Site icon Vistara News

Khalistan Terrorists: ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಾಲಯ ವಿರೂಪ, ಭಾರತ ತೀವ್ರ ಖಂಡನೆ

khalistan vandalism

ಕ್ಯಾಲಿಫೋರ್ನಿಯಾ: ಕೆನಡಾ ಆಯ್ತು, ಆಸ್ಟ್ರೇಲಿಯಾ ಆಯ್ತು, ಈಗ ಅಮೆರಿಕದಲ್ಲೂ ಖಲಿಸ್ತಾನಿ ಉಗ್ರರು (Khalistan Terrorists) ತಮ್ಮ ಕೈವಾಡ ತೋರಲು ಆರಂಭಿಸಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿನ ಹಿಂದೂ ದೇವಾಲಯಕ್ಕೆ (Hindu Temple) ಖಲಿಸ್ತಾನಿ ಉಗ್ರರು ಹಾನಿ ಮಾಡಿದ್ದಾರೆ.

ನೆವಾರ್ಕ್‌ನ ಸ್ವಾಮಿನಾರಾಯಣ ಮಂದಿರ (SwamiNarayana Mandir) ವಸನಾ ಸಂಸ್ಥೆಯ ಹೊರಭಾಗದ ಗೋಡೆಗಳ ಮೇಲೆ ಭಾರತವಿರೋಧಿ, ಖಲಿಸ್ತಾನಿ ಪರ ಘೋಷಣೆಗಳನ್ನು ಗೀಚಿ ವಿರೂಪಗೊಳಿಸಲಾಗಿದೆ. ಗೋಡೆಗಳ ಮೇಲೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ದ್ವೇಷಪೂರಿತ ಘೋಷಣೆಗಳನ್ನು ಬರೆಯಲಾಗಿದೆ. ಇದರ ಚಿತ್ರಗಳನ್ನು ಹಿಂದೂ ಅಮೇರಿಕನ್ ಫೌಂಡೇಶನ್ ಸೋಶಿಯಲ್‌ ಮೀಡಿಯಾ Xನಲ್ಲಿ ಹಂಚಿಕೊಂಡಿದೆ.

ಗೋಡೆ ಮೇಲೆ ಗೀಚಲಾದ ಬರಹಗಳಲ್ಲಿ ಹಿಂದೆ ಹತನಾದ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಹೆಸರನ್ನು ಉಲ್ಲೇಖಿಸಿದೆ. “ಹಿಂದೂಗಳನ್ನು ಕೊಲೆ ಮಾಡಿದ ಖಲಿಸ್ತಾನ್ ಭಯೋತ್ಪಾದಕ ಭಿಂದ್ರನ್‌ವಾಲೆಯ ಉಲ್ಲೇಖದ ಉದ್ದೇಶವು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಆಘಾತವನ್ನುಂಟುಮಾಡಲು ಮತ್ತು ಹಿಂಸಾಚಾರದ ಭಯವನ್ನು ಸೃಷ್ಟಿಸಲೆಂದೇ ಆಗಿದೆ. ಇದು ದ್ವೇಷದ ಅಪರಾಧ” ಎಂದು ಹಿಂದೂ ಅಮೇರಿಕನ್ ಫೌಂಡೇಶನ್ ಎಕ್ಸ್‌ನಲ್ಲಿ ಬರೆದಿದೆ.

ಈ ಘಟನೆಯನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ (Indian Consulate) ಕಚೇರಿ ಕಠಿಣ ಶಬ್ದಗಳಲ್ಲಿ ಖಂಡಿಸಿದೆ. “ನೆವಾರ್ಕ್‌ನಲ್ಲಿರುವ ಸ್ವಾಮಿನಾರಾಯಣ ಮಂದಿರವನ್ನು ಹಾನಿಗೆಡವಿರುವ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಭಾರತೀಯ ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿದೆ. ಅಮೆರಿಕ ಅಧಿಕಾರಿಗಳು ಈ ಕೂಡಲೇ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಹೇಳಿದೆ. ಇದನ್ನು ಎನ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಘಟನೆಯನ್ನು ʼದ್ವೇಷದ ಅಪರಾಧʼ ಎಂದು ತನಿಖೆ ಮಾಡುವಂತೆ ಫೌಂಡೇಶನ್ ನೆವಾರ್ಕ್ ಪೊಲೀಸರನ್ನು ಒತ್ತಾಯಿಸಿದೆ. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ನೆವಾರ್ಕ್ ಪೊಲೀಸರು ಭರವಸೆ ನೀಡಿದ್ದಾರೆ.

ಇಂತಹ ದ್ವೇಷದ ಅಪರಾಧಗಳ ಘಟನೆಗಳು ಅಮೆರಿಕದಲ್ಲಿ ಹಲವಾರು ಬಾರಿ ದಾಖಲಾಗಿವೆ. ಯುಎಸ್ ಮತ್ತು ಕೆನಡಾದಲ್ಲಿ ಇವು ಹೆಚ್ಚುತ್ತಿವೆ. ಆಗಸ್ಟ್‌ನಲ್ಲಿ, ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಕಾರ್ಯಕರ್ತರು ದೆಹಲಿಯಲ್ಲಿ ನಡೆದ G20 ಶೃಂಗಸಭೆಗೆ ಮುಂಚಿತವಾಗಿ ಖಲಿಸ್ತಾನ್ ಪರ ಗೀಚುಬರಹದೊಂದಿಗೆ ಐದು ಮೆಟ್ರೋ ನಿಲ್ದಾಣಗಳನ್ನು ವಿರೂಪಗೊಳಿಸಿದರು. ಎಸ್‌ಎಫ್‌ಐ ದೆಹಲಿ ಮೆಟ್ರೋ ಸ್ಟೇಷನ್‌ಗಳಲ್ಲಿ ʼದೆಹಲಿ ಬನೇಗಾ ಖಲಿಸ್ತಾನ್’ ಮತ್ತು ʼಖಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಬರೆಯಲಾಗಿತ್ತು. ಈ ಪ್ರಕರಣದಲ್ಲಿ ಸೆಪ್ಟೆಂಬರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಎರಡು ತಿಂಗಳ ನಂತರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಅಮೆರಿಕದಲ್ಲಿ ನೆಲೆಸಿರುವ ಖಲಿಸ್ತಾನ್‌ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌, ಭಾರತದ ವಿರುದ್ಧ ಹಾಗೂ ಹಿಂದೂಗಳ ವಿರುದ್ಧ ಹಿಂಸಾಚಾರ ಎಸಗುವಂತೆ ಸಿಕ್ಖರಿಗೆ ಕರೆ ನೀಡುತ್ತಲೇ ಇದ್ದಾನೆ. ಈತ ಕೆನಡಾದಲ್ಲಿ ಪೌರತ್ವ ಹೊಂದಿದ್ದಾನೆ. ಇತ್ತೀಚೆಗೆ ಈತನನ್ನು ಕೊಲ್ಲಲು ಸಂಚು ಹೂಡಿದ ಆರೋಪದಲ್ಲಿ ನಿಖಿಲ್‌ ಗುಪ್ತಾ ಎಂಬ ಭಾರತೀಯ ವ್ಯಕ್ತಿಯನ್ನು ಝೆಕ್‌ ಗಣರಾಜ್ಯದಲ್ಲಿ ಬಂಧಿಸಲಾಗಿದೆ.

ಇದನ್ನೂ ಓದಿ: Narendra Modi: ಖಲಿಸ್ತಾನಿ ನಾಯಕ ಪನ್ನುನ್ ಹತ್ಯೆ ಸಂಚು; ಪ್ರಧಾನಿ ಮೋದಿ ಹೇಳಿದ್ದೇನು?

Exit mobile version