Site icon Vistara News

Kolkata Doctor Murder Case: ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಆರೋಪಿ ಸಿಬಿಐ ವಶಕ್ಕೆ

kolkata doctor murder case

ಕೋಲ್ಕತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಪ್ರಕರಣವನ್ನು ಹೈಕೋರ್ಟ್‌ ಸಿಬಿಐ(CBI Probe) ತನಿಖೆಗೆ ಆದೇಶಿಸಿರುವ ಬೆನ್ನಲ್ಲೇ ಸಿಬಿಐ ಆರೋಪಿಯನ್ನು ತನ್ನ ವಶಕ್ಕೆ ಪಡೆದಿದೆ. ಮತ್ತೊಂದೆಡೆ ಘಟನೆಯನ್ನು ಖಂಡಿಸಿ ಇಂದು ರಾತ್ರಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನ ಪ್ರತಿಭಟನೆ ನಡೆಸಲಿದ್ದಾರೆ.

ಬುಧವಾರ ಮಧ್ಯಾಹ್ನ, ಮಣಿಪಾಲ, ಮೆಡಿಕಾ, ಪೀರ್‌ಲೆಸ್ ಮತ್ತು ಆರ್‌ಎನ್ ಟ್ಯಾಗೋರ್ ಸೇರಿದಂತೆ ಕೋಲ್ಕತ್ತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್‌ನ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳು ಮುಕುಂದಪುರದಿಂದ ಬೃಹತ್‌ ಮೆರವಣಿಗೆ ಕೈಗೊಂಡರು.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೋಲ್ಕತಾ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ಆರಂಭದಲ್ಲಿಯೇ ಕೊಲೆ ಪ್ರಕರಣವನ್ನು ಏಕೆ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಗಿನ ಪ್ರಾಂಶುಪಾಲರಾದ ಡಾ ಸಂದೀಪ್ ಘೋಷ್ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಘೋಷ್ ಅವರು ರಾಜೀನಾಮೆ ನೀಡಿದ ಗಂಟೆಗಳ ನಂತರ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿ ಏಕೆ ನೇಮಕಗೊಂಡರು ಎಂದು ಪೀಠವು ರಾಜ್ಯ ಸರ್ಕಾರದ ವಕೀಲರನ್ನು ಪ್ರಶ್ನಿಸಿತು.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ; ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

Exit mobile version