ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಮತ್ತು ಡಿಜಿಪಿ ಗೌರವ್ ಯಾದವ್ ಅವರನ್ನು ಕೊಲ್ಲುವುದಾಗಿ ಖಲಿಸ್ತಾನಿ ಭಯೋತ್ಪಾದಕ (Khalistan Terrorist), ಸಿಖ್ಸ್ ಫಾರ್ ಜಸ್ಟಿಸ್ (SFJ) ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆ ಹಾಕಿದ್ದಾನೆ.
ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದಂದು ಸಿಎಂ ಮಾನ್ ಮೇಲೆ ದಾಳಿ ಮಾಡಲು ಒಟ್ಟಾಗುವಂತೆ ಪನ್ನುನ್, ಇತರ ಖಲಿಸ್ತಾನಿ ಗ್ಯಾಂಗ್‌ಸ್ಟರ್‌ಗಳಿಗೆ ಕರೆ ನೀಡಿದ್ದಾನೆ. ಒಂದು ವಾರದ ಹಿಂದೆ ಈತ, ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಶಂಕುಸ್ಥಾಪನೆ ಸಮಾರಂಭದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಾಗಿ ಬೆದರಿಕೆ ಹಾಕಿದ್ದ.
ʼಬಾಬರಿ ಮಸೀದಿಯನ್ನು ನಾಶ ಮಾಡಿ ನಿರ್ಮಿಸಲಾದ ಸಮಾರಂಭವನ್ನು ವಿರೋಧಿಸಿʼ ಎಂದು ಕೂಡ ಈತ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾನೆ. ಹತರಾದ ಸಾವಿರಾರು ಮುಸ್ಲಿಮರ ದೇಹಗಳ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ ಎಂದಿದ್ದಾನೆ ಆತ. ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಪನ್ನುನ್ ʼಮುಸ್ಲಿಮರ ಜಾಗತಿಕ ಶತ್ರುʼ ಎಂದು ಕರೆದಿದ್ದಾನೆ.
ಪಂಜಾಬ್‌ನಲ್ಲಿ ದರೋಡೆಕೋರರ ವಿರುದ್ಧ ಸರ್ಕಾರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳಿಂದಾಗಿ ಖಲಿಸ್ತಾನಿ ಉಗ್ರರು ದಿಕ್ಕಾಪಾಲಾಗಿ ಚದುರಿಹೋಗಿದ್ದು, ಚಳವಳಿಯ ಕಾವು ಕಾಪಾಡಿಕೊಳ್ಳಲು ಹೆಣಗುತ್ತಿದ್ದಾರೆ. ಪಂಜಾಬ್ ಪೊಲೀಸರು ದರೋಡೆಕೋರರ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಹತಾಶೆಯಿಂದ ಪನ್ನುನ್ ಬೆದರಿಕೆಗಳು ಬರುತ್ತಿವೆ ಎನ್ನಲಾಗಿದೆ.
“ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭವು ಅತ್ಯಂತ ಅಪವಿತ್ರ, ಅನಾಚಾರದ, ಅಧರ್ಮದ ಸಮಾರಂಭವಾಗಿದೆ. ಜನವರಿ 22 ಮುಸ್ಲಿಮರ ವಿರುದ್ಧ ಮೋದಿಯವರ ಆಪರೇಷನ್ ಬ್ಲೂಸ್ಟಾರ್ ಆಗಿದೆʼʼ ಎಂದು ಈತ ಕಿಡಿ ಕಾರಿದ್ದಾನೆ.
ಪ್ರತ್ಯೇಕ ಖಲಿಸ್ತಾನ್‌ಗಾಗಿ ಜನಾಭಿಪ್ರಾಯ ಸಂಗ್ರಹವನ್ನು ಪ್ರಾರಂಭಿಸುವ ಪನ್ನುನ್ ಪ್ರಯತ್ನ ವಿಫಲವಾಗಿದೆ. ನಂತರ ಮುಂಬಯಿ ಸರಣಿ ಸ್ಫೋಟದ 31ನೇ ವಾರ್ಷಿಕ ನೆನಪಿನ ದಿನವಾದ 2024ರ ಮಾರ್ಚ್ 12ರಂದು ಮುಂಬಯಿ ಸ್ಟಾಕ್ ಎಕ್ಸ್‌ಚೇಂಜ್ ಅನ್ನು ಗುರಿಯಾಗಿಸಿಕೊಂಡು ಆರ್ಥಿಕ ದಾಳಿ ನಡೆಸಲು ಕರೆ ನೀಡಿದ್ದಾನೆ. ಮಾರ್ಚ್ 12ರ ಮೊದಲು ಭಾರತೀಯ ಷೇರುಗಳನ್ನು ಕೈಬಿಡಲು ಮತ್ತು ಅಮೆರಿಕನ್ ಷೇರುಗಳನ್ನು ಖರೀದಿಸಲು ಕರೆ ನೀಡಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮಾಡುವ ಬ್ಯಾಂಕುಗಳು ಮತ್ತು ಕಾರ್ಪೊರೇಟ್‌ಗಳನ್ನು ಗುರಿ ಮಾಡಿಕೊಂಡಿದ್ದಾನೆ.
ಇದಕ್ಕೂ ಮೊದಲು ಪನ್ನುನ್ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ ಬೆದರಿಕೆ ಹಾಕಿದ್ದ. ಡಿಸೆಂಬರ್ 30ರಂದು ಪ್ರಧಾನಿಯವರ ಅಯೋಧ್ಯೆ ರೋಡ್‌ಶೋ ಅನ್ನು ಹಾಳುಗೆಡಹುವಂತೆ ಮುಸ್ಲಿಮರನ್ನು ಪ್ರಚೋದಿಸಲು ಯತ್ನಿಸಿದ್ದ.
ಇದನ್ನೂ ಓದಿ: ಪನ್ನುನ್ ಕೊಲೆ ಸಂಚು: ಭಾರತದ ಸುಪ್ರೀಂ ಕೋರ್ಟ್ ಬಗ್ಗೆ ಝೆಕ್ ಸರ್ಕಾರ ಹೇಳಿದ್ದೇನು?