Site icon Vistara News

Khalistan Row: ಕೆನಡಾದಲ್ಲಿ ವಿಜಯದಶಮಿ ಉತ್ಸವ ಹಾಳುಗೆಡವಲು ಖಲಿಸ್ತಾನಿಗಳ ಸಂಚು

Khalistan Flag

ಒಟ್ಟಾವ: ಅಕ್ಟೋಬರ್ 24ರಂದು ಮಂಗಳವಾರ ಕೆನಡಾದ ಸರ್ರೆಯಲ್ಲಿ ಹಿಂದೂ ಸಮುದಾಯ ಆಯೋಜಿಸಿರುವ ವಿಜಯದಶಮಿ (Vijaya dashami) ಕಾರ್ಯಕ್ರಮವನ್ನು ಹಾಳಗೆಡವಲು ಖಲಿಸ್ತಾನಿ ಉಗ್ರರ (Khalistan terrorists) ಗುಂಪುಗಳು ಯೋಜಿಸುತ್ತಿವೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿದೆ.

ಖಲಿಸ್ತಾನವನ್ನು ಬೆಂಬಲಿಸುವ ವ್ಯಕ್ತಿಗಳು ಮತ್ತು ಗುಂಪುಗಳು ಹಿಂದೂಗಳ ಕಾರ್ಯಕ್ರಮಕ್ಕೆ ಅಡ್ಡಿಯುಂಟುಮಾಡಲು ಯೋಜಿಸುತ್ತಿದ್ದಾರೆ. ಅಕ್ಟೋಬರ್ 28ರಂದು ನಿಜ್ಜರ್‌ ಹತ್ಯೆ ವಿರೋಧಿಸಿ ಖಲಿಸ್ತಾನ್‌ ಪರ ಜನಾಭಿಪ್ರಾಯ ಸಂಗ್ರಹಕ್ಕಾಗಿ ಸರ್ರೆಯಲ್ಲಿ ರ್ಯಾಲಿ ರೂಪಿಸಲಾಗಿದೆ. ಅದಕ್ಕೆಂದು ಈಗಾಗಲೇ ಜಮಾಯಿಸಿರುವ ಪ್ರತಿಭಟನಾಕಾರರನ್ನು ದೊಡ್ಡ ವಾಹನಗಳಲ್ಲಿ ತಂದು ವಿಜಯ ದಶಮಿ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡುವುದು ಇವರ ಯೋಜನೆಯಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ (Hardeep singh Nijjar) ಹತ್ಯೆಗೆ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಹೊಣೆಗಾರ ಎಂಬ ಬಗ್ಗೆ ಮತದಾನ ಮಾಡಲು ಅಕ್ಟೋಬರ್ 28ರಂದು ವ್ಯಾಂಕೋವರ್‌ನಲ್ಲಿ ಜನಾಭಿಪ್ರಾಯ ಸಂಗ್ರಹಣೆಗಾಗಿ ಕೆನಡಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥರು ಕೆನಡಾದ ಸಿಖ್ಖರನ್ನು ಒತ್ತಾಯಿಸಿದ್ದಾರೆ. ಮೂಲಗಳ ಪ್ರಕಾರ ಖಲಿಸ್ತಾನಿಗೂ ಅಂದು ಪ್ರಮುಖ ಭಾರತೀಯ ನಾಯಕರ ಪ್ರತಿಕೃತಿಗಳನ್ನು ದಹಿಸುವ ಮೂಲಕ ಹಿಂದೂಗಳು ಮತ್ತು ಭಾರತೀಯರಿಗೆ ಅವಮಾನ ಉಂಟುಮಾಡಲು ಯೋಜಿಸುತ್ತಿದ್ದಾರೆ.

ಮತ್ತೊಂದು ಖಲಿಸ್ತಾನಿ ಪರ ಪ್ರದರ್ಶನಕ್ಕಾಗಿ ಇಟಲಿ, ಜರ್ಮನಿ, ಯುಎಸ್ಎ ಮತ್ತು ಯುಕೆಗಳಿಂದ ಸಿಖ್ಖರು ವ್ಯಾಂಕೋವರ್‌ನಲ್ಲಿ ಜಮಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಅವರ ಲೀಡರ್‌ ಅಮೃತಬೀರ್ ಸಿಂಗ್ ಚೀಮಾ ಎಂಬಾತ. ಜಲಂಧರ್ ಮೂಲದ ಚೀಮಾ ಪಂಜಾಬ್‌ನಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಗ್ಯಾಂಗ್‌ಸ್ಟರ್.‌ 2015ರಿಂದ ಕೆನಡಾದಲ್ಲಿದ್ದು, ಕಾಯಂ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ʼಇದು ಭಾರತ ಮತ್ತು ಸಿಖ್ಖರ ನಡುವಿನ ವಿಚಾರ. ಕೆನಡಾ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಕ್ತವಾಗಿಟ್ಟಿದೆʼ ಎಂದು ಅಲ್ಲಿನ ಸರ್ಕಾರ ಹೇಳಿದೆ.

1984ರ ನಂತರ ಜನಿಸಿದ ಯುವ ಸಿಖ್ಖರನ್ನು ಮೂಲಭೂತವಾದಿಗಳಾಗಿಸಲು ಖಲಿಸ್ತಾನಿ ಗುಂಪುಗಳು ರೇಡಿಯೊ ಕೇಂದ್ರಗಳನ್ನು ಬಳಸುತ್ತಿವೆ. ರೇಡಿಯೊ ಪಂಜಾಬ್ ವ್ಯಾಂಕೋವರ್ ಎಂಬ ರೇಡಿಯೊ ಸ್ಟೇಷನ್ ಪ್ರತಿದಿನ ಎರಡು ಗಂಟೆಗಳ ಕಾರ್ಯಕ್ರಮ ಇದಕ್ಕಾಗಿಯೇ ಮೀಸಲಿಟ್ಟಿದೆ. ಕೆನಡಾಕ್ಕೆ, ಉತ್ತರ ಅಮೆರಿಕಕ್ಕೆ ವಲಸೆ ಹೋಗುವಂತೆ ಸಿಖ್ ಯುವಕರನ್ನು ಆಕರ್ಷಿಸುವ ಮತ್ತು ಸುಲಭವಾಗಿ ಪ್ರಭಾವಿಸುವ ಖಲಿಸ್ತಾನಿ ಬೆಂಬಲಿಗರಿದ್ದಾರೆ. ಇವರು ವೀಸಾಗಳಿಗೆ ಪ್ರಾಯೋಜಕತ್ವ ನೀಡುತ್ತಾರೆ. ಹಾಗೆ ಬಂದವರನ್ನು ಖಲಿಸ್ತಾನ್ ಸಂಬಂಧಿತ ಕೆಲಸಕಾರ್ಯಕ್ಕೆ ಪ್ರಚೋದಿಸುತ್ತಾರೆ.

ಇದನ್ನೂ ಓದಿ: Khalistan Row: ಕೆನಡಾದಲ್ಲಿ ಭಾರತೀಯ ರಾಯಭಾರಿಗಳ ಕೊಲೆ ಬೆದರಿಕೆ ಪೋಸ್ಟರ್‌ಗಳು ಮತ್ತೆ ಪ್ರತ್ಯಕ್ಷ, ಟ್ರುಡೊ ಮೌನ

Exit mobile version