ಮುಂಬೈ: ಜೆಕ್ ಗಣರಾಜ್ಯ ದೇಶದ ಕ್ರಿಸ್ಟಿನಾ ಪಿಸ್ಕೋವಾ 2024ನೇ ಆವೃತ್ತಿಯ ವಿಶ್ವ ಸುಂದರಿ (Miss World 2024)ಯಾಗಿ ಹೊರಹೊಮ್ಮಿದ್ದಾರೆ. ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್(Jio World Convention Centre in BKC, Mumbai)ನಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 71ನೇ ವಿಶ್ವ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡರು. ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ತಿಳಿಸಿದೆ.
Miss World 2024: Krystyna Pyszková of Czech Republic wins 71st Miss World Crown.#MissWorld2024 pic.twitter.com/SW05sHW6Qj
— The Power of Truth (@yogendra767) March 9, 2024
ಭವ್ಯ ಸಮಾರಂಭದಲ್ಲಿ ಕಳೆದ ಬಾರಿಯ ವಿಜೇತೆ ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಲೆಬನಾನ್ ನ ಯಾಸ್ಮಿನಾ ಜೈತೌನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಮಿಸ್ ವರ್ಲ್ಡ್ 2024 ರ ವಿಜೇತರನ್ನು ಬಹಿರಂಗಪಡಿಸುವ ಮೊದಲು ಅಂತಿಮ ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು. ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಭಾರತದ ಸಿನಿ ಶೆಟ್ಟಿ ಟಾಪ್ 8ರ ತನಕ ಸ್ಪರ್ಧಿಸಿದ್ದರು. ಆದರೆ ಅವರು ಟಾಪ್ 4 ಹಂತಕ್ಕೆ ತೇರ್ಗಡೆ ಹೊಂದಲು ವಿಫಲರಾದರು.
28 ವರ್ಷಗಳ ನಂತರ ಭಾರತಕ್ಕೆ ಆತಿಥ್ಯ
ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗ್ರೀಸ್‌ನ 19ರ ಹರೆಯದ ಐರಿನ್ ಸ್ಕ್ಲಿವಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಚಲನಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾವಾಲ, ಕ್ರಿಕೆಟಿಗ ಹರ್ಭಜನ್ ಸಿಂಗ್, ಪತ್ರಕರ್ತ ರಜತ್ ಶರ್ಮಾ, ಸಾಮಾಜಿಕ ಕಾರ್ಯಕರ್ತೆ ಅಮೃತಾ ಫಡ್ನವೀಸ್, ಬೆನೆಟ್, ಕೋಲ್ಮನ್ & ಕಂಪನಿ ಲಿಮಿಟೆಡ್‌ನ ಎಂಡಿ ವಿನೀತ್ ಜೈನ್, ಜೂಲಿಯಾ ಮಾರ್ಲೆ, ಜಮೀಲ್ ಸೈದಿ, ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ ಮತ್ತು ಮೂವರು ಮಾಜಿ ವಿಶ್ವ ಸುಂದರಿಯರು ತೀರ್ಪುಗಾರರಾಗಿದ್ದರು.
ಭಾರತ ಇದುವರೆಗೆ 6 ವಿಶ್ವ ಸುಂದರಿ ಪಟ್ಟ ಗಳಿಸಿದೆ. ಮೊದಲ ಬಾರಿಗೆ ರೀಟಾ ಫರಿಯಾ 1966ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ನಂತರ ಐಶ್ವರ್ಯಾ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ.
ಕರ್ನಾಟಕ ಮೂಲದವರು
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ 23 ವರ್ಷದ ಸಿನಿ ಶೆಟ್ಟಿ ಎಂಟನೇ ಸುತ್ತಿನ ನಂತರ ಸ್ಪರ್ಧೆಯಿಂದ ಹೊರ ಬಿದ್ದಿದ್ದರು. ಇವರು ಮೂಲತಃ ಕರ್ನಾಟಕದವರು. 5 ಅಡಿ 9 ಇಂಚು ಎತ್ತರದ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಮುಂಬೈಯಲ್ಲಿ. ಅಕೌಂಟಿಂಗ್ ಮತ್ತು ಫೈನಾನ್ಸ್ ವಿಷಯದಲ್ಲಿ ಡಿಗ್ರಿ ಪಡೆದಿರುವ ಸಿನಿ ಶೆಟ್ಟಿ ಸಿಎಫ್‌ಎ ಪ್ರೊಫೆಷನಲ್ ಕೋರ್ಸ್ ಮಾಡುತ್ತಿದ್ದರು. ಇದರೊಂದಿಗೆ ಭರತನಾಟ್ಯ ಕಲಾವಿದೆ ಕೂಡ ಹೌದು. ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿರುವ ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
112 ಸ್ಪರ್ಧಿಗಳು
2024ರ ವಿಶ್ವ ಸುಂದರಿ ಸೊರ್ಧೆಯನ್ನು ‘ಬ್ಯೂಟಿ ವಿತ್ ಎ ಪರ್ಪಸ್’ ಥೀಮ್‌ನಲ್ಲಿ ಆಯೋಜಿಸಲಾಗಿತ್ತು. ಒಟ್ಟು 112 ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ 28 ಸ್ಪರ್ಧಿಗಳು ಆಫ್ರಿಕನ್ ರಾಷ್ಟ್ರಗಳಾದ ಅಂಗೋಲಾ, ಬೋಟ್ಸ್ವಾನಾ, ಕ್ಯಾಮರೂನ್, ಕೋಟ್ ಡಿ ಐವರಿ, ಈಕ್ವೆಟೋರಿಯಲ್ ಗಿನಿಯಾ, ಇಥಿಯೋಪಿಯಾ, ಘಾನಾ, ಗಿನಿಯಾ, ಗಿನಿಯಾ ಬಿಸ್ಸಾವ್, ಕೀನ್ಯಾ, ಲೆಸೊಥೊ, ಲೈಬೀರಿಯಾ, ಮಡಗಾಸ್ಕರ್, ಮಾರಿಷಸ್, ಮೊರಾಕೊ, ನಮೀಬಿಯಾ, ನೈಜೀರಿಯಾ, ಸೆನೆಗಲ್, ಸಿಯೆರಾ ಲಿಯೋನ್, ಸೊಮಾಲಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಸುಡಾನ್, ಟಾಂಜಾನಿಯಾ, ಟೋಗೊ, ಟುನೀಶಿಯಾ, ಉಗಾಂಡಾ, ಜಾಂಬಿಯಾ ಮತ್ತು ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ