ಹೊಸದಿಲ್ಲಿ: ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಆವರಣದಲ್ಲಿರುವ ವಿವಾದಿತ ಭೂಮಿಯಲ್ಲಿನ ಶಾಹಿ ಈದ್ಗಾ (Sri Krishna Janmabhoomi – Shahi Idgah Masjid dispute) ಸರ್ವೇಗೆ ಅನುಮತಿ ನೀಡುವ ಆದೇಶವನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ (Supreme court) ನಿರಾಕರಿಸಿದೆ.
ಮಥುರಾದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಶಾಹಿ ಈದ್ಗಾ ಮಸೀದಿ ಕಮಿಟಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಗುರುವಾರ ಅಲಹಾಬಾದ್ ಹೈಕೋರ್ಟ್ ಆಯುಕ್ತರನ್ನು ನೇಮಿಸಿ ಶಾಹಿ ಈದ್ಗಾ ಸಂಕೀರ್ಣದ ಸಮೀಕ್ಷೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಸಮೀಕ್ಷೆಗಾಗಿ ವಕೀಲರ ಆಯೋಗದ ವಿಧಾನಗಳನ್ನು ಡಿಸೆಂಬರ್ 18ರಂದು ನಿರ್ಧರಿಸಲಾಗುತ್ತದೆ ಎಂದಿತ್ತು. ಶಾಹಿ ಈದ್ಗಾ ಮಸೀದಿ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮತ್ತು ವಕೀಲ ತನ್ವೀರ್ ಅಹ್ಮದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಏನಿದು ವಿವಾದ?
ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಹಾಗೂ ಇತರ 7 ಮಂದಿ ಮಸೀದಿಯ ಸರ್ವೇ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಹಿಂದೂ ದೇವಸ್ಥಾನವನ್ನು ಬೀಳಿಸಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಕಮಲದಳದ ಆಕಾರದಲ್ಲಿ ಕಂಬಗಳನ್ನು ನೋಡಿದರೆ ಹಿಂದೂ ದೇವಸ್ಥಾನ ಶೈಲಿ ಎನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೆ ಇದೇ ಕಂಬದಲ್ಲಿ ಹಿಂದೂ ದೇವಸ್ಥಾನ ಚಿಹ್ನೆಗಳು ಕಾಣುತ್ತಿದೆ. ಹೀಗಾಗಿ ಈದ್ಗಾ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.
ಭೂಮಿಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡವನ್ನು ತೆಗೆದುಹಾಕುವಂತೆ ಹೈಕೋರ್ಟ್ ಆದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. 1968ರ ಅಕ್ಟೋಬರ್ 12ರಂದು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಟ್ರಸ್ಟ್ ಶಾಹಿ ಮಸೀದಿ ಈದ್ಗಾ ನಡುವೆ ನಡೆದ ರಾಜಿ ಒಪ್ಪಂದವು ಕಾನೂನುಬಾಹಿರ ಎಂದೂ ಮನವಿಯಲ್ಲಿ ಹೇಳಲಾಗಿದೆ.
ವಿವಾದದ ಇತಿಹಾಸ
ವಿವಿಧ ಅರ್ಜಿದಾರರು ಮಥುರಾದ ನ್ಯಾಯಾಲಯಗಳಲ್ಲಿ ಕನಿಷ್ಠ ಒಂದು ಡಜನ್ ಪ್ರಕರಣಗಳನ್ನು ದಾಖಲಿಸಿದ್ದಾರೆ. 13.77 ಎಕರೆ ಸಂಕೀರ್ಣದಿಂದ ಮಸೀದಿಯನ್ನು ತೆಗೆದುಹಾಕಬೇಕೆಂಬ ಎಲ್ಲ ಅರ್ಜಿಗಳಲ್ಲಿ ಮನವಿ ಸಲ್ಲಿಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಅಲಹಾಬಾದ್ ಹೈಕೋರ್ಟ್ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಮೊಕದ್ದಮೆಗಳನ್ನು ತನಗೆ ವರ್ಗಾಯಿಸಿಕೊಂಡಿತ್ತು.
ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಇತ್ತೀಚೆಗೆ ಕೋರ್ಟ್ ಆದೇಶದ ಮೇರೆಗೆ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಪಕ್ಕದ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಪೂರ್ಣಗೊಳಿಸಿತ್ತು. ಇದೀಗ -ಶಾಹಿ ಈದ್ಗಾ ಸರ್ವೆಗೆ ಸೂಚಿಸಲಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಕುರಿತ ಒಂದು ಅರ್ಜಿಯನ್ನು ವಜಾಗೊಳಿಸಿತ್ತು. ದೇವಸ್ಥಾನದ ಮೇಲೆ ಮಸೀದಿ ಕಟ್ಟಲಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಸರ್ವೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಸದ್ಯ ಹೈಕೋರ್ಟ್‌ನಲ್ಲಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಜಯ ಸಿಕ್ಕಿದ್ದು, ಅದನ್ನು ಸುಪ್ರೀಂ ಕೋರ್ಟ್ ಕೂಡ ಮಾನ್ಯ ಮಾಡಿದೆ.
ಇದನ್ನೂ ಓದಿ: Allahabad High Court: ಮಥುರಾ ಕೃಷ್ಣ ಜನ್ಮ ಭೂಮಿ ಸರ್ವೇಗೆ ಹೈಕೋರ್ಟ್ ಅನುಮತಿ