ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ನಡೆಯುವ ಜಿ 20 ಸಭೆಗೆ (G20 Summit 2023) ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಂದ ಹಿಡಿದು ಜಿ 20 ರಾಷ್ಟ್ರಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದ್ಧೂರಿ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಭಾರತದಲ್ಲಿ ಸಭೆ ನಡೆಯುತ್ತಿರುವ ಹಾಗೂ ಭಾರತವೇ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಕಾರಣ ಜಗತ್ತಿನ ದೃಷ್ಟಿ ಭಾರತದ ಮೇಲಿದೆ. ಇದರ ಬೆನ್ನಲ್ಲೇ, ಜಿ 20 ಸಭೆಗೆ ಅಡ್ಡಿಪಡಿಸಿ ಎಂದು ಕಾಶ್ಮೀರಿ ಮುಸ್ಲಿಮರಿಗೆ ಖಲಿಸ್ತಾನ ಪರ ನಾಯಕ, ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆ ಸಂಸ್ಥಾಪಕ ಗುರ್‌ಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಕರೆ ನೀಡಿದ್ದಾನೆ.
“ಕಾಶ್ಮೀರದ ಮುಸ್ಲಿಮರು ದೆಹಲಿಯಲ್ಲಿ ನಡೆಯುವ ಜಿ 20 ಶೃಂಗಸಭೆಗೆ ಅಡ್ಡಿಪಡಿಸಬೇಕು. ಶುಕ್ರವಾರದ ಪ್ರಾರ್ಥನೆ ಬಳಿಕ ದೆಹಲಿಯಲ್ಲಿರುವ ಪ್ರಗತಿ ಮೈದಾನಕ್ಕೆ (ಶೃಂಗಸಭೆ ನಡೆಯುವ ಸ್ಥಳ) ಪರೇಡ್ ನಡೆಸಬೇಕು” ಎಂದು ಕರೆ ನೀಡಿದ್ದಾನೆ. ಅಷ್ಟೇ ಅಲ್ಲ, ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನ ಧ್ವಜ ಹಾರಿಸುವುದಾಗಿಯೂ ಗುರ್‌ಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದಾನೆ.
ದೆಹಲಿ ಮೆಟ್ರೋ ಗೋಡೆ ವಿರೂಪಗೊಳಿಸಿದ್ದ ಖಲಿಸ್ತಾನಿಗಳು
ಕೆಲ ದಿನಗಳ ಹಿಂದಷ್ಟೇ ಖಲಿಸ್ತಾನ ಪರ ಹೋರಾಟಗಾರರು ದೆಹಲಿ ಮೆಟ್ರೋ ನಿಲ್ದಾಣಗಳ ಗೊಡೆಗಳನ್ನು ವಿರೂಪಗೊಳಿಸಿದ್ದರು. ದೆಹಲಿಯ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ “ದೆಹಲಿಯನ್ನು ಪ್ರತ್ಯೇಕ ಖಲಿಸ್ತಾನ ರಾಷ್ಟ್ರವನ್ನಾಗಿ ಮಾಡುತ್ತೇವೆ”, “ಖಲಿಸ್ತಾನ ರೆಫರೆಂಡಮ್ ಜಿಂದಾಬಾದ್” ಸೇರಿ ಹಲವು ಘೋಷಣೆಗಳನ್ನು ಬರೆಯಲಾಗಿದೆ. ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ, ಉದ್ಯೋಗ ನಗರ ಹಾಗೂ ಮಹಾರಾಜ ಸೂರಜ್‌ಮಾಲ್ ಸ್ಟೇಡಿಯಂ ಮೆಟ್ರೋ ನಿಲ್ದಾಣಗಳ ಗೋಡೆಗಳನ್ನು ಬರಹಗಳ ಮೂಲಕ ವಿರೂಪಗೊಳಿಸಲಾಗಿದೆ.
ಇದನ್ನೂ ಓದಿ: Canada Hindu Temple: ಕೆನಡಾದಲ್ಲಿ ಮತ್ತೊಂದು ಹಿಂದು ದೇಗುಲ ಮೇಲೆ ಖಲಿಸ್ತಾನಿಗಳ ದಾಳಿ; ಖಂಡಿಸಿದ ಹಿಂದುಗಳು
ವಿಶ್ವದ ಪ್ರಮುಖ ನಾಯಕರೆಲ್ಲರೂ ಪಾಲ್ಗೊಳ್ಳಲಿರುವ ಈ ಸಭೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು 1,30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 80 ಸಾವಿರ ದಿಲ್ಲಿ ಪೊಲೀಸರು ಇರಲಿದ್ದಾರೆ. ದಿಲ್ಲಿ ಪೊಲೀಸ್ ಮತ್ತು ಕೇಂದ್ರ ಭದ್ರತಾ ಪಡೆಗಳು ಸುಮಾರು 45 ಸಾವಿರ ಭದ್ರತಾ ಸಿಬ್ಬಂದಿ ಖಾಕಿ ವೇಷದಲ್ಲಿ ಇರದೇ ನೀಲಿ ಯೂನಿಫಾರ್ಮ್‌ನಲ್ಲಿ ಇರಲಿದ್ದಾರೆ. ಈ 45 ಸಾವಿರ ಭದ್ರತಾ ಪಡೆಯಲ್ಲಿ ಕಮಾಂಡೋಗಳಿದ್ದು, ಅವರು ಹೆಲಿಕಾಪ್ಟರ್‌ಗಳಿಂದ ಇಳಿಯುವ ತರಬೇತಿ ಪಡೆದುಕೊಂಡಿದ್ದಾರೆ. ನಿಖರವಾದ ಚಾಲನಾ ಕೌಶಲ್ಯದೊಂದಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳಂತೆ ಕಾರ್ಯನಿರ್ವಹಿಸಲಿದ್ದಾರೆ. ಭಾರತವು ತನ್ನ ಅತಿಥಿಗಳನ್ನು ರಕ್ಷಿಸುವ ಕರ್ತವ್ಯವನ್ನು ಪೂರೈಸಲು ಇವರು ಸಹಾಯ ಮಾಡಲಿದ್ದಾರೆ.