Site icon Vistara News

ಗುರುದ್ವಾರಕ್ಕೆ ಭೇಟಿ ನೀಡಿದ ಭಾರತದ ರಾಯಭಾರಿ ಮೇಲೆ ದಾಳಿ ಮಾಡಿದ ಖಲಿಸ್ತಾನಿಗಳು!

Taranjith Singh Sandhu

Khalistani provocation, an Indian envoy visiting Gurudwara attacked by mob in New York City

ನ್ಯೂಯಾರ್ಕ್‌: ಭಾರತದ ಪಂಜಾಬ್‌, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಖಲಿಸ್ತಾನಿ ಉಗ್ರರು (Khalistani Terrorists) ಹಾಗೂ ಅವರ ಬೆಂಬಲಿಗರ (Khalistani Terrorists) ಉಪಟಳ ದಿನೇದಿನೆ ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ನ್ಯೂಯಾರ್ಕ್‌ನಲ್ಲಿ ಗುರುದ್ವಾರಕ್ಕೆ ಭೇಟಿ ನೀಡಿದ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು (Taranjit Singh Sandhu) ಅವರ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದಾರೆ.

ತರಣ್‌ಜಿತ್‌ ಸಿಂಗ್‌ ಸಂಧು ಅವರು ನ್ಯೂಯಾರ್ಕ್‌ನ ಲಾಂಗ್‌ ಐಲ್ಯಾಂಡ್‌ನಲ್ಲಿರುವ ಗುರುದ್ವಾರಕ್ಕೆ ತೆರಳಿದ್ದಾರೆ. ಸಿಖ್ಖರ ಗುರುಪೂರಬ್‌ ಹಿನ್ನೆಲೆಯಲ್ಲಿ ಅವರು ಗುರುದ್ವಾರಕ್ಕೆ ತೆರಳಿದ್ದಾರೆ. ಸ್ಥಳೀಯ ಸಿಖ್‌ ಮುಖಂಡರೊಂದಿಗೆ ಆಚರಣೆಗಾಗಿ ಅವರು ತೆರಳಿದ್ದರು. ಇದೇ ವೇಳೆ ಕೆಲ ಖಲಿಸ್ತಾನಿ ಬೆಂಬಲಿಗರು ಅವರನ್ನು ಅಡ್ಡಹಾಕಿದ್ದಾರೆ. ಇದೇ ವೇಳೆ ತಳ್ಳಾಟವೂ ನಡೆದಿದೆ. ತರಣ್‌ಜಿತ್‌ ಸಿಂಗ್‌ ಸಂಧು ಅವರು ವಾಹನದಲ್ಲಿ ತೆರಳುವಾಗ ಖಲಿಸ್ತಾನಿ ಧ್ವಜ ಪ್ರದರ್ಶಿಸುವ ಜತೆಗೆ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಿದ್ದಾರೆ. ಈ ವಿಡಿಯೊ ಈಗ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿವೆ.

ದಾಳಿ ನಡೆಸಲು ಕಾರಣವೇನು?

ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆಲ ತಿಂಗಳ ಹಿಂದಷ್ಟೇ ಕೆನಡಾ ಆರೋಪಿಸಿತ್ತು. ಈ ಆರೋಪವನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿತ್ತು ಹಾಗೂ ಸಾಕ್ಷ್ಯ ಕೊಡಿ ಎಂದು ಕೇಳಿತ್ತು. ಅಲ್ಲದೆ, ತರಣ್‌ಜಿತ್‌ ಸಿಂಗ್‌ ಸಂಧು ಅವರು ಕೂಡ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಮಾತನಾಡಿದ್ದಾರೆ. ಕೆನಡಾ ಆರೋಪಗಳಿಗೆ ತಿರುಗೇಟು ನೀಡಿದ್ದರು. ಇದೇ ಕಾರಣಕ್ಕಾಗಿ ಖಲಿಸ್ತಾನಿಗಳು ತರಣ್‌ಜಿತ್‌ ಸಿಂಗ್‌ ಸಂಧು ಅವರ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, “ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ನೀವೇ ಕಾರಣ. ನೀವೇ ಸಂಚು ಮಾಡಿ ಹತ್ಯೆ ಮಾಡಿದ್ದೀರಿ” ಎಂದು ಕೂಡ ಖಲಿಸ್ತಾನಿಗಳು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಕೆನಡಾ ಖಲಿಸ್ತಾನಿ ಉಗ್ರ ಅರ್ಶ್‌ ದಲ್ಲಾ ಗ್ಯಾಂಗ್‌ನ ಇಬ್ಬರು ಶೂಟರ್‌ಗಳ ಬಂಧನ

ತರಣ್‌ಜಿತ್‌ ಸಿಂಗ್‌ ಸಂಧು ಅವರ ಮೇಲೆ ದಾಳಿ ನಡೆದಿರುವುದನ್ನು ಭಾರತದ ವಿದೇಶಾಂಗ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದೆ. ಹಾಗೆಯೇ, ಅಮೆರಿಕದಲ್ಲಿರುವ ಭಾರತದ ರಾಯಭಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಅಮೆರಿಕವನ್ನು ಒತ್ತಾಯಿಸಿದೆ. ಭಾರತದಲ್ಲಿ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸೋಮವಾರವಷ್ಟೇ (ನವೆಂಬರ್‌ 27) ಕೆನಡಾ ಖಲಿಸ್ತಾನಿ ಉಗ್ರ ಅರ್ಶ್‌ದೀಪ್‌ ಸಿಂಗ್‌ ದಲ್ಲಾ (ಆರ್ಶ್‌ ದಲ್ಲಾ) ಗ್ಯಾಂಗ್‌ನ ಇಬ್ಬರು ಶೂಟರ್‌ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಶೂಟರ್‌ಗಳನ್ನು ಬಂಧಿಸಿದ್ದಾರೆ.

Exit mobile version