ಒಟ್ಟಾವ: ಕೆನಡಾದಲ್ಲಿ ಹಿಂದುಗಳ ಮೇಲೆ ಖಲಿಸ್ತಾನಿ ಉಗ್ರರು (Khalistani Terrorists), ಮೂಲಭೂತವಾದಿಗಳ ದಾಳಿ ಮುಂದುವರಿದಿದೆ. ಟೊರೊಂಟೊ ಹೊರವಲಯದ ಮಿಸ್ಸಿಸ್ಸೌಗ ಪಟ್ಟಣದಲ್ಲಿ ಹಿಂದುಗಳು ದೀಪಾವಳಿ (Deepavali 2023) ಆಚರಣೆ ಮಾಡುವ ವೇಳೆ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಮೇಲೆ ಕಲ್ಲು ತೂರಾಟ ಮಾಡುವ, ಖಲಿಸ್ತಾನಿ ಧ್ವಜ ಹಾರಿಸಿ ಉದ್ಧಟತನ ಮಾಡಿರುವ ವಿಡಿಯೊ (Viral Video) ಈಗ ಲಭ್ಯವಾಗಿದೆ.
ಕೆನಡಾದ ಟೊರೊಂಟೊ ಸೇರಿ ಹಲವೆಡೆ ಹಿಂದುಗಳು ಸಡಗರ-ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ, ಮಿಸ್ಸಿಸ್ಸೌಗ, ಬ್ರ್ಯಾಂಪ್ಟನ್ ಸೇರಿ ಕೆಲವೆಡೆ ಹಿಂದುಗಳು ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವಾಗ ಖಲಿಸ್ತಾನಿ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳ ಆಚರಣೆಗೆ ಅಡ್ಡಿಪಡಿಸುವ ಜತೆಗೆ ಕಲ್ಲು ತೂರಾಟ ಮಾಡಿದ್ದಾರೆ. ಖಲಿಸ್ತಾನಿ ಧ್ವಜ ಹಾರಿಸಿದ ಅವರು ಭಾರತ ವಿರೋಧಿ ಘೋಷಣೆಗಳನ್ನೂ ಕೂಗಿದ್ದಾರೆ ಎಂದು ತಿಳಿದುಬಂದಿದೆ.
Westwood Mall #Malton 📍 pic.twitter.com/eFGmoEaSpQ
— Hussein E (@therealhebrahim) November 13, 2023
ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ ಬಳಿಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹಲವು ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಹಾಗೆಯೇ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದೆಲ್ಲ ಆರೋಪಿಸಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಭಾರತ ಸರ್ಕಾರವು ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕೆನಡಾದಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಸ್ಫೋಟಕ್ಕೆ ಸಂಚು; ಭಾರತ ಆಗ್ರಹಿಸಿದ ಬಳಿಕ ತನಿಖೆಗೆ ಕೆನಡಾ ಆದೇಶ
ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಪನ್ನುನ್ ಎಚ್ಚರಿಕೆ
ನವೆಂಬರ್ 19ರಂದು ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದಾನೆ. ನವೆಂಬರ್ 4ರಂದು ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೊ ಪೋಸ್ಟ್ ಮಾಡಿದ್ದ. “ನವೆಂಬರ್ 19ರಂದು ಸಿಖ್ಖರು ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು. ಅಂದು ಏರ್ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದ. ನವೆಂಬರ್ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ. ಭಾರತದ ಆಗ್ರಹದ ಬಳಿಕ ಈ ಕುರಿತು ತನಿಖೆ ನಡೆಸಲಾಗುವುದು ಎಂದು ಕೆನಡಾ ತಿಳಿಸಿದೆ.