಾರಿಗೆ ಬರಲು ದಿನಗಣನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಚಾಲಕರು ಬಸ್ ನಿಲ್ಲಿಸದಿರುವ ಪ್ರಕರಣಗಳ ಕುರಿತು ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Chai GPT: ಚಾಟ್‌ಜಿಪಿಟಿ ಕೇಳಿದ್ದೀರಿ, ಚಾಯ್ ಜಿಪಿಟಿ ಕೇಳಿದ್ದೀರಾ? ಹೌದು, ಇಲ್ಲಿ ಎಐ ಸಿಗಲ್ಲ, ಚಾಯ್ ಸಿಗತ್ತೆ!