Site icon Vistara News

Laila Khan Case: ನಟಿ ಲೈಲಾ ಖಾನ್‌ ಸೇರಿ 6 ಜನರ ಹತ್ಯೆ;‌ ನಟಿಯ ತಂದೆ ಪರ್ವೇಜ್‌ ತಕ್‌ಗೆ ಗಲ್ಲು ಶಿಕ್ಷೆ!

Laila Khan Case

Laila Khan Case: Mumbai Court Sentences Step-Father to Death For Murder of Actress, 5 Others

ಮುಂಬೈ: ಬಾಲಿವುಡ್‌ ನಟಿ, ವಫಾ, ಫರಾರ್‌ ಸಿನಿಮಾಗಳ ಖ್ಯಾತಿಯ ಲೈಲಾ ಖಾನ್‌ (Laila Khan Case) ಹಾಗೂ ಅವರ ಐವರು ಸಂಬಂಧಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು (Mumbai Court) ನಟಿಯ ಮಲ ತಂದೆ ಪರ್ವೇಜ್‌ ತಕ್‌ಗೆ (Parvez Tak) ಗಲ್ಲು ಶಿಕ್ಷೆ ವಿಧಿಸಿದೆ. ಆ ಮೂಲಕ 13 ವರ್ಷಗಳ ಪ್ರಕರಣಕ್ಕೆ ಮುಂಬೈ ನ್ಯಾಯಾಲಯವು ಅಂತ್ಯ ಹಾಡಿದೆ. ಆರೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಚಿನ್‌ ಪವಾರ್‌ ಅವರು ಆದೇಶ ಹೊರಡಿಸಿದ್ದಾರೆ. ಇವರು ಮೇ 9ರಂದು ವಿಚಾರಣೆ ಅಂತ್ಯಗೊಳಿಸಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು.

ಏನಿದು ಪ್ರಕರಣ?

2011ರ ಫೆಬ್ರವರಿಯಲ್ಲಿ ಮಹಾರಾಷ್ಟ್ರದ ನಾಶಿಕ್‌ ಜಿಲ್ಲೆಯ ಇಗಟ್‌ಪುರಿಯಲ್ಲಿರುವ ನಿವಾಸದಲ್ಲಿ ನಟಿ ಲೈಲಾ ಖಾನ್‌, ಲೈಲಾ ಖಾನ್‌ ತಾಯಿ ಸೆಲಿನಾ ಸೇರಿ ಆರು ಜನರನ್ನು ಪರ್ವೇಜ್‌ ತಕ್‌ ಸೇರಿ ಹಲವರು ಕೊಲೆ ಮಾಡಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೆಲಿನಾ ಸೇರಿ ಆರು ಮಂದಿಯನ್ನು ಹತ್ಯೆಗೈದು, ಫಾರ್ಮ್‌ಹೌಸ್‌ನಲ್ಲಿಯೇ ಸಮಾಧಿ ಮಾಡಲಾಗಿತ್ತು. ಜಮ್ಮು-ಕಾಶ್ಮೀರ ಪೊಲೀಸರು ಪರ್ವೇಜ್‌ ತಕ್‌ನನ್ನು ಬಂಧಿಸಿದ ಬಳಿಕವೇ ಫಾರ್ಮ್‌ಹೌಸ್‌ನಲ್ಲಿ ಲೈಲಾ ಖಾನ್‌ ಸೇರಿ ಎಲ್ಲರ ಶವಗಳು ಪತ್ತೆಯಾಗಿದ್ದವು.

ಕೊಲೆ ಮಾಡಲು ಏನು ಕಾರಣ?

ಸೆಲಿನಾ ಅವರಿಗೆ ಪರ್ವೇಜ್‌ ತಕ್‌ ಮೂರನೇ ಪತಿಯಾಗಿದ್ದ. ಸೆಲಿನಾ ತಕ್‌ ಅವರು ಶ್ರೀಮಂತರಾಗಿದ್ದ ಕಾರಣ, ಅವರಿಗೆ ಸಂಬಂಧಿಸಿದ ಎಲ್ಲ ಆಸ್ತಿಯನ್ನು ಹೊಡೆಯಲು ಪರ್ವೇಜ್‌ ತಕ್‌ ಕುತಂತ್ರ ಮಾಡುತ್ತಿದ್ದ. ಇದಕ್ಕಾಗಿ, ಅವರ ಜತೆ ಜಗಳವಾಡುತ್ತಿದ್ದ. ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ. ಆಸ್ತಿಗಾಗಿ ಜಗಳ ಕಾಯುತ್ತಿದ್ದ ಕಾರಣ ಪರ್ವೇಜ್‌ ತಕ್‌ನನ್ನು ಸೆಲಿನಾ ಅವರು ಮನೆಗೆಲಸದವನ ರೀತಿ ನೋಡುತ್ತಿದ್ದರು. ಮನೆಯಿಂದ ಈತನನ್ನು ದೂರವೇ ಇಟ್ಟಿದ್ದರು ಎಂದು ತಿಳಿದುಬಂದಿತ್ತು.

2011ರ ಫೆಬ್ರವರಿಯಲ್ಲಿ ಸೆಲಿನಾ ಸೇರಿ ಎಲ್ಲರನ್ನೂ ಕೊಲೆ ಮಾಡಲು ಪ್ಲಾನ್‌ ರೂಪಿಸಿದ್ದ. ಇದಕ್ಕಾಗಿ ಆತ ಹಲವರಿಗೆ ಹಣವನ್ನೂ ಕೊಟ್ಟು ಕರೆದುಕೊಂಡು ಹೋಗಿದ್ದ. ಮನೆಗೆ ಹೋದವನೇ, ಸೆಲಿನಾ ಅವರ ಜತೆ ಜಗಳವಾಡಿದ್ದಾನೆ. ಮೊದಲು ಸೆಲಿನಾ ಅವರನ್ನು ಕೊಂದ ಪರ್ವೇಜ್‌ ತಕ್‌, ಬಳಿಕ ಲೈಲಾ ಖಾನ್‌ ಸೇರಿ ಆರು ಮಂದಿಯನ್ನು ಕೊಂದು, ಅದೇ ಫಾರ್ಮ್‌ಹೌಸ್‌ನಲ್ಲಿ ಹೂತು ಹಾಕಿದ್ದ. ಕೆಲ ತಿಂಗಳ ಬಳಿಕ ಈತನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಫಾರ್ಮ್‌ಹೌಸ್‌ನಲ್ಲಿ ಪರಿಶೀಲನೆ ನಡೆಸಿದ್ದಾಗ ಆರೂ ಮಂದಿಯ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಇದನ್ನೂ ಓದಿ: Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

Exit mobile version