ಒಟ್ಟಾವ: ಕೆನಡಾದ ಟೊರೊಂಟೊದಲ್ಲಿ ಭಾನುವಾರ (ಏಪ್ರಿಲ್ 28) ಸಿಖ್ ಸಮುದಾಯದವರು ಆಯೋಜಿಸಿದ್ದ ಖಾಲ್ಸಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಅವರು ಭಾಷಣ ಮಾಡುವ ವೇಳೆ ಖಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ (Pro Khalistan Slogan) ಕೂಗಿರುವುದಕ್ಕೆ ಭಾರತ (India Canada Row) ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದ ಡೆಪ್ಯುಟಿ ಹೈ ಕಮಿಷನರ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಮನ್ಸ್ ಜಾರಿ ಮಾಡಿದೆ.
“ಜಸ್ಟಿನ್ ಟ್ರುಡೋ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಿರುವುದು ಆತಂಕಕಾರಿಯಾಗಿದೆ. ಇದರ ಕುರಿತು ಭಾರತ ಕಳವಳ ವ್ಯಕ್ತಪಡಿಸುತ್ತದೆ. ಪ್ರಧಾನಿ ಕಾರ್ಯಕ್ರಮದಲ್ಲಿಯೇ ಇಂತಹ ಅಪಸವ್ಯಗಳು ನಡೆದಿರುವುದು ನಿಜಕ್ಕೂ ಗಂಭೀರ ಪ್ರಕರಣವಾಗಿದೆ. ಇಂತಹ ಪ್ರಕರಣಗಳಿಂದ ಕೆನಡಾದ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕವಾದ, ತೀವ್ರವಾದ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ” ಎಂದು ಸಮನ್ಸ್‌ನಲ್ಲಿ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.
A day is not far when Khalistan will be created in Canada…
— Pratheesh Viswanath (@pratheesh_Hind) April 29, 2024
All the best @JustinTrudeau !!! pic.twitter.com/SAC4lgzqDM
“ಖಲಿಸ್ತಾನ ಪರ ಘೋಷಣೆಗಳನ್ನು ಕೂಗುವುದು ಭಾರತ ಹಾಗೂ ಕೆನಡಾ ಸಂಬಂಧದ ಮೇಲೆ ಪರಿಣಾಮ ಬೀರುವ ಜತೆಗೆ ಕೆನಡಾದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಕೆನಡಾದಲ್ಲಿ ಹಿಂಸಾತ್ಮಕ ವಾತಾವರಣ ನಿರ್ಮಿಸಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ” ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು, ಜಸ್ಟಿನ್ ಟ್ರುಡೋ ಅವರು ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಾಗ, “ಕೆನಡಾದಲ್ಲಿ ಖಲಿಸ್ತಾನಿಗಳನ್ನು ನಿಗ್ರಹಿಸಿ” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದರು. ಇದರಿಂದಾಗಿ ಕೆನಡಾ ಮುನಿಸಿಕೊಂಡಿದ್ದು, ಎರಡೂ ದೇಶಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜಸ್ಟಿನ್ ಟ್ರುಡೋ, ಕೆನಡಾ ದೇಶಾದ್ಯಂತ ಸಿಖ್ ಪರಂಪರೆಯ ಸುಮಾರು 800,000 ಕೆನಡಿಯನ್ನರಿಗೆ, ನಿಮ್ಮ ಹಕ್ಕುಗಳು ಮತ್ತು ನಿಮ್ಮ ಸ್ವಾತಂತ್ರ್ಯಗಳನ್ನು ರಕ್ಷಿಸಲು ನಾವು ಯಾವಾಗಲೂ ಇರುತ್ತೇವೆ. ದ್ವೇಷ ಮತ್ತು ತಾರತಮ್ಯದ ವಿರುದ್ಧ ನಿಮ್ಮ ಸಮುದಾಯವನ್ನು ನಾವು ಯಾವಾಗಲೂ ರಕ್ಷಿಸುತ್ತೇವೆ ಎಂದು ಟ್ರುಡೊ ಹೇಳಿದರು. ಸಮುದಾಯ ಕೇಂದ್ರಗಳು ಮತ್ತು ಗುರುದ್ವಾರಗಳಂತಹ ಪೂಜಾ ಸ್ಥಳಗಳಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗುತ್ತದೆ. ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸುತ್ತೇವೆ ಎಂದು ಕೆನಡಾದ ಪ್ರಧಾನಿ ಉಲ್ಲೇಖಿಸಿದರು.
ನಿಮ್ಮ ಧರ್ಮವನ್ನು ಮುಕ್ತವಾಗಿ ಮತ್ತು ಬೆದರಿಕೆಯಿಲ್ಲದೆ ಆಚರಿಸುವ ನಿಮ್ಮ ಹಕ್ಕು ಕೆನಡಾದಲ್ಲಿ ಖಾತ್ರಿಯಿದೆ. ನಿಮ್ಮ ಮೂಲಭೂತ ಹಕ್ಕುಗಳನ್ನು ನಾವು ರಕ್ಷಿಸುತ್ತೇವೆ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಹ್ಯಾಪಿ ಬೈಸಾಖಿ! ವಹೇಗುರು ಜಿ ಕಾ ಖಾಲ್ಸಾ ವಹೇಗುರು ಜಿ ಕಿ ಫತೇಹ್” ಎಂದು ಟ್ರುಡೋ ಹೇಳಿದ್ದಾರೆ.
ಇದನ್ನೂ ಓದಿ: Student Death: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ