Site icon Vistara News

Lanka on fire: ಮಾಲ್ಡೀವ್ಸ್‌ನಿಂದ ಸಿಂಗಪುರಕ್ಕೆ ಹಾರಿದ ಗೊಟಬಯ ರಾಜಪಕ್ಸ, ಅಲ್ಲಿಂದ ಸೌದಿ ಅರೇಬಿಯಾಗೆ

gotabaya Rajapaksa

ಮಾಲೆ: ಶ್ರೀಲಂಕಾದಿಂದ ತಪ್ಪಿಸಿಕೊಂಡಿರುವ, ಇನ್ನೂ ರಾಜೀನಾಮೆ ನೀಡದಿರುವ ʻಅಧ್ಯಕ್ಷʼ ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ನಿಂದ ಸಿಂಗಪುರಕ್ಕೆ ಹಾರಿದ್ದಾರೆ. ಅವರು ಅಲ್ಲಿಂದ ಮುಂದೆ ಸೌದಿ ಅರೇಬಿಯಾಗೆ ಹಾರಲಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಜುಲೈ ೯ರಂದು ಶ್ರೀಲಂಕಾದಲ್ಲಿ ಉಂಟಾದ ಭಾರಿ ದಂಗೆಗೆ ಹೆದರಿದ ಗೊಟಬಯ ರಾಜಪಕ್ಸ ಅವರು ಮಂಗಳವಾರ ರಾತ್ರೋರಾತ್ರಿ ಶ್ರೀಲಂಕಾವನ್ನು ಬಿಟ್ಟು ಪರಾರಿಯಾಗಿದ್ದ ಗೊಟಬಯ ಬುಧವಾರವಿಡೀ ಮಾಲ್ಡೀವ್ಸ್‌ನಲ್ಲಿದ್ದರು. ಶ್ರೀಲಂಕಾದ ಅಧ್ಯಕ್ಷರು ಎಂಬ ನೆಲೆಯಲ್ಲಿ ಮಾಲ್ಡೀವ್ಸ್‌ ಅವಕಾಶ ನೀಡಿದೆ ಎಂದು ಹೇಳಲಾಗಿದೆ. ಆದರೆ, ದೇಶದಲ್ಲಿ ರಕ್ಷಣೆ ನೀಡಿದ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಡುವೆ, ಗೊಟಬಯ ಅವರು ಮಾಲ್ಡೀವ್ಸ್‌ನಲ್ಲಿ ರಕ್ಷಣೆ ಪಡೆಯಲು ಬಂದಿಲ್ಲ, ಅವರು ಸಿಂಗಪುರಕ್ಕೆ ಹೋಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು.
ಗುರುವಾರ ಮುಂಜಾನೆಯೇ ಸೌದಿ ಏರ್‌ವೇಸ್‌ಗೆ ಸೇರಿದ ವಿಶೇಷ ವಿಮಾನ ಮಾಲ್ಡೀವ್ಸ್‌ ರಾಜಧಾನಿ ಮಾಲೆಗೆ ಬಂದಿದ್ದು, ರಾಜಪಕ್ಸ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರು ಆ ವಿಮಾನವನ್ನು ಏರಿದ್ದಾರೆ ಎಂದು ಮಾಲ್ಡೀವ್ಸ್‌ ಸರಕಾರ ಅಧಿಕೃತವಾಗಿ ತಿಳಿಸಿದೆ. ಅವರು ಅಲ್ಲಿಂದ ಮುಂದೆ ಸೌದಿ ಅರೇಬಿಯಾಕ್ಕೆ ಹಾರುವುದನ್ನೂ ಖಚಿತಪಡಿಸಿದೆ.

ರಾಜಪಕ್ಸ ಅವರು ಕಳೆದ ಶನಿವಾರ ದೊಡ್ಡ ಪ್ರಮಾಣದ ದಂಗೆ ಸೃಷ್ಟಿಯಾದ ಕೂಡಲೇ ವಿದೇಶಕ್ಕೆ ಹಾರಲು ಯತ್ನಿಸಿದ್ದರಾದರೂ ಅದು ಸಾಧ್ಯವಾಗಿರಲಿಲ್ಲ. ಸೋಮವಾರ ನಡೆಸಿದ ಮತ್ತೊಂದು ಪ್ರಯತ್ನವೂ ವಿಫಲವಾಗಿತ್ತು. ವಿಮಾನ ಮತ್ತು ನೌಕಾಪಡೆಯ ಹಡಗಿನ ಮೂಲಕ ಸಾಗುವ ಪ್ರಯತ್ನ ವಿಫಲವಾಗುತ್ತಿದ್ದಂತೆಯೇ ಅಧ್ಯಕ್ಷ ಪದವಿಯ ಜತೆಗೆ ಬರುವ ಸೇನಾ ಪರಮಾಧಿಕಾರವನ್ನು ಬಳಸಿಕೊಂಡು ಅವರು ಮಿಲಿಟರಿ ಯುದ್ಧ ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಹಾರಿದ್ದರು.

ಮುಂದಿನ ನಿಲ್ದಾಣ ಸೌದಿ
ರಾಜಪಕ್ಸ ಮತ್ತು ಕುಟುಂಬಿಕರು ಶ್ರೀಲಂಕಾ ಮಾತ್ರವಲ್ಲದೆ ಇನ್ನೂ ಕೆಲವು ದೇಶಗಳ ಪೌರತ್ವವನ್ನು ಪಡೆದಿದ್ದಾರೆ. ಉದಾಹರಣೆಗೆ ಗೊಟಬಯ ಅವರ ಸೋದರ, ಹಣಕಾಸು ಸಚಿವ ಬಾಸಿಲ್‌ ರಾಜಪಕ್ಸ ಅಮೆರಿಕ ಮತ್ತು ಸೌದಿಯ ಪೌರತ್ವ ಹೊಂದಿದ್ದರು. ಆವರು ಕೂಡಾ ದೇಶ ಬಿಟ್ಟು ಓಡಲು ಪ್ರಯತ್ನಿಸಿದ್ದರಾದರೂ ಅವರನ್ನು ಜನರೇ ತಡೆದಿದ್ದರು. ಹೀಗೆ ಗೊಟಬಯ ಅವರು ಕೂಡಾ ಬೇರೆ ದೇಶದ ಪೌರತ್ವವನ್ನು ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಅವರು ಮಾಲ್ಡೀವ್ಸ್‌, ಸಿಂಗಪುರದ ಮೂಲಕ ಸೌದಿಗೆ ಹಾರುತ್ತಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ನೀಡಿಲ್ಲ ಇನ್ನೂ
ದೇಶದಿಂದ ದೇಶಕ್ಕೆ ಹಾರುತ್ತಾ ತನ್ನ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಇನ್ನೂ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಇದರಿಂದಾಗಿ ದ್ವೀಪ ರಾಷ್ಟ್ರದಲ್ಲಿ ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿದೆ. ಸಾರ್ವಜನಿಕರು ಬೀದಿಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನೂ ಘೋಷಣೆ ಮಾಡಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಇಡೀ ದೇಶದಲ್ಲಿ ಮಿಲಿಟರಿ ಬಲವೇ ಎದ್ದು ಕಾಣುತ್ತಿದೆ.

ಇದನ್ನೂ ಓದಿ| Lanka on Fire | ಹಿಂಸಾಚಾರ ನಿಯಂತ್ರಣಕ್ಕೆ ಕಠಿಣ ಕ್ರಮ; ಹಂಗಾಮಿ ಅಧ್ಯಕ್ಷ ವಿಕ್ರಮ ಸಿಂಘೆ ಸೂಚನೆ

Exit mobile version