Site icon Vistara News

ಅಮೆರಿಕದಲ್ಲಿ ಕೋಲ್ಕೊತಾ ಮೂಲದ ನೃತ್ಯಪಟು ಹತ್ಯೆ; ಭಾರತೀಯರ ಪ್ರಾಣಕ್ಕಿಲ್ಲವೇ ಬೆಲೆ?

Amarnath Ghosh

Kolkata dancer Amarnath Ghosh shot dead in US during evening walk

ವಾಷಿಂಗ್ಟನ್:‌ ಅಮೆರಿಕದಲ್ಲಿ ಭಾರತೀಯರಿಗೆ (Indians) ರಕ್ಷಣೆಯೇ ಇಲ್ಲದಂತಾಗಿದೆ. ಅದರಲ್ಲೂ, ಅಮೆರಿಕದಲ್ಲಿ ಅಧ್ಯಯನಕ್ಕೆಂದು ತೆರಳಿದ ಭಾರತದ ಹಲವು ವಿದ್ಯಾರ್ಥಿಗಳ ಹತ್ಯೆಯಾಗಿದೆ. ಇದರಿಂದಾಗಿ ಭಾರತದಲ್ಲಿರುವ ಪೋಷಕರು ಆತಂಕಕ್ಕೀಡಾಗಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕದಲ್ಲಿ ಕೋಲ್ಕೊತಾ ಮೂಲದ ಖ್ಯಾತ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯಪಟು ಅಮರ್‌ನಾಥ್‌ ಘೋಷ್‌ (Amarnath Ghosh) ಅವರು ಹತ್ಯೆಗೀಡಾಗಿದ್ದು, ಅಮೆರಿಕದಲ್ಲಿರುವ ಭಾರತೀಯರು ಭೀತಿಯಲ್ಲಿದ್ದಾರೆ.

ಮಿಸೌರಿಯಲ್ಲಿ ಅಮರ್‌ನಾಥ್‌ ಘೋಷ್‌ ಅವರು ಸಂಜೆ ವಾಯುವಿಹಾರಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಸೇಂಟ್‌ ಲೂಯಿಸ್‌ನಲ್ಲಿರುವ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಅಮರ್‌ನಾಥ್‌ ಘೋಷ್‌ ಅವರು ಮಾಸ್ಟರ್‌ ಆಫ್‌ ಫೈನ್‌ ಆರ್ಟ್ಸ್‌ (MFA) ಅಧ್ಯಯನ ಮಾಡುತ್ತಿದ್ದರು. ಇವರು ಸಂಜೆ ವಾಕಿಂಗ್‌ ಹೋಗಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಮರ್‌ನಾಥ್‌ ಘೋಷ್‌ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋಲ್ಕೊತಾ ಮೂಲದವರಾದ ಇವರು ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯದಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ.

ಅಮರ್‌ನಾಥ್‌ ಘೋಷ್‌ ನಿಧನದ ಕುರಿತು ಅವರ ಸ್ನೇಹಿತೆ, ನಟಿ ದೇವೋಲೀನಾ ಭಟ್ಟಾಚಾರ್ಜಿ ಅವರು ಮಾಹಿತಿ ನೀಡಿದ್ದಾರೆ. “ನನ್ನ ಸ್ನೇಹಿತ ಅಮರ್‌ನಾಥ್‌ ಘೋಷ್‌ ಅಮೆರಿಕದಲ್ಲಿ ಹತ್ಯೆಗೀಡಾಗಿದ್ದಾನೆ. ಆತನಿಗೆ ಒಂದೇ ಮಗು ಇದೆ. ಮೂರು ವರ್ಷಗಳ ಹಿಂದೆ ತಾಯಿ ತೀರಿಕೊಂಡಿದ್ದಾರೆ. ಅಮರ್‌ನಾಥ್‌ ಘೋಷ್‌ ಬಾಲ್ಯದಲ್ಲಿರುವಾಗಲೇ ತಂದೆ ಅಗಲಿದ್ದಾರೆ. ಅಮೆರಿಕದಲ್ಲಿ ಆತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಗೆಳೆಯರ ಹೊರತಾಗಿ ಕುಟುಂಬದಲ್ಲಿ ಯಾರೂ ಇಲ್ಲ. ಭಾರತದ ರಾಯಭಾರ ಕಚೇರಿ, ಪ್ರಧಾನಿ ಹಾಗೂ ಕೇಂದ್ರ ಸಚಿವರು ಆತನ ಶವವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡಬೇಕು ಎಂಬುದಾಗಿ ಕೋರುತ್ತೇನೆ” ಎಂದು ಭಟ್ಟಾಚಾರ್ಜಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Shoot Out: ಅಮೆರಿಕದಲ್ಲಿ ದುಷ್ಕರ್ಮಿಯ ಗುಂಡಿಗೆ ಬಲಿಯಾದ ಭಾರತ ಮೂಲದ ಸತ್ಯೆನ್ ನಾಯಕ್​

ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲೆ ದಾಳಿ, ಹತ್ಯೆಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಕೆಲ ತಿಂಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತದ ವರುಣ್‌ ರಾಜ್ ಎಂಬ ವಿದ್ಯಾರ್ಥಿ ಹತ್ಯೆಗೀಡಾಗಿದ್ದ. ವಾಲ್ಪರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ಓದುತ್ತಿದ್ದ ವರುಣ್‌ ರಾಜ್, ಅಕ್ಟೋಬರ್‌ 29ರಂದು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದ. ಇದೇ ವೇಳೆ ಜೋರ್ಡಾನ್‌ ಅಂಡ್ರಾಡೆ (24) ಎಂಬ ಯುವಕನು ಜಿಮ್‌ ಪ್ರವೇಶಿಸಿದ್ದ. ಜಿಮ್‌ ಪ್ರವೇಶಿಸಿದವನೇ ವರುಣ್‌ ರಾಜ್ ಪುಚಾನನ್ನು ಹುಡುಕಿ, ಆತನಿರುವ ಕಡೆ ತೆರಳಿ, ಆತನ ತಲೆಗೆ ಚಾಕು ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವರುಣ್‌ ರಾಜ್ ಪುಚಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವರುಣ್‌ ರಾಜ್ ಪುಚಾ ಮೃತಪಟ್ಟಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version