Site icon Vistara News

Lanka on fire: ದೇಶ ಬಿಟ್ಟು ಓಡಲು ಯತ್ನಿಸಿದ ರಾಜಪಕ್ಸ ಸೋದರನಿಗೆ ತಡೆ, ವಿಕ್ರಮ ಸಿಂಘೆಗೆ ಅಧ್ಯಕ್ಷ ಪಟ್ಟದ ಆಸೆ

Basil rajapaksa- Ranil vikramsinghe

ಕೊಲಂಬೊ: ಆರ್ಥಿಕ ಕುಸಿತ ಮತ್ತು ಅರಾಜಕತೆಯಿಂದ ತತ್ತರಿಸುತ್ತಿರುವ ಶ್ರೀಲಂಕಾದಲ್ಲಿ ಬದುಕು ಅಸ್ತವ್ಯಸ್ತವಾಗಿದೆ. ಹೀಗೆ ಕನಲಿದ ಕೆಂಡದಂತಿರುವ ಪರಿಸ್ಥಿತಿಯಲ್ಲೂ ರಾಜಕಾರಣಿಗಳು ಮಾತ್ರ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಲೇ ಇದ್ದಾರೆ. ಒಂದು ಕಡೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಿರಿಯ ಸಹೋದರ, ಮಾಜಿ ಹಣಕಾಸು ಮಂತ್ರಿ ಬಾಸಿಲ್‌ ರಾಜಪಕ್ಸ ಲಂಕಾ ಬಿಟ್ಟು ಹಾರಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಇನ್ನೊಂದು ಕಡೆ ಪ್ರಧಾನಿಯಾಗಿದ್ದ ರನಿಲ್‌ ವಿಕ್ರಮಸಿಂಘೆ ತಾನೇ ಅಧ್ಯಕ್ಷನಾಗುವ ಕನಸು ಕಾಣುತ್ತಿದ್ದಾರೆ.

ಸೋಮವಾರ ಸಂಜೆ ಬಾಸಿಲ್‌ ರಾಜಪಕ್ಸ ಅವರು ದುಬೈಗೆ ಹೋಗುವ ಎಮಿರೇಟ್ಸ್‌ ವಿಮಾನವನ್ನು ಹತ್ತಲು ಸಿದ್ಧರಾಗಿದ್ದರು. ಅದರೆ, ಕೊಲಂಬೋ ವಿಮಾನ ನಿಲ್ದಾಣದಲ್ಲೇ ಪ್ರತಿಭಟನಾಕಾರರು ಅವರನ್ನು ತಡೆದಿದ್ದಾರೆ. ಲಂಕಾ ಮಾತ್ರವಲ್ಲದೆ ಅಮೆರಿಕದ ನಾಗರಿಕ ಹಕ್ಕನ್ನೂ ಹೊಂದಿರುವ ಬಾಸಿಲ್‌ ರಾಜಪಕ್ಸ ವಿಮಾನ ನಿಲ್ದಾಣದ ಒಳಗೆ ಹೋಗಿ ಆಗಿತ್ತು. ಆದರೆ ಹೊರಗಡೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ವಲಸೆ ದಾಖಲೆಗಳನ್ನು ಕ್ಲಿಯರ್‌ ಮಾಡಲಿಲ್ಲ. ಹೀಗಾಗಿ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಬೇಕಾಯಿತು.

ಲಂಕಾದ ಈಗಿನ ಪರಿಸ್ಥಿತಿಗೆ ರಾಜಪಕ್ಸ ಕುಟುಂಬವೇ ಕಾರಣ ಎನ್ನುವುದು ಹೆಚ್ಚಿನವರ ಆರೋಪ. ಹೀಗಾಗಿ ಈ ಕುಟುಂಬದ ಯಾರೂ ಕೂಡಾ ವಿದೇಶಕ್ಕೆ ಹಾರದಂತೆ ನಾಗರಿಕರೇ ನಾನಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಅಧ್ಯಕ್ಷ ಗೊಟಬಯ ಅವರು ನೌಕಾಪಡೆಯ ಹಡಗೊಂದರ ಮೂಲಕ ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತಾದರೂ ಬಳಿಕ ಹೋಗಿಲ್ಲ ಎಂಬ ಸ್ಪಷ್ಟೀಕರಣ ನೀಡಲಾಗಿದೆ. ಮಹಿಂದಾ ರಾಜಪಕ್ಸ ಅವರ ಮೇಲೂ ಜನ ಕಣ್ಣಿಟ್ಟಿದ್ದಾರೆ. ಗೊಬಬಯ ರಾಜಪಕ್ಸ ಅವರು ಬುಧವಾರ (ಜುಲೈ ೧೩) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿದೆ.

ರನಿಲ್‌ ವಿಕ್ರಮ ಸಿಂಘೆಗೆ ಅಧ್ಯಕ್ಷತೆ ಆಸೆ
ಜುಲೈ ೨೦ರಂದು ಶ್ರೀಲಂಕಾದ ಅಧ್ಯಕ್ಷತೆಗಾಗಿ ಮತದಾನ ನಡೆಯಲಿದೆ ಎಂದು ಸಂಸತ್ತಿನ ಸ್ಪೀಕರ್‌ ಅಗಿರುವ ಮಹಿಂದಾ ಯಪಾ ಅಭಯವರ್ಧನ್‌ ಅವರು ಜುಲೈ ೧೧ರಂದು ನಡೆದ ಸಭೆಯಲ್ಲಿ ಪ್ರಕಟಿಸಿದ್ದಾರೆ. ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲದ ನಡುವೆಯೇ ಪ್ರಧಾನಿಯಾಗಿದ್ದು ರಾಜೀನಾಮೆ ನೀಡಿರುವ ರನಿಲ್‌ ವಿಕ್ರಮಸಿಂಘೆ ಅವರು ಉತ್ಸುಕತೆಯನ್ನು ತೋರಿದ್ದಾರೆ.

ಮಹಿಂದಾ ರಾಜಪಕ್ಸ ಅವರು ಜನಾಕ್ರೋಶಕ್ಕೆ ಹೆದರಿ ರಾಜಿನಾಮೆ ನೀಡಿದ ಬಳಿಕ ರಾಜಪಕ್ಸ ಕುಟುಂಬದ ಒತ್ತಾಸೆಯ ಮೇರೆಗೆ ದೇಶದ ಪ್ರಧಾನಿಯಾದ ರನಿಲ್‌ ವಿಕ್ರಮಸಿಂಘೆ ಅವರಿಗೆ ಈಗ ತಾನೇ ಅಧ್ಯಕ್ಷನಾಗುವ ಆಸೆಯಾಗಿದೆ. ಪ್ರಭಾವಶಾಲಿಯಾಗಿರುವ ರಾಜಪಕ್ಸ ಕುಟುಂಬ ತನಗೆ ಬೆಂಬಲವಾಗಿ ನಿಲ್ಲುತ್ತದೆ ಎನ್ನುವುದು ಅವರ ಆಶಯ.

ಆದರೆ, ದೇಶದಲ್ಲಿ ರಾಜಪಕ್ಸ ಕುಟುಂಬದ ವಿರುದ್ಧ ಆಕ್ರೋಶವಿರುವುದರಿಂದ ಅವರ ಆಸೆ ಈಡೇರುವುದು ಸ್ಪಲ್ಪ ಕಷ್ಟ. ಆದರೂ ಸರ್ವ ಪಕ್ಷ ಸರಕಾರ ರಚನೆ ಆದಾಗ ಅತಿ ಹೆಚ್ಚು ಸಂಸದರ ಬೆಂಬಲ ಪಡೆಯುವ ವ್ಯಕ್ತಿ ಅಧ್ಯಕ್ಷನಾಗಲು ಅವಕಾಶವಿದ್ದೇ ಇದೆ. ಇನ್ನೊಂದು ಆರ್ಥಿಕತೆ ಸಂಪೂರ್ಣವಾಗಿ ನಾಶವಾಗಿರುವ ದೇಶದ ಚುಕ್ಕಾಣಿ ಹಿಡಿಯಲು ಬೇರೆಯವರು ಕೂಡಾ ಮುಂದಾಗುವ ಸಾಧ್ಯತೆ ಕಡಿಮೆ ಇದೆ.

ಇದನ್ನೂ ಓದಿ| ಶ್ರೀಲಂಕಾದಲ್ಲಿ ಅಸ್ತಿತ್ವಕ್ಕೆ ಬರಲಿದೆ ಸರ್ವ ಪಕ್ಷಗಳ ಸರ್ಕಾರ; ಜು.20ಕ್ಕೆ ನೂತನ ಅಧ್ಯಕ್ಷರ ಆಯ್ಕೆ

Exit mobile version