ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ(Kolkata) ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಮಾಡಿದ ಆರೋಪಿ ಸಂಜೋಯ್ ರಾಯ್ ಆಸ್ಪತ್ರೆಯ ಉದ್ಯೋಗಿ ಅಲ್ಲ, ಆದರೆ ಕ್ಯಾಂಪಸ್‌ನ ಕಟ್ಟಡಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಎಂಬ ಸಂಗತಿ ತನಿಖೆ ವೇಳೆ ಇದೀಗ ಬೆಳಕಿಗೆ ಬಂದಿದೆ.
ಹಂತಕ ರಾಯ್ ಕೋಲ್ಕತ್ತಾ ಪೊಲೀಸರೊಂದಿಗೆ ನಾಗರಿಕ ಸ್ವಯಂಸೇವಕರಾಗಿ ಕೆಲಸ ಮಾಡಿದ್ದ. ನಾಗರಿಕ ಸ್ವಯಂಸೇವಕರು ಟ್ರಾಫಿಕ್ ನಿರ್ವಹಣೆ ಮತ್ತು ವಿಪತ್ತು ಪ್ರತಿಕ್ರಿಯೆ ಸೇರಿದಂತೆ ವಿವಿಧ ರೀತಿಯ ಕೆಲಸಗಳಲ್ಲಿ ಪೊಲೀಸರಿಗೆ ಸಹಾಯ ಮಾಡಲು ನೇಮಕಗೊಂಡ ಗುತ್ತಿಗೆ ಸಿಬ್ಬಂದಿಯಾಗಿದ್ದ. 2019 ರಲ್ಲಿ ಕೋಲ್ಕತ್ತಾ ಪೊಲೀಸರ ವಿಪತ್ತು ನಿರ್ವಹಣಾ ಗುಂಪಿಗೆ ಸ್ವಯಂಸೇವಕನಾಗಿ ಸೇವೆ ಸೇರಿಕೊಂಡಿದ್ದ ಎನ್ನಲಾಗಿದೆ.
ನಂತರ ಪೊಲೀಸ್ ಕಲ್ಯಾಣ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ. ಬಳಿಕ ಆತ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಹೊರಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಹೀಗಾಗಿ ಆ ಎಲ್ಲಾ ವಿಭಾಗಗಳಿಗೆ ಪ್ರವೇಶಕ್ಕೆ ಅನುಮತಿ ಆತನಿಗಿತ್ತು. ಇನ್ನು ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ರೋಗಿಗಳಿಂದ ಹೆಚ್ಚು ಹಣ ಪಡೆದು ಅದನ್ನು ನೀಡುವುದು ಹೀಗೆ ಹಲವು ದಂಧೆಗಳಲ್ಲಿ ಆತ ಭಾಗಿಯಾಗಿದ್ದ ಎನ್ನಲಾಗಿದೆ.
ಪಶ್ಚಾತ್ತಾಪ ಇಲ್ಲ, ಬೇಕಿದ್ದರೆ ಗಲ್ಲಿಗೇರಿಸಿ
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪೊಲೀಸರು ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ ಕೂಡಲೇ ರಾಯ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆತನಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಅಲ್ಲದೇ ನೀವು ಬಯಸಿದರೆ ನನ್ನನ್ನು ಗಲ್ಲಿಗೇರಿಸಿ” ಎಂದು ಅಸಡ್ಡೆಯಿಂದ ಉತ್ತರ ಕೊಟ್ಟಿದ್ದಾನೆ. ಇನ್ನು ಆತನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳಿಂದ ತುಂಬಿತ್ತು ಎಂದು ತಿಳಿದುಬಂದಿದೆ.
ಏನಿದು ಘಟನೆ?
ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ(West Bengal)ದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ದೆಹಲಿ ಏಮ್ಸ್(AIIMS) ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(FORDA) ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.