Site icon Vistara News

ಕಣ್ಣು, ಬಾಯಿಯಿಂದ ರಕ್ತಸ್ರಾವ, ಕುತ್ತಿಗೆ ಮೂಳೆ ತುಂಡು: ಹತ್ಯೆಯಾದ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ

Kolkata Doctor Murder Case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯರೊಬ್ಬರ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆ ನಡೆಸಲಾಗಿದೆ. ಆರ್​ಜಿ ಕರ್ ಸರ್ಕಾರಿ ಆಸ್ಪತ್ರೆ (RG Kar Medical Hospital)ಯಲ್ಲಿನ ಟ್ರೈನಿ ವೈದ್ಯೆಯ ಮೇಲೆ ಈ ದೌರ್ಜನ್ಯ ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದ ಭಯಾನಕ ವಿಚಾರಗಳು ಒಂದೊಂದಾಗಿ ಹೊರ ಬೀಳತೊಡಗಿದೆ (Kolkata Doctor Murder Case).

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 31 ವರ್ಷದ ವೈದ್ಯೆಯ ದೇಹದಲ್ಲಿ ಅತೀ ಕ್ರೂರವಾಗಿ ಹಲ್ಲೆ ನಡೆಸಿದ್ದನ್ನು ಸೂಚಿಸುವ ಅನೇಕ ಗಾಯದ ಗುರುತುಗಳಿವೆ ಎನ್ನುವುದನ್ನು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ. ʼʼಸಂತ್ರಸ್ತೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವವಾಗಿತ್ತು. ಮುಖ ಮತ್ತು ಉಗುರುಗಳ ಮೇಲೆ ಗಾಯಗಳಾಗಿವೆ. ಸಂತ್ರಸ್ತೆಯ ಖಾಸಗಿ ಭಾಗಗಳಿಂದಲೂ ರಕ್ತಸ್ರಾವವಾಗಿದೆ. ಮಾತ್ರವಲ್ಲ ಹೊಟ್ಟೆ, ಎಡಗಾಲಿಗೆ ಗಾಯಗಳಾಗಿವೆ. ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು ತುಟಿ ಹೀಗೆ ಎಲ್ಲ ಅಂಗಗಳಲ್ಲಿಯೂ ಗಾಯದ ಗುರುತುಗಳಿವೆʼʼ ಎಂದು ಮೂಲಗಳು ತಿಳಿಸಿವೆ.

“ಇದು ಖಂಡಿತವಾಗಿಯೂ ಆತ್ಮಹತ್ಯೆಯಲ್ಲ. ಲೈಂಗಿಕ ದೌರ್ಜನ್ಯದ ನಂತರ ಕೊಲೆ ಮಾಡಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಆಕೆಯ ಕುತ್ತಿಗೆಯ ಮೂಳೆ ಕೂಡ ಮುರಿದಿರುವುದು ಕಂಡುಬಂದಿದೆ. ಸಂತ್ರಸ್ತೆಯ ಕತ್ತು ಹಿಸುಕಿ ನಂತರ ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಶವಪರೀಕ್ಷೆಯ ಸಂಪೂರ್ಣ ವರದಿಗಾಗಿ ನಾವು ಕಾಯುತ್ತಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಟಿಎಂಸಿ ಸರ್ಕಾರದ ವಿರುದ್ಧ ಆಕ್ರೋಶ

ಸದ್ಯ ಈ ಘಟನೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕೆಂದು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳು ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೆಂಡ ಕಾರಿವೆ. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಸಂತ್ರಸ್ತೆಯ ಕುಟುಂಬದ ಜತೆ ನಾನು ಮಾತನಾಡಿದ್ದು, ಸೂಕ್ತ ಕ್ರಮದ ಭರವಸೆಯನ್ನು ಅವರಿಗೆ ನೀಡಿದ್ದೇನೆ. ಪ್ರಕರಣದ ವಿಚಾರಣೆಯನ್ನು ಫಾಸ್ಟ್‌ಟ್ರ್ಯಾಕ್‌ ನ್ಯಾಯಾಲಯದಲ್ಲಿ ನಡೆಸಲು ನಿರ್ದೇಶನ ನೀಡಿದ್ದೇನೆ. ನಾನು ಮರಣದಂಡನೆ ಪರವಾಗಿ ಇಲ್ಲದಿದ್ದರೂ, ಅಗತ್ಯಬಿದ್ದರೆ ಆರೋಪಿಯನ್ನು ಗಲ್ಲಿಗೇರಿಸಲಾಗುತ್ತದೆ” ಎಂದು ಹೇಳಿದ್ದಾರೆ. ಪ್ರತಿಭಟನೆ ಹೆಸರಲ್ಲಿ ರೋಗಿಗಳನ್ನು ನಿರ್ಲಕ್ಷಿಸಬೇಡಿ ಎಂದೂ ಅವರು ಪ್ರತಿಭಟನಾನಿರತ ವೈದ್ಯರಿಗೆ ಮನವಿ ಮಾಡಿದ್ದಾರೆ.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.

ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ; ಇಬ್ಬರು ಯೋಧರು ಹುತಾತ್ಮ

Exit mobile version