Site icon Vistara News

Kolkata Doctor murder case: 36 ಗಂಟೆಗಳ ಶಿಫ್ಟ್‌ನಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುವುದು ಅಮಾನವೀಯ- ಸುಪ್ರೀಂ ಅಭಿಪ್ರಾಯ

Kolkata Doctor murder case

Kolkata Doctor murder case

ನವದೆಹಲಿ: ವೈದ್ಯರನ್ನು 36 ಗಂಟೆಗಳ ಕಾಲ ನಿರಂತರವಾಗಿ ದುಡಿಸಿಕೊಳ್ಳುವುದು ಅಮಾನವೀಯ. ಈ ಬಗ್ಗೆ ಕ್ರಮ ಕೈಗೆತ್ತಿಕೊಳ್ಳುವಂತೆ ಕಾರ್ಯಪಡೆ(Task Force) ಎಂದು ಸುಪ್ರೀಂಕೋರ್ಟ್‌(Supreme Court) ಆದೇಶಿಸಿದೆ. ಕೋಲ್ಕತಾ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor murder case)ದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ದೇಶಾದ್ಯಂತ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ದೇಶಾದ್ಯಂತ ಇರುವ ವೈದ್ಯರ ಕರ್ತವ್ಯದ ಅವಧಿ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸಿದ್ದೇವೆ. ಕೆಲವು ವೈದ್ಯರು 36 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ. ನೇಮಕಗೊಂಡ 10ಮಂದಿ ಸದಸ್ಯರ ಕಾರ್ಯಪಡೆ ಈ ಬಗ್ಗೆ ತನಿಖೆ ನಡೆಸಿ ಎಲ್ಲಾ ವೈದ್ಯರ ಕರ್ತವ್ಯದ ಸಮಯವನ್ನು ಸುವ್ಯವಸ್ಥಿತಗೊಳಿಸಲು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಕೋಲ್ಕತ್ತಾ ಪೊಲೀಸರ ತನಿಖೆಯಲ್ಲಿನ ವಿಳಂಬ ಮತ್ತು ಸ್ಪಷ್ಟ ಅಕ್ರಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಅಸ್ವಾಭಾವಿಕ ಸಾವು ಎಂದು ಪ್ರಕರಣವನ್ನು ದಾಖಲಿಸಲು ಪೊಲೀಸರು ವಿಳಂಬ ಮಾಡಿರುವುದು “ಅತ್ಯಂತ ಗೊಂದಲದ ಸಂಗತಿ” ಎಂದು ನ್ಯಾಯಾಲಯ ಹೇಳಿದೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ

ಇನ್ನು ವೈದ್ಯೆ ಕೊಲೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಕ ಮಾಡಿದೆ. ಈ ಕಾರ್ಯಪಡೆಯಲ್ಲಿ ಸರ್ಜನ್‌ ವೈಸ್‌ ಅಡ್ಮಿರಲ್‌ ಆರ್‌.ಕೆ. ಸರಿನ್‌, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಶ್ವರ ರೆಡ್ಡಿ ಇದ್ದಾರೆ.

ಇದನ್ನೂ ಓದಿ: Kolkata Doctor murder case: ಕೋಲ್ಕತ್ತಾ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ- ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Exit mobile version